ಚೆನ್ನೈ,ಅ.3- ಮಾರುಕಟ್ಟೆ ಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಪೋಟಗೊಂಡು ಓರ್ವ ಮೃತಪಟ್ಟಿದ್ದು ಅನೇಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಟ್ಟು ರವಿ ಮೃತಪಟ್ಟಿರುವ ದುರ್ದೈವಿ. ಬಾಲಕ ಸೇರಿದಂತೆ ಇನ್ನು ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿರುಚ್ಚಿಯ ಕೊಟ್ಟೈ ವಾಸಲ್ ಪ್ರದೇಶ ಜನನಿಬಿಡ ಮಾರುಕಟ್ಟೆ ಸ್ಥಳವಾಗಿದ್ದು, ನಿನ್ನೆ ಭಾನುವಾರದ ರಾತ್ರಿಯಾದ ಕಾರಣ ಜನಸಂದಣಿ ಹೆಚ್ಚಾಗೇ ಇತ್ತು. ಹೀಲಿಯಂ ಟ್ಯಾಂಕ್‍ವೊಂದು ಏಕಾಏಕಿ ಸ್ಪೋಟಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಲಕ ಸೇರಿದಂತೆ ಹಲವರಿಗೆ ಗಾಯಗೊಂಡಿದ್ದು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹಲವಾರು ವಾಹನಗಳ ಗಾಜು ಕೂಡ ಪುಡಿಪುಡಿಯಾಗಿದ್ದು, ಕೆಲವು ವಾಹನಗಳು ಜಖಂಗೊಂಡಿವೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾರುಕಟ್ಟೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ಹೀಲಿಯಂ ಟ್ಯಾಂಕ್ ಸ್ಪೋಟಗೊಂಡು ಈ ದುರಂತ ಸಂಭವಿಸಿರುವುದು ಪತ್ತೆಯಾಗಿದೆ.
ಹೀಲಿಂ ಟ್ಯಾಂಕ್‍ನ ವಾರಸುದಾರರಾದ ಬಲೂನ್ ಮಾರಾಟಗಾರರಿಗಾಗಿ ಪೊಲೀಸರು ಹುಡುಕಾ ನಡೆಸುತ್ತಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.