ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಭರವಸೆಯ ಪೈಪೋಟಿ

Social Share

ಬೆಂಗಳೂರು,ಜ.20- ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯವನ್ನು ಮರು ಜಾರಿಗೊಳಿಸುವ ಭರವಸೆ ನೀಡಲು ಚರ್ಚೆಗಳು ನಡೆದಿವೆ.

2006ರ ನಂತರ ನೇಮಕವಾದ ಸರ್ಕಾರಿ ನೌಕರರಿಗೆ ಜಾರಿಗೊಳಿಸಲಾದ ಹೊಸ ಪಿಂಚಣಿ ವ್ಯವಸ್ಥೆಯ ಬಗ್ಗೆ ಭಾರೀ ವಿರೋಧಗಳು ವ್ಯಕ್ತವಾಗಿದ್ದು, ಇತ್ತಿಚೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ರಾಜ್ಯಾದ್ಯಂತ ಸರ್ಕಾರಿ ನೌಕರರು ಹಳೆ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿ ಮಾಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

ಎಲ್ಲಾ ಪಕ್ಷದ ನಾಯಕರಿಗೆ ಮನವಿಗಳನ್ನು ನೀಡುತ್ತಲೇ ಇದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಳೇ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಪ್ರಯತ್ನಗಳಾಗಿವೆ. ಚುನಾವಣೆಗೂ ಮೊದಲು ಅಲ್ಲಿ ಈ ಭರವಸೆಯನ್ನು ನೀಡಲಾಗಿತ್ತು.

ದುಬೈ ಅಧಿಕಾರಿಯಂತೆ ನಟಿಸಿ ಲೀಲಾ ಪ್ಯಾಲೇಸ್‍ಗೆ ವಂಚಿಸಿದ್ದ ಆರೋಪಿ ಸೆರೆ

ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಈ ಬೇಡಿಕೆಗೆ ರಾಜ್ಯದಲ್ಲೂ ಕಾಂಗ್ರೆಸ್ ಸ್ಪಂದಿಸುವ ಸಾಧ್ಯತೆ ಇದೆ. ಜೆಡಿಎಸ್ ಪಕ್ಷ ಈಗಾಗಲೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವ ಭರವಸೆ ನೀಡಿಯಾಗಿದೆ. ಕಾಂಗ್ರೆಸ್ ಸರ್ಕಾರ ಕೆಲವು ಕಡೆ ಜಾರಿಗೊಳಿಸಿರುವುದರಿಂದ ರಾಜ್ಯದಲ್ಲೂ ಅದರ ಅನುಷ್ಠಾನದ ಭರವಸೆ ನೀಡುವ ಸಾಧ್ಯತೆಗಳಿವೆ.

ರಾಜ್ಯದ ಆರ್ಥಿಕ ಸ್ಥಿತಿಯ ಆರೋಗ್ಯದ ದೃಷ್ಟಿಯಿಂದ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದು ಸಾಧುವಲ್ಲ ಎಂದು ಆರ್ಥಿಕ ಪಂಡಿತರು ಎಚ್ಚರಿಸುತ್ತಲೇ ಬಂದಿದ್ದಾರೆ. ಆರ್ಥಿಕ ಇಲಾಖೆಯಂತೂ ಹಳೆ ಪಿಂಚಣಿ ವ್ಯವಸ್ಥೆಯನ್ನು ಬದ್ಧ ವೈರಿಯಂತೆ ನೋಡುತ್ತಿದೆ. ಆದರೆ ಚುನಾವಣಾ ಕಾಲದಲ್ಲಿ ಆರ್ಥಿಕ ಆರೋಗ್ಯವನ್ನು ಬದಿಗಿಟ್ಟು ಭರವಸೆ ನೀಡುವ ಉಸಾಬರಿಗಳು ಹೆಚ್ಚಾಗಿವೆ.

ಇತ್ತೀಚೆಗೆ ವಿಧಾನಮಂಡಲದಲ್ಲಿ ನಡೆದ ಚರ್ಚೆಯಲ್ಲಿ ಎಲ್ಲಾ ಪಕ್ಷಗಳ ಶಾಸಕರು ಈ ಬಗ್ಗೆ ಒಲವು ತೋರಿಸಿದರು. ಆದರೆ ಆರ್ಥಿಕ ಇಲಾಖೆಯ ನಕಾರದಿಂದ ಆಡಳಿತಾರೂಢ ಬಿಜೆಪಿ ಸರ್ಕಾರ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ರಾಜ್ಯದ ಸುಮಾರು 6 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ಪೈಕಿ ಶೇ.30ಕ್ಕಿಂತಲೂ ಹೆಚ್ಚಿನವರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿದ್ದಾರೆ. ಅಂದಾಜು ಎರಡು ಲಕ್ಷ ಮಂದಿ ಸರ್ಕಾರಿ ನೌಕರರು ಹಳೆ ಪಿಂಚಣಿ ಪದ್ಧತಿ ಜಾರಿಗೆ ದುಂಬಾಲು ಬಿದ್ದಿದ್ದಾರೆ.

ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡುತ್ತಿರುವ ಪಾಲು ಮತ್ತು ರಾಜ್ಯ ಸರ್ಕಾರ ಭರಿಸುವ ತನ್ನ ಪಾಲಿನ ಹಣದ ಸಮೀಕರಣದ ಬಳಿಕ ಒಂದಿಷ್ಟು, ಅಂದರೆ ಸುಮಾರು ಒಂದು ಸಾವಿರ ಕೋಟಿಯಷ್ಟು ಹೆಚ್ಚುವರಿ ಅನುದಾನ ನೀಡಿದರೆ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಜಾರಿ ಮಾಡಬಹುದು ಎಂದು ವಿಧಾನಮಂಡಲದಲ್ಲಿ ಶಾಸಕರು ಸಲಹೆ ನೀಡಿದರು. ಆದರೂ ಸರ್ಕಾರ ಅದಕ್ಕೆ ಸಹಮತ ವ್ಯಕ್ತ ಪಡಿಸಲಿಲ್ಲ.

ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಷ್ಟೆ ಅಲ್ಲ ಆಡಳಿತಾರೂಢ ಬಿಜೆಪಿ ಶಾಸಕರು ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿದ್ದರು. ಆದರೂ ಸರ್ಕಾರ ಆರ್ಥಿಕ ಇತಿಮಿತಿಯಲ್ಲಿ ಇದನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಮುಂದುವರೆದ ಚರ್ಚೆಯಲ್ಲಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಲು ಸಮಿತಿ ರಚನೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.

ಆಡಳಿತದಲ್ಲಿದ್ದಾಗ ಬೇಡಿಕೆ ಈಡೇರಿಸದೇ ಇರುವ ಬಿಜೆಪಿ ಚುನಾವಣೆ ಕಾಲದಲ್ಲಿ ನೀಡುವ ಭರವಸೆಯಲ್ಲಿ ಹಳೆ ಪಿಂಚಣಿ ಜಾರಿಯ ಸಾಧ್ಯತೆಯನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಮುಂದೆ ಬಿಜೆಪಿ ಅಕಾರಕ್ಕೆ ಬಂದಾಗ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಮಾಹಿತಿ ಕಾಂಗ್ರೆಸ್ ಪಾಳೆಯದಲ್ಲಿ ಹರಿದಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಮುಂದಾಗಿ ಪ್ರಜಾಧ್ವನಿ ಯಾತ್ರೆಯಲ್ಲೇ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬೆಂಬಲ ನೀಡಿ: ನಿಖಿಲ್

ಈಗಾಗಲೇ ಪ್ರಣಾಳಿಕೆಗೂ ಮೊದಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ, ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾಸಾಶನ ನೀಡುವ ಗೃಹ ಲಕ್ಷ್ಮೀ ಯೋಜನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವ ಭರವಸೆ ನೀಡುವ ಘೋಷಣೆಯೊಂದನ್ನು ಮಾಡಿದರೆ ಕಾಂಗ್ರೆಸ್‍ಗೆ ರಾಜಕೀಯವಾಗಿ ಮತ್ತಷ್ಟು ಲಾಭವಾಗುವ ಸಾಧ್ಯತೆ ಇದೆ.

ಈ ಹಿಂದೆ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಈಗ ಕಾಂಗ್ರೆಸ್ ಹಳೆ ಪಿಂಚಣಿ ಪದ್ಧತಿಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿದರೆ ಜನ ನಂಬುತ್ತಾರೆಯೇ ಎಂಬ ಚರ್ಚೆಗಳು ನಡೆದಿವೆ. ಆದರೂ ಪ್ರಣಾಳಿಕೆಯಲ್ಲಿ ಅಥವಾ ಪ್ರಜಾಧ್ವನಿ ಯಾತ್ರೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿ ಮತ ಸೆಳೆಯುವ ಯತ್ನ ನಡೆದಿದೆ.

old pension system, government, employees, Congress,

Articles You Might Like

Share This Article