ಪ್ರತಿಪಕ್ಷಗಳ ಶಾಸಕರು, ಸಂಸದರಿಂದಲೂ ಎನ್‍ಡಿಎ ಅಭ್ಯರ್ಥಿ ಮುರ್ಮುಗೆ ಬೆಂಬಲ

Social Share

ನವದೆಹಲಿ,ಜು.22-ರಾಷ್ಟ್ರಪತಿ ಚುನಾವಣೆಯಲ್ಲಿ ಕೇರಳ, ಅಸ್ಸೋಂ, ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿಪಕ್ಷಗಳ ಶಾಸಕರು, ಸಂಸದರು ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಅಡ್ಡ ಮತದಾನ ಮಾಡುವ ಮೂಲಕ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಸುಮಾರು 10 ರಾಜ್ಯಗಳ 126 ಶಾಸಕರು, 17 ಸಂಸದರು ಅಡ್ಡಮತದಾನ ಮಾಡಿದ್ದಾರೆ. ಹೀಗಾಗಿ ದ್ರೌಪದಿ ಮುರ್ಮು ಅವರು ಪ್ರತಿಸ್ರ್ಪಧಿ ಯಶವಂತ್‍ಸಿನ್ಹಾ ಅವರನ್ನು ಶೇ.64ರಷ್ಟು ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿಯ ಅಸ್ತಿತ್ವವೇ ಇಲ್ಲದ ಕೇರಳ ರಾಜ್ಯದಲ್ಲೂ ಮುರ್ಮು ಅವರ ಪರವಾಗಿ ಮತ ಚಲಾವಣೆಯಾಗಿದೆ ಎಂದು ಹೇಳಲಾಗಿದೆ.

140 ಶಾಸಕರಿರುವ ಕೇರಳ ವಿಧಾನಸಭೆಯಲ್ಲಿ ಸಿಪಿಐ ನೇತೃತ್ವದ ಎಲ್‍ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರಿದ್ದಾರೆ. ಎಲ್ಲಾ ಮತಗಳು ಬಹುತೇಕ ಯಶವಂತ್ ಸಿನ್ಹಾ ಅವರಿಗೆ ಚಲಾವಣೆಯಾಗುವ ನಿರೀಕ್ಷೆಗಳಿದ್ದವು. ಆದರೆ, ಒಂದು ಮತ ದ್ರೌಪದಿ ಮುರ್ಮು ಅವರಿಗೆ ಚಲಾವಣೆಯಾಗಿದೆ.

ಇದು ಉದ್ದೇಶ ಪೂರ್ವಕವೇ ಅಥವಾ ಅನಿರೀಕ್ಷಿತವೇ ಎಂಬ ಗೊಂದಲ ಕಾಡಲಾರಂಭಿಸಿದೆ. ಆದರೆ, ಬಿಜೆಪಿ ನಾಯಕರು ಇದನ್ನು ಸಕಾರಾತ್ಮ ಬೆಳವಣಿಗೆ ಎಂದು ವಿಶ್ಲೇಷಿಸಲಾರಂಭಿಸಿದ್ದಾರೆ. ಅಸೋಂನಲ್ಲಿ 22, ಮಧ್ಯಪ್ರದೇಶದಲ್ಲಿ 20, ಬಿಹಾರ ಮತ್ತು ಛತ್ತೀಶ್‍ಗಢದಲ್ಲಿ ತಲಾ 6, ಗೋವಾದಲ್ಲಿ 4, ಗುಜರಾತ್‍ನಲ್ಲಿ 10 ಪ್ರತಿಪಕ್ಷಗಳ ಶಾಸಕರು ಎನ್‍ಡಿಎ ಅಭ್ಯರ್ಥಿಗೆ ಮತ ಹಾಕಿದ್ದಾರೆ.

ಉಳಿದಂತೆ ಎನ್‍ಸಿಪಿ, ಜೆಎಂಎಂ, ವೈಎಸ್‍ಆರ್, ಜೆಡಿಎಸ್, ಶಿವಸೇನೆ ಸೇರಿದಂತೆ ಹಲವು ಪಕ್ಷಗಳು ದ್ರೌಪದಿ ಮುರ್ಮು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದವು. ಬೆಂಬಲಿತ ಪಕ್ಷಗಳು ಹೊರತುಪಡಿಸಿಯೂ ಕೂಡ ಮುರ್ಮು ಅಡ್ಡಮತದಾನದ ಮೂಲಕ ಪ್ರತಿಪಕ್ಷಗಳ ಬೆಂಬಲ ಪಡೆದಿರುವುದು ಗಮನ ಸೆಳೆದಿದೆ.

ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್‍ನ ಇಬ್ಬರು ಸಂಸದರು, ಒಬ್ಬ ಎಂಎಲ್‍ಎ ಅಡ್ಡಮತದಾನ ಮಾಡಿದ್ದು, ದ್ರೌಪದಿ ಮುರ್ಮು ಅವರಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್‍ನ ನಾಯಕರಾಗಿದ್ದು, ಮಮತಾ ಬ್ಯಾನರ್ಜಿ ಅವರೇ ಖುದ್ದು ಆಸಕ್ತಿವಹಿಸಿ ಕಣಕ್ಕಿಳಿಸಿದ್ದರು. ಯಶವಂತ್‍ಸಿನ್ಹಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

Articles You Might Like

Share This Article