ಮತ್ತಷ್ಟು ರೊಚ್ಚಿಗೆದ್ದ ರಷ್ಯಾ, ಉಕ್ರೇನ್‍ನ ತೈಲ  ಸಂಗ್ರಹಗಾರಗಳು ಉಡೀಸ್..!

Social Share

ಕೀವ್,ಫೆ.27-ರಷ್ಯಾ ಆಕ್ರಮಣದಿಂದ ಜರ್ಝರಿತವಾಗಿದ್ದ ಉಕ್ರೇನ್ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲದಿಂದಾಗಿ ನಿಧಾನಕ್ಕೆ ಚೇತರಿಸಿಕೊಳ್ಳಲಾರಂಭಿಸಿದೆ. ವಿವಿಧ ರಾಷ್ಟ್ರಗಳು, ಸೈನಿಕರು ಸೇರಿದಂತೆ ಯುದ್ಧ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುತ್ತಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ. ಇದರಿಂದ ರಷ್ಯಾ ಮತ್ತಷ್ಟು ರೊಚ್ಚುಗೆದಿದ್ದು, ಉಕ್ರೇನ್‍ನ ತೈಲ ಸಂಗ್ರಹಗಾರಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿದೆ.
ಕಳೆದ ಗುರುವಾರದಿಂದ ಆರಂಭಗೊಂಡಿರುವ ಸಂಘರ್ಷ, ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆಯವರೆಗೂ ಉಕ್ರೇನ್ ಒಂಟಿ ಎಂಬ ಅನಾಥ ಪ್ರಜ್ಞೆಯಿಂದ ಬಳಲುತ್ತಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸೇರಿದಂತೆ ಮೂರು ದೇಶಗಳು ತಟಸ್ಥ ನಿಲುವು ಅನುಸರಿಸಿದರೆ 11 ರಾಷ್ಟ್ರಗಳು ರಷ್ಯಾ ದಾಳಿಯನ್ನು ವಿರೋಧಿಸಿ ಮತ ಚಲಾವಣೆ ಮಾಡಿದವು.
ಈ ನಡುವೆ ಯೂರೋಪ್‍ನ ಬಹಳಷ್ಟು ರಾಷ್ಟ್ರಗಳು ರಷ್ಯಾದ ಸ್ವಿಪ್ಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಷೇಸಿರುವುದರಿಂದ ಆರ್ಥಿಕ ವ್ಯವಸ್ಥೆ ಕೂಡ ಏರುಪೇರಾಗಿದೆ. ರಷ್ಯಾದ ಮೇಲೆ ಒತ್ತಡ ಹೇರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ.
ರಷ್ಯಾ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಿತ್ತು. ಆದರೆ ಅದನ್ನೂ ಮೀರಿ ನಿನ್ನೆ ಅಪಾರ್ಟ್‍ಮೆಂಟ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ನಿನ್ನೆ ಇಡೀ ದಿನ ಉಕ್ರೇನ್‍ನ ಹಲವು ನಗರಗಳು ಹಾಗೂ ಜನವಸತಿ ಪ್ರದೇಶಗಳ ಮೇಲೆ ನಿರಂತರವಾಗಿ ಬಾಂಬ್‍ಗಳ ಸುರಿಮಳೆಯಾಗುತ್ತಲೇ ಇತ್ತು.
ಜನ ವಸತಿ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ನೆರೆಯ ರಾಷ್ಟ್ರಗಳಿಗೆ ಪಲಾಯನಗೈದಿದ್ದಾರೆ. ರೊಮಿನಿಯ, ಪೋಲಾಂಡ್, ಹಂಗೇರಿಯ ಸೇರಿದಂತೆ ಹಲವು ರಾಷ್ಟ್ರಗಳು ಯುದ್ಧಪೀಡಿತ ಪ್ರದೇಶಗಳ ಜನರಿಗೆ ಆಶ್ರಯ ಕಲ್ಪಿಸುತ್ತಿವೆ. ಅಂತಾರಾಷ್ಟ್ರೀಯ ಸಮುದಾಯಗಳ ಪೈಕಿ ಪೋಲಾಂಡ್ 200ಕ್ಕೂ ಹೆಚು ಕ್ಷಿಪಣಿ ನಿಗ್ರಹಗಳನ್ನು ಕಳುಹಿಸಿದೆ.
ಜೆಕ್ ಗಣರಾಜ್ಯ ಶಸ್ತ್ರಾಸ್ತ್ರಗಳೊಂದಿಗೆ ಸೈನಿಕರನ್ನು ರವಾನೆ ಮಾಡಿದೆ. ಬ್ರಿಟನ್ ಉಕ್ರೇನ್‍ಗೆ ಮೊದಲಿನಿಂದಲೂ ಬೆಂಬಲವಾಗಿ ನಿಂತಿದ್ದು, ಭದ್ರತಾ ಮಂಡಳಿಯ ಸಭೆಯ ಬಳಿಕ ಸೇನಾ ತುಕಡಿಯನ್ನು ಕಳಿಸಿದೆ. ಬ್ರಿಟನ್ ಯೋಧರು ಇಂದು ಮಧ್ಯಾಹ್ನದ ಒಳಗೆ ಉಕ್ರೇನ್ ತಲುಪುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಸಮುದಾಯ ಉಕ್ರೇನ್‍ನನ್ನು ಬೆಂಬಲಿಸಿರುವುದನ್ನು ಸಹಿಸಲಾಗದ ರಷ್ಯನ್ ಪಡೆ ಮಾರಣಾಂತಿಕ ದಾಳಿಯ ತಂತ್ರಗಾರಿಕೆ ಅನುಸರಿಸಲಾರಂಭಿಸಿದೆ. ವೆಸ್ಲಿಕ್ಯೂನಲ್ಲಿನ ತೈಲ ಸಂಗ್ರಹಗಾರಗಳ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ.
ಮತ್ತೊಂದೆಡೆ ತೈಲ ಪೂರೈಕೆಯ ಪೈಪ್‍ಲೈನ್ ಮಾರ್ಗಗಳನ್ನು ಕೂಡ ಧ್ವಂಸಗೊಳಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಜನ ಸಂಕಷ್ಟಕ್ಕೊಳಗಾಗಿದ್ದು, ಆತಂಕ ಎದುರಿಸುತ್ತಿದ್ದಾರೆ. ತೈಲ ಸಂಗ್ರಹಗಾರ ಹೊತ್ತಿ ಉರಿಯುತ್ತಿದ್ದು, ಹೊಗೆ ಜನರ ಜೀವ ಹಿಂಡಲಾರಂಭಿಸಿದೆ. ಉಸಿರಾಟ ಕಷ್ಟವಾಗಿದ್ದು, ಬೇರೆಡೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಪರಿಸರ ವಿಕೋಪ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ರಾಸಾಯನಿಕಗಳ ಪ್ರಸರಣದಿಂದ ಸಾವುನೋವುಗಳಾಗುವ ಅತಂಕ ಸೃಷ್ಟಿಯಾಗಿದೆ.
ಜನವಸತಿ ಪ್ರದೇಶಗಳಿಗೆ ಹಾನಿ ಮಾಡುವುದಿಲ್ಲ ಎಂದು ಹೇಳುತ್ತಲೇ ಆಯಿಲ್ ಟ್ಯಾಂಕರ್‍ಗಳನ್ನು ಧ್ವಂಸಗೊಳಿಸಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸುತ್ತಿದೆ. ಉಕ್ರೇನ್‍ನ್ನು ಆಕ್ರಮಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿರುವ ರಷ್ಯಾ 96 ಗಂಟೆಗಳ ಸತತ ಆಕ್ರಮಣದಿಂದ ಬಹುತೇಕ ನಗರಗಳಲ್ಲಿ ವಿಧ್ವಂಸಕ ಪರಿಸ್ಥಿತಿ ನಿರ್ಮಿಸಿದೆ.
ಜನ ನೀರು, ಆಹಾರ ಇಲ್ಲದೆ ಪರದಾಡುತ್ತಿದ್ದಾರೆ. ನಿನ್ನೆಯಿಂದ ನೈಟ್ ಕಫ್ರ್ಯೂ ಜಾರಿಯಾಗಿದ್ದು, ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೂ ಯಾರಾದರೂ ಬೀದಿಯಲ್ಲಿ ಕಾಣಿಸಿಕೊಂಡರೆ ಗುಂಡು ಹಾರಿಸುವುದಾಗಿ ಉಕ್ರೇನ್ ಆಡಳಿತ ಘೋಷಿಸಿದ್ದು, ರಾತ್ರಿಯ ವೇಳೆ ಹೊರಗಡೆ ಸಂಚರಿಸುವವರು ಶತ್ರುಗಳ ಜೊತೆ ಕೈಜೋಡಿಸಿದ್ದಾರೆಂದು ಭಾವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ರಷ್ಯಾ ಉಕ್ರೇನ್‍ನನ್ನು ನಾಜಿ ಹಾಗೂ ನಿಶಸ್ತೀಕರಣ ಮಾಡುವುದಾಗಿ ಘೋಷಿಸುತ್ತಲೇ ದಾಳಿಗಿಳಿದಿದೆ. ಉಕ್ರೇನ್ ಅಧ್ಯಕ್ಷ ವೊಲ್ಡೊಮಿರ್ ಜೆಲೆನ್ಸ್ಕಿಯನ್ನು ನಿನ್ನೆ ಅಮೆರಿಕ ಪಡೆ ರಾಜಧಾನಿ ಕೀವ್‍ನಿಂದ ಸ್ಥಳಾಂತರಿಸುವುದಾಗಿ ಹೇಳಿತ್ತು. ಆದರೆ ತಮ್ಮ ರಕ್ಷಣೆಗೆ ಬಂದಿದ್ದ ಅಮೆರಿಕ ಸೇನಾ ವಿಮಾನಗಳನ್ನು ವಾಪಸ್ ಕಳುಹಿಸಿದ ಜೆಲೆನ್ಸ್ಕಿ ಯುದ್ಧ ಇಲ್ಲಿ ನಡೆಯುತ್ತಿದೆ. ಇಲ್ಲಿ ನನ್ನ ಅಗತ್ಯವಿದೆ ಎಂದು ಹೇಳಿದ್ದರು.  ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Articles You Might Like

Share This Article