ಇರಾನ್ ಸೇನಾಧಿಕಾರಿ ಹತ್ಯೆ ಎಫೆಕ್ಟ್ : ಸತತ 4ನೇ ದಿನ ಪೆಟ್ರೋಲ್ ತುಟ್ಟಿ

ನವದೆಹಲಿ, ಜ.5- ಇರಾನ್ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿ ಅಮೆರಿಕ ವಾಯು ದಾಳಿಯಲ್ಲಿ ಹತರಾದ ನಂತರ ಜಾಗತಿಕ ತೈಲ ದರಗಳಲ್ಲಿ ಕಂಡುಬಂದಿರುವ ಏರಿಕೆ ಸತತ ನಾಲ್ಕನೆ ದಿನವೂ ಮುಂದುವರಿದಿದೆ. ತೈಲ ಸಮೃದ್ಧ ಮಧ್ಯಪ್ರಾಚ್ಯದಲ್ಲಿ ಇದು ಮತ್ತಷ್ಟು ಭಾರೀ ಬಿಕ್ಕಟ್ಟಿಗೆ ಎಡೆ ಮಾಡಿಕೊಡುವ ಆತಂಕವೂ ಸೃಷ್ಟಿಯಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ನಾಲ್ಕು ದಿನಗಳಿಂದ ಏರುತ್ತಿದೆ. ಇದು ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.  ನಿನ್ನೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬೆಲೆಯಲ್ಲಿ 9 ಪೈಸೆ ಮತ್ತು ಡೀಸೆಲ್ ದರದಲ್ಲಿ 11 ಪೈಸೆಯಷ್ಟು ಹೆಚ್ಚಳ ಕಂಡಬಂದಿದೆ. ಈ ಏರಿಕೆ ಬಗ್ಗೆ ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲರ್‍ಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ರಾಜಧಾನಿ ದೆಹಲಿಯ ರಿಟೈಲ್ ಪೆಟ್ರೋಲ್ ಪಂಚ್‍ಗಳಲ್ಲಿ ಇಂದು ಮುಂಜಾನೆಯಿಂದಲೇ ವಾಹನ ಚಾಲಕರಿಗೆ ಇಂಧನ ಬೆಲೆಯಲ್ಲಿ ಮತ್ತಷ್ಟು ಅಲ್ಪ ಏರಿಕೆಯ ಬಿಸಿ ತಟ್ಟಿದೆ. ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 75.54 ರೂ.ಆಗಿದೆ. ಇದು ಕಳೆದ ಒಂದು ವರ್ಷದಲ್ಲೇ ಅಧಿಕ ದರವಾಗಿದೆ. ಡೀಸೆಲ್ ಬೆಲೆ 68.51 ರೂ.ಗಳಷ್ಟಿತ್ತು.  ಕಳೆದ ಶುಕ್ರವಾರದಿಂದ ಜಾಗತಿಕ ಕಚ್ಚಾ ತೈಲ ದರದಲ್ಲಿ ಸರಾಸರಿ ಶೇ.4ರಷ್ಟು ಏರಿಕೆ ಕಂಡುಬಂದಿದೆ.

ಇಂಧನ ದರದಲ್ಲಿ ಏರಿಕೆಯಾದರೆ ಗ್ರಾಹಕರ ದಿನಬಳಕೆಯ ವಸ್ತುಗಳ ಮೇಲೆ ಅದು ನೇರ ಪರಿಣಾಮ ಬೀರಲಿದ್ದು, ತರಕಾರಿ ಬೆಲೆಯಲ್ಲಿಯೂ ಹೆಚ್ಚಳವಾಗಲಿದೆ.  ಭಾರತವು ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮುದು ಮೇಲೆ ಶೇ.84ರಷ್ಟು ಅವಲಂಬಿಸಿರುವುದರಿಂದ. ಇರಾನ್-ಅಮೆರಿಕ ಬಿಕ್ಕಟ್ಟು ಕೊನೆಗೊಳ್ಳುವ ತನಕ ಬೆಲೆ ಏರಿಕೆ ಬಿಸಿ ಎದುರಿಸುವುದು ಅನಿವಾರ್ಯವಾಗಿದೆ.