ಚುನಾವಣಾ ಆಯೋಗದ ಅನುಮತಿಯಿಲ್ಲದೆ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ

Social Share

ಬೆಂಗಳೂರು,ಮಾ.16- ಇನ್ನು ಮುಂದೆ ಚುನಾವಣಾ ಆಯೋಗದ ಅನುಮತಿ ಪಡೆಯದೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಕೂಡದು ಎಂದು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ಟಿದೆ.

ಈ ಸಂಬಂಧ ರಾಜ್ಯ ಚುನಾವಣಾಕಾರಿ ಮನೋಜ್ಕುಮಾರ್ ಮೀನಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಪತ್ರ ಬರೆದಿದ್ದು, ಆಯೋಗದ ಅನುಮತಿ ಪಡೆಯದೆ ವರ್ಗಾವಣೆಗೊಳಿಸಿದರೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಶೀಘ್ರದಲ್ಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಿದ್ದು, ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮುಖ್ಯ ಚುನಾವಣಾಕಾರಿಯವರ ಸಹಮತಿ ಪಡೆಯದೆ ವರ್ಗಾವಣೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಮನೋಜ್ಕುಮಾರ್ ಮೀನಾ ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡುವಾಗ ಮುಖ್ಯ ಚುನಾವಣಾಕಾರಿಯವರ ಸಹಮತಿ ಪಡೆಯಬೇಕೆಂದು ನಿರ್ದೇಶನ ನೀಡಿದ್ದರೂ ಇತ್ತೀಚೆಗೆ ನಮ್ಮ ನಿರ್ದೇಶನ ಪಡೆಯದೆ ಹಲವಾರು ಇಲಾಖೆಗಳ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂಬುದನ್ನು ಮನೋಜ್ಕುಮಾರ್ ಮೀನಾ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ.

ಇನ್ನು ಮುಂದೆ ಚುನಾವಣಾಕಾರಿಗಳ ಗಮನಕ್ಕೆ ತಾರದೆ ವರ್ಗಾವಣೆಗೊಳಿಸಿದರೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ತತ್ಕ್ಷಣವೇ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಮನೋಜ್ಕುಮಾರ್ ಮೀನಾ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಮನವಿ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಹುತೇಕ ಮಾಚ್ ತಿಂಗಳ ಅಂತ್ಯಕ್ಕೆ ದಿನಾಂಕ ನಿಗದಿಯಾಗಲಿದ್ದು, ಅಂದೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಸಾಮಾನ್ಯವಾಗಿ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಒಂದು ತಿಂಗಳ ಮುನ್ನ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಾದರೆ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಆದರೆ ಇತ್ತೀಚೆಗೆ ಸರ್ಕಾರ ದಿನಂಪ್ರತಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಆಯೋಗದ ಕಣ್ಣು ಕೆಂಪಾಗುವಂತೆ ಮಾಡಿದೆ.

#Officers, #transferred, #permission, #ElectionCommission,

Articles You Might Like

Share This Article