ಬಿಜಿಂಗ್, ಫೆ.7- ಕಾಶ್ಮಿರದ ವಿಷಯದಲ್ಲಿ ಏಕಪಕ್ಷೀಯ ತೀರ್ಮಾನಗಳ ಬದಲಾಗಿ ಸೂಕ್ತ ಮತ್ತು ಶಾಂತಿಯುತವಾಗಿ ವಿವಾದ ಇತ್ಯರ್ಥವಾಗಬೇಕು ಎಂದು ಚೀನಾ ಆಗ್ರಹಿಸಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಾಲ್ಕು ದಿನಗಳ ಚೀನಾ ಭೇಟಿಯ ವೇಳೆ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕೊನೆಯ ಹಂತದಲ್ಲಿ ಅಧ್ಯಕ್ಷ ಕ್ಸಿ ಜಿಂಪಿಂಗ್‍ರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಬಳಿಕ ಉಭಯ ದೇಶಗಳ ಮುಖ್ಯಸ್ಥರು ಜಂಟಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಕಡೆಯಿಂದ ಚೀನಾದ ಹಿರಿಯ ನಾಯಕರಿಗೆ ಕಾಶ್ಮಿರದ ವಿಷಯದಲ್ಲಿನ ಹೊಸ ಬೆಳವಣಿಗೆಗಳ ಬಗ್ಗೆ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ತನ್ನ ಹೇಳಿಕೆ ದಾಖಲಿಸಿದ್ದು, ಅಲ್ಲಿನ ಸ್ಥಿತಿ ಮತ್ತು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದೆ.
ಇತಿಹಾಸದಲ್ಲಿ ಜಮ್ಮು-ಕಾಶ್ಮೀರ ವಿವಾದ ಇತ್ಯರ್ಥವಾಗದೆ ಉಳಿದಿದೆ. ಕಡ್ಡಾಯವಾಗಿ ಸೂಕ್ತವಾಗಿ ಮತ್ತು ಶಾಂತಿಯುತವಾಗಿ ವಿವಾದ ಇತ್ಯರ್ಥವಾಗಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಧ್ಯಸ್ಥಿಕೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳು ನಡೆಯಬೇಕು. ಅದರ ಹೊರತು ಕಾಶ್ಮೀರದ ವಿಷಯದಲ್ಲಿ ಏಕಪಕ್ಷೀಯವಾದ ಹಾಗೂ ವಿವಾದಿತ ಕ್ರಮಗಳನ್ನು ತೆಗೆದುಬಾರದು ಎಂದು ಚೀನಾ ಹೇಳಿದೆ.
ಕಾಶ್ಮೀರದ ವಿಷಯದಲ್ಲಿ ಅನ್ಯರ ಮಧ್ಯಸ್ಥಿಕೆಯನ್ನು ಭಾರತ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಲಡಾಕ್ ಸೇರಿದಂತೆ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದರಲ್ಲಿ ಬೇರೆ ಚರ್ಚೆ ಅನಗತ್ಯ ಎಂಬುದು ಭಾರತದ ನಿಲುವಾಗಿದೆ. ಆದರೂ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್‍ಖಾನ್ ಚಿನಾ ಭೇಟಿಯ ವೇಳೆ ಭಾರತದ ವಿರುದ್ಧ ದೂರು ಹೇಳಿದ್ದು, ಚೀನಾ ದೊಡ್ಡಣ್ಣನ ದಾಟಿಯಲ್ಲಿ ಮೂಗು ತೂರಿಸುವ ಪ್ರಯತ್ನ ನಡೆಸಿದೆ.
ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಬಾಚಿ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಕಾಶ್ಮೀರದ ವಿಷಯದಲ್ಲಿ ಬೇರೆಯವರ ಮಧ್ಯಸ್ಥಿಕೆ ಅವಕಾಶವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಭಾರತೀಯ ಪ್ರಾಂತ್ಯದಲ್ಲಿ ಉದ್ದೇಶಿದ ಸಿಪಿಇಸಿ ಯೋಜನೆಗಳನ್ನು ಜಾರಿಗೊಳಿಸುವ ಹುನ್ನಾರ ನಡೆದಿದೆ. ಆದರೆ ಭಾರತ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗೆ 60 ಬಿಲಿಯನ್ ಅಮೆರಿಕಾ ಡಾಲರ್ ಹೂಡಿಕೆಯನ್ನು ಚೀನಾ ಖಚಿತ ಪಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. bಚೀನಾ ತನ್ನ ಹೇಳಿಕೆಯಲ್ಲಿ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬದ್ಧತೆ ಪ್ರದರ್ಶನ ಮಾಡಬೇಕು. ಏಷ್ಯಾ ಖಂಡದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಉಭಯ ರಾಷ್ಟ್ರಗಳು ಪರಸ್ಪರ ಜೊತೆಯಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಪಾಕಿಸ್ತಾನ ಚೀನಾದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರಿಡಾಕೂಟದಲ್ಲಿ ಭಾಗವಹಿಸುವ ದೃಢತೆಯನ್ನು ವ್ಯಕ್ತ ಪಡಿಸಿದೆ.
ರಕ್ಷಣಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿವಿಧ ಹಂತಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಚೀನಾ ಯುದ್ಧ ಟ್ಯಾಂಕರ್‍ಗಳು, ಯುದ್ಧವಿಮಾನಗಳು, ಜೊತೆಗೆ ಆತ್ಯಧುನಿಕ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿದೆ.
