ಪರವಾನಗಿ ಇಲ್ಲದೆ ಸಾರಿಗೆ ಸೇವೆ ನಡೆಸಿದರೆ ಕಠಿಣ ಕ್ರಮ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಅ.11- ಪರಾವನಗಿ ಇಲ್ಲದೆ ಯಾವುದೇ ಸಂಸ್ಥೆಯನ್ನು ನಡೆಸಬಾರದು. ಹೀಗಾಗಿ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರಿಂದ ಹೆಚ್ಚು ದರ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಓಲಾ, ಊಬರ್ ಸಂಸ್ಥೆಗಳಿಗೆ ಈಗಾಗಲೇ ಸಾರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಈ ಸಮಸ್ಯೆ ಕುರಿತಂತೆ ನಿನ್ನೆ ಸಾರಿಗೆ ಇಲಾಖೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ.

ಯಾವುದೇ ಸಂಸ್ಥೆಯು ಪರವಾನಗಿ ಇಲ್ಲದೆ ಸಾರಿಗೆ ಸೇವೆಯನ್ನು ನಡೆಸಬಾರದು. ಹಾಗೊಂದು ವೇಳೆ ನಡೆಸುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ಬೆನ್ನಲ್ಲೇ ಒಕ್ಕಲಿಗ ಸೇರಿದಂತೆ ಇತರೆ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಹಜವಾಗಿ ಎಲ್ಲರೂ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇಡುತ್ತಾರೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಎಲ್ಲ ವಿಷಯಗಳನ್ನು ಪರಿಶೀಲಿಸುತ್ತಿದೆ. ಆಯೋಗದ ಶಿಫಾರಸ್ಸು, ತಜ್ಞರು ನೀಡುವ ಸಲಹೆ ಆಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಕಾನೂನಾತ್ಮಕ ರಕ್ಷಣೆ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ಜನಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು. ಬಿಜೆಪಿಯ ಪದಾಕಾರಿಗಳು ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವುದು ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವುದು ಜನಸಂಕಲ್ಪ ಯಾತ್ರೆಯ ಉದ್ದೇಶ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಈ ಯಾತ್ರೆ ಹಮ್ಮಿಕೊಂಡಿದ್ದು 2023ರಲ್ಲಿ ಮತ್ತೆ ಬಿಜೆಪಿಯನ್ನು ಅಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇವೆ. ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಜನಸಂಕಲ್ಪ ಯಾತ್ರೆ ಮೂಲಕ ಮತ್ತೊಮ್ಮೆ ಜನರ ವಿಶ್ವಾಸ ಗಳಿಸುತ್ತೇವೆ ಎಂದರು.

ಸಮಾವೇಶದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಜೋಡೋ ಯಾತ್ರೆ ಯಾರನ್ನು ಜೋಡಿಸುತ್ತಿದೆ ಎಂಬುದು ಗೊತ್ತಿದೆ. ಇದರ ಬಗ್ಗೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ನಾವು ತಲೆಯನ್ನು ಕೆಡಿಸಿಕೊಂಡಿಲ್ಲ ಎಂದರು.

ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಸಿನಿಮಾ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್‍ಗೆ ಆಹ್ವಾನಿಸಲು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್‍ಕುಮಾರ್ ಆಗಮಿಸಿದ್ದರು ಎಂದು ಹೇಳಿದರು.

Articles You Might Like

Share This Article