ಲಾಕ್‍ಡೌನ್ ಮಾಡುವ ಬಗ್ಗೆ ಸರ್ಕಾರ ಚರ್ಚೆ ನಡೆಸಿಲ್ಲ : ಗೃಹ ಸಚಿವ ಅರಗ ಜ್ಞಾನೇಂದ್ರ

Social Share

ಬೆಂಗಳೂರು,ಜ.12- ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್‍ಡೌನ್ ಕೊನೆಯ ಅಸ್ತ್ರವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಸರ್ಕಾರ ಚರ್ಚೆ ನಡೆಸಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವುದನ್ನು ತಡೆಗಟ್ಟಲು ಕೆಲವು ನಿಬಂಧನೆಗಳನ್ನು ಹಾಕಬಹುದು. ಆದರೆ ಇದಕ್ಕೆ ಲಾಕ್‍ಡೌನ್ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದರು.
ಲಾಕ್‍ಡೌನ್ ಮಾಡಲಾಗುತ್ತದೆ ಎಂಬ ಬಗ್ಗೆ ಯಾರೊಬ್ಬರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟ ಸಹದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ, ಈ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಹೇಳಿದರು. ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಪಾಲನೆ ಮಾಡಿದರೆ ಈ ಸಮಸ್ಯೆ ಎದುರಾಗುವುದಿಲ್ಲ. ಆದರೆ ಕೆಲವರು ನಮಗೆ ಏನು ಆಗುವುದಿಲ್ಲ ಎಂಬ ಬಂಡತನ ತೋರಿಸುತ್ತಿದ್ದಾರೆ. ಇದಕ್ಕೆ ನಾವೇನು ಮಾಡಬೇಕೆಂದು ಪ್ರಶ್ನಿಸಿದರು.
ಲಾಕ್‍ಡೌನ್ ಮಾಡಲಾಗುತ್ತದೆ ಎಂದು ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಭಯಭೀತರಾಗಿ ತಮ್ಮ ತಮ್ಮ ಸ್ವಗ್ರಾಮಗಳಿಗೆ ವಲಸೆ ಹೋಗುತ್ತಿದ್ದಾರೆ. ನೀವು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ನಾನು ಈಗಲೂ ಜನತೆಯಲ್ಲಿ ಮನವಿ ಮಾಡುವುದೆಂದರೆ ದಯವಿಟ್ಟು ಪ್ರತಿಯೊಬ್ಬರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಉಡಾಫೆ ಬೇಡ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಾದಯಾತ್ರೆ ಕುರಿತಂತೆ ಕೆಲವರು ನಾವು ಕೊರೊನಾ ಹಬ್ಬಿಸುವುದಕ್ಕಾಗಿಯೇ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹೊರಟಿದ್ದಾರೆ. ಅಂಥವರಿಗೆ ಕಾನೂನು ಮೂಲಕವೇ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಅಸಹಾಯಕ ಸ್ಥಿತಿಯಲ್ಲಿಲ್ಲ. ಪ್ರತಿಯೊಂದಕ್ಕೂ ಇತಿಮಿತಿ ಇರುತ್ತದೆ. ಅದನ್ನು ಮೀರಿದರೆ ಕಾನೂನು ಉಲ್ಲಂಘಿಸಿದರೆ ಶಿಕ್ಷೆ ಖಚಿತ ಎಂದು ಎಚ್ಚರಿಸಿದರು.

Articles You Might Like

Share This Article