ಒಕ್ಕಲಿಗರ ಮಹಾ ಸಂಗಮ, ಬೃಹತ್ ಸಮಾವೇಶಕ್ಕೆ ಸಜ್ಜು

Social Share

ಬೆಂಗಳೂರು,ನ.28- ಮುಂಬರುವ ವಿಧಾನಸಭೆಗೂ ಮುನ್ನ ರಾಜ್ಯದಲ್ಲಿ ಮತ್ತೊಮ್ಮೆ ಒಕ್ಕಲಿಗರ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ರಾಜಕೀಯವಾಗಿ ಸಂದೇಶ ರವಾನಿಸುವ ಉದ್ದೇಶ ಹೊಂದಲಾಗಿದೆ.

ಇದಕ್ಕಾಗಿ 90 ವರ್ಷಗಳು ತುಂಬಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಒಕ್ಕಲಿಗ ಸಮುದಾಯದಿಂದ ಗೌರವ ಸಮರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಈ ಇಬ್ಬರು ನಾಯಕರನ್ನು ಗೌರವಿಸುವ ಸಮಾರಂಭವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿ ಶಕ್ತಿ ಪ್ರದರ್ಶನ ನಡೆಸಲಾಗುತ್ತದೆ. ಒಕ್ಕಲಿಗರ ಮಹಾಸಂಗಮದ ಹೆಸರಿನಲ್ಲಿ ಅದ್ದೂರಿಯಾಗಿ ಹಾಗೂ ಬೃಹತ್ ಪ್ರಮಾಣದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಕಳೆದ 1994ರಲ್ಲಿ ಒಕ್ಕಲಿಗರ ಮೀಸಲಾತಿಗಾಗಿ ಬೃಹತ್ ಪ್ರಮಾಣದಲ್ಲಿ ನಗರದ ಕಬ್ಬನ್ ಪಾರ್ಕಿನಲ್ಲಿ ಒಕ್ಕಲಿಗರ ಸಮಾವೇಶ ನಡೆಸಲಾಗಿತ್ತು. ಆ ನಂತರ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾದರು.
ಈಗ ಮತ್ತೆ ಅದೇ ರೀತಿಯ ಸಮಾವೇಶ ನಡೆಸುವ ಮೂಲಕ ಒಕ್ಕಲಿಗ ಸಮುದಾಯದ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನ ಮಾಡುವ ಉದ್ದೇಶವನ್ನು ಸಮುದಾಯದವರು ಹೊಂದಿದ್ದಾರೆ.

ಈ ಸಮಾವೇಶಕ್ಕೆ 2023ರ ಜನವರಿ 23ರಂದು ದಿನಾಂಕ ನಿಗದಿಪಡಿಸಲಾಗಿದೆ. ನಾಗರಿಕರಿಗೆ ಸಂಚಾರ ದಟ್ಟಣೆಯ ತೊಂದರೆಯಾಗದಂತೆ ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಸಮಾವೇಶ ನಡೆಸಿ ಇಬ್ಬರು ನಾಯಕರನ್ನು ಸನ್ಮಾನಿಸುವುದರ ಜತೆಗೆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಹಾಗೂ ಪರಿಹಾರೋಪಾಯದ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.

ರಾಜ್ಯ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಈ ಬೃಹತ್ ಸಮಾವೇಶವನ್ನು ಆಯೋಜಿಸಲಿದ್ದು, ಸಮುದಾಯದ ಎಲ್ಲಾ ಸಂಘ-ಸಂಸ್ಥೆಗಳು ಕೈಜೋಡಿಸುವಂತೆ ಕರೆ ನೀಡಲಾಗಿದೆ.ಜನವರಿ 23ರ ವೇಳೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಭೈರವೈಕ್ಯರಾಗಿ ಹತ್ತುವರ್ಷವಾಗಲಿದ್ದು, ಅವರ ಸಂಸ್ಮರಣೆ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗುತ್ತದೆ.

ಜತೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಪಟ್ಟಾಭಿಷಕ್ತರಾಗಿ -.20 ಕ್ಕೆ ಹತ್ತು ವರ್ಷಗಳಾಗಲಿವೆ. ಈ ಮೂರು ಕಾರ್ಯಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹಾಸಂಗಮವನ್ನು ಆಯೋಜಿಸಲಾಗುತ್ತಿದೆ. ಆ ಮೂಲಕ ಜನಾಂಗವನ್ನು ಸಂಘಟಿಸಲಾಗುತ್ತದೆ.

ಆದಿಚುಂಚನಗಿರಿ ಶ್ರೀಗಳು ಹಾಗೂ ಪಟ್ಟನಾಯಕನಹಳ್ಳಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಈ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಪಕ್ಷಾತೀತವಾಗಿ ಸಮುದಾಯದ ಎಲ್ಲಾ ನಾಯಕರು, ಮುಖಂಡರು, ಸಂಘ-ಸಂಸ್ಥೆಗಳು ಒಟ್ಟಾಗಿ ಸಮಾವೇಶ ನಡೆಸುವ ಮೂಲಕ ಸ್ಪಷ್ಟವಾದ ರಾಜಕೀಯ ಸಂದೇಶ ನೀಡಬೇಕು. ಒಂದು ವೇಳೆ ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಅಷ್ಟರಲ್ಲಿ ಸರ್ಕಾರ ಹೆಚ್ಚಿಸದಿದ್ದರೆ, ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲಾಗವುದು.

ಎಲ್ಲಾ ಸಮುದಾಯಗಳು ಅವರವರ ಹಕ್ಕುಗಳಿಗೆ, ಬೇಡಿಕೆಗಳಿಗೆ ಸಂಘಟಿತರಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯವು ಎಚ್ಚೆತ್ತು ಸಂಘಟಿತ ಹೋರಾಟಕ್ಕೆ ಸಜ್ಜಾಗುವಂತೆ ಸಮುದಾಯದ ನಾಯಕರು ಈಗಾಗಲೇ ಕರೆ ನೀಡಿದ್ದಾರೆ.

ಕೃಷಿಯನ್ನೇ ಪ್ರಮುಖವಾಗಿ ನಂಬಿ ಸಂಕಷ್ಟದಲ್ಲೇ ಬದುಕುತ್ತಿರುವ ಒಕ್ಕಗಲಿಗರು ಮುಂದೆ ಎದುರಿಸಬೇಕಾದ ಸಮಸ್ಯೆ, ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಸಮಾವೇಶ ಕೂಡ ಆಗಲಿದೆ ಎಂದು ಹೇಳಲಾಗುತ್ತಿದೆ.

Articles You Might Like

Share This Article