ಒಡಿಶಾದಲ್ಲಿ ಕಾರ್ಮಿಕರಿಗೆ ವಿಶೇಷ ಕೋವಿಡ್ ಪ್ಯಾಕೇಜ್ ಘೋಷಣೆ

ಒಡಿಶಾ,ಜು.10- ಮುಖ್ಯಮಂತ್ರಿ ನವಿನ್ ಪಟ್ನಾಯಕ್ ನೇತೃತ್ವದ ಸರ್ಕಾರ ಬಡವರಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯ ಕಾರ್ಮಿಕರಿಗೆ ಕೋವಿಡ್-19 ವಿಶೇಷ ಪ್ಯಾಕೇಜ್ ಭಾಗವಾಗಿ 352 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಒಟ್ಟು 32 ಲಕ್ಷ ಎಂಜಿಎನ್‍ಆರ್‍ಇಜಿಎಸ್ ನೌಕರರು ಈ ವಿಶೇಷ ಪ್ಯಾಕೇಜ್‍ನಲ್ಲಿ ಲಾಭ ಪಡೆಯಲಿದ್ದಾರೆ. ಅವರ ದಿನಗೂಲಿ ವೇತನದ ಜೊತೆಗೆ ಹೆಚ್ಚುವರಿಯಾಗಿ 50 ರೂ.ಗಳನ್ನು ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ಹೊರಡಿಸಿದ್ದು, ಏಪ್ರಿಯಿಂದ ಜೂನ್‍ವರೆಗೂ ಕೆಲಸ ಮಾಡಿರುವ ನೌಕರರಿಗೆ ವೇತನದ ಜೊತೆಗೆ ಹೆಚ್ಚುವರಿ 50 ರೂ. ನೀಡಲಾಗುತ್ತದೆ. ಇದು ಫಲಾನುಭವಿಗಳ ನೇರ ಖಾತೆಗೆ ಹಾಕಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಕಾರ್ಮಿಕರು 4,500 ರೂ.ನಂತೆ 32 ಕಾರ್ಮಿಕರು ವೇತನ ಪಡೆಯಲಿದ್ದಾರೆ ಎಂದು ತಿಳಿಸಿದೆ.

ವಿಡಿಯೋ ಸಂವಾದದಲ್ಲಿ ಮಾತನಾಡಿರುವ ಪಟ್ನಾಯಕ್, ಬಡಕಾರ್ಮಿಕರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ಈ ಕೋವಿಡ್ ವಿಶೇಷ ಪ್ಯಾಕೇಜ್‍ನಿಂದ ಅವರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರಾರಂಭಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸಿಎಂ ಕೈಗೊಂಡ ಕ್ರಮಗಳು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಒಡಿಶಾ ಪಂಚಾಯತಿ ರಾಜ್ ಸಚಿವ ಪ್ರತಾಪ್ ಜೆನಾ ಹೇಳಿದ್ದಾರೆ.

2020ರಲ್ಲಿ ಎಂಎನ್‍ಆರ್‍ಇಜಿಎ ಯೋಜನೆಯಡಿ ಒಡಿಶಾದಲ್ಲಿ ಒಟ್ಟು 20 ಕೋಟಿ ಕೆಲಸದ ದಿನಗಳನ್ನು ರಚಿಸಲಾಗಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ 7 ಕೋಟಿ ಕೆಲಸದ ದಿನಗಳನ್ನು ರಚಿಸಲಾಗಿದೆ ಮತ್ತು 2021 ರಲ್ಲಿ 25 ಕೋಟಿ ಕೆಲಸದ ದಿನಗಳ ಗುರಿಯನ್ನು ತಲುಪಲು ರಾಜ್ಯ ಸರ್ಕಾರ ನಿರೀಕ್ಷಿಸಿದೆ ಎಂದು ಮೂಲಗಳು ತಿಳಿಸಿವೆ.