ಮರಾಠ ಅಭಿವೃದ್ಧಿ ನಿಗಮ ವಿಷಯದಲ್ಲಿ ಪ್ರತಿಪಕ್ಷಗಳು ಗಪ್ ಚುಪ್..!

ಬೆಂಗಳೂರು, ಡಿ.5- ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡುವ ಸರ್ಕಾರದ ಕ್ರಮದಿಂದ ರಾಜ್ಯಾದ್ಯಂತ ಆಕ್ರೊಶ ಭುಗಿಲೆದ್ದಿದೆ. ಬಿಜೆಪಿ ಕೇವಲ ರಾಜಕೀಯ ಕಾರಣಕ್ಕಾಗಿ ಉಪಚುನಾವಣೆ ಗೆಲುವಿಗಾಗಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿ ಕನ್ನಡದ ಹಿತಾಸಕ್ತಿಯನ್ನು ಬಲಿ ಕೊಡುತ್ತಿವೆ ಎಂದು ಕನ್ನಡಪರ ಹೋರಾಟಗಾರರು ನಾಡಿನಾದ್ಯಂತ ಒಕ್ಕೊರಲ ಖಂಡನೆ ವ್ಯಕ್ತಪಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿವೆ. ಸರ್ಕಾರ ಕೈಗೊಂಡಿರುವ ಈ ಕ್ರಮದ ವಿರುದ್ಧ ಕೇವಲ ಕನ್ನಡಪರ ಸಂಘಟನೆಗಳಷ್ಟೇ ಹೋರಾಟ ಮಾಡಬೇಕೆ, ಪ್ರತಿಪಕ್ಷಗಳಿಗೆ ಯಾವುದೇ ಜವಾಬ್ದಾರಿ ಇಲ್ಲವೇ ಎಂಬುದು ಕನ್ನಡಪರ ಹೋರಾಟಗಾರರ ಗಂಭೀರ ಆರೋಪವಾಗಿದೆ.

ಬೆಳಗಾವಿಯಲ್ಲಿ ಹಾಗೂ ಬಸಕಲ್ಯಾಣದಲ್ಲಿ ನೆಲೆಸಿರುವ ಮರಾಠಿಗರ ಮತಗಳನ್ನು ಸೆಳೆಯುವ ಏಕೈಕ ಉದ್ದೇಶದಿಂದಷ್ಟೇ ಮರಾಠ ಅಭಿವೃದ್ಧಿ ನಿಗಮವನ್ನು ರಚನೆ ಮಾಡಲಾಗಿದೆ ಎಂಬುದು ಪ್ರತಿಪಕ್ಷಗಳು ಸೇರಿದಂತೆ ಕನ್ನಡಪರ ಹೋರಾಟಗಾರರ ಗಂಭೀರ ಆರೋಪವಾಗಿದೆ. ಆದರೆ ಇದರ ವಿರುದ್ಧ ಬೀದಿಗಿಳಿದು ಸೆಣಸಾಡುತ್ತಿರುವವರು ಕನ್ನಡ ಪರ ಹೋರಾಟಗಾರರು ಮಾತ್ರ.

ನೆಲ-ಜಲ, ನಾಡು-ನುಡಿ, ಸಂಸ್ಕøತಿ- ಗಡಿ, ನದಿ ವಿಷಯದಲ್ಲಿ ದಕ್ಕೆಯಾದಾಗ ಮೊದಲು ಹೋರಾಟಕ್ಕೆ ಇಳಿಯುವವರು ಕನ್ನಡಿಗರು. ಆದರೆ ಇದರ ಲಾಭ ಪಡೆಯುವವರು ರಾಜಕಾರಣಿಗಳು. ಸರ್ಕಾರ ಚುನಾವಣಾ ಲಾಭಕ್ಕಾಗಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿವೆ.

ಆದರೆ ಇದನ್ನು ವಿರೋಧಿಸಬೇಕಾದ ಪ್ರತಿಪಕ್ಷಗಳು ಮಾತ್ರಕೈಕಟ್ಟಿ ಕುಳಿತಿವೆ. ಕಾರಣ ಮುಂಬರುವ ಚುನಾವಣೆಯಲ್ಲಿ ಎಲ್ಲಿ ಮರಾಠಿಗರ ಮತಗಳು ನಮ್ಮ ಕೈ ತಪ್ಪುತ್ತವೋ ಎಂಬ ಆತಂಕ ಪ್ರತಿಪಕ್ಷಗಳಿಗೂ ಇದೆ. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಹಲವು ಮುಖಂಡರು ಹಿಂದಿಯನ್ನು ಸಾರಾಸಗಟಾಗಿ ವಿರೋಧಿಸುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿರಬೇಕು. ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಹಿಂದಿ ಹೇರಿಕೆ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವ ಕನ್ನಡಪರ ಸಂಘಟನೆಗಳಿಗೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಕೈಜೋಡಿಸುತ್ತವೆ. ಆದರೆ ಮರಾಠ ಅಭಿವೃದ್ಧಿ ನಿಗಮದ ವಿಷಯದಲ್ಲಿ ಮೌನ ವಹಿಸಿವೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಭಾಷಾ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಪ್ರತ್ಯೇಕಗೊಳಿಸುವುದು ಎಂಬ ಹೇಳಿಕೆಯನ್ನು ನೀಡಿದ್ದು ಬಿಟ್ಟರೆ ಯಾವುದೇ ರೀತಿಯ ಖಂಡನೆ ಮಾಡಿಲ್ಲ.

ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಚುನಾವಣೆಯಲ್ಲಿ ಎಲ್ಲಿ ಮರಾಠಿಗರ ಮತಗಳು ಕೈತಪ್ಪುತ್ತವೋ ಎಂಬ ಆತಂಕ ಕೂಡ ಅವರಿಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಕಾಂಗ್ರೆಸ್ ಕೈಜೋಡಿಸಿದೆ. ಇಲ್ಲಿ ಅನಗತ್ಯವಾಗಿ ಮರಾಠಿಗರನ್ನು ಏಕೆ ವಿರೋಧ ಮಾಡಿಕೊಳ್ಳಬೇಕು ಎಂಬ ಧೋರಣೆ ಕೂಡ ಇರಬಹುದೇನೊ…?

ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕೂಡ ಬಿಜೆಪಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಚಕಾರವೆತ್ತಿಲ್ಲ. ಹಾಗಾಗಿ ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಹೋರಾಟ ಮಾಡುತ್ತಿರುವ ಕನ್ನಡಪರ ಸಂಘಟನೆಗಳಿಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಸಿಕ್ಕಿಲ್ಲ.

ಪ್ರತಿಪಕ್ಷಗಳಿಗೆ ರಾಜ್ಯದ ಹಿತಾಸಕ್ತಿ ಬೇಕಾಗಿಲ್ಲವೆ? ನಾಡ ವಿರೋಧಿ ಧೋರಣೆ ಎಂದು ಹೋರಾಟ ಮಾಡುವ ನಾಡಪರ ಹೋರಾಟಗಾರರ ಬೆಂಬಲಕ್ಕೆ ನಿಲ್ಲಬೇಕಾದ ಅಗತ್ಯವಿಲ್ಲವೆ, ಕೇವಲ ಮತ ಬ್ಯಾಂಕ್ ಅಷ್ಟೇ ಮುಖ್ಯವೇ, ಮರಾಠ ಅಭಿವೃದ್ಧಿ ನಿಗಮ ರಚನೆಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಿ ರಾಜ್ಯಾದ್ಯಂತ ಹೋರಾಟ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಮುಂತಾದವರು ಈ ವಿಷಯದಲ್ಲಿ ಪ್ರತಿಪಕ್ಷಗಳು ನಮ್ಮ ಜೊತೆ ನಿಲ್ಲಲಿಲ್ಲ.

ಅವು ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಮತಗಳ ಮೇಲೆ ಕಣ್ಣಿಟ್ಟು ನಾಡಿನ ಹಿತಾಸಕ್ತಿಯನ್ನು ಕಡೆಗಣಿಸಿದ್ದರಿಂದ ಇಂತಹ ದುರಾದೃಷ್ಟಕರ ಪರಿಸ್ಥಿತಿ ಎದುರಾಗಿದೆ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇರುತ್ತದೋ ಪ್ರತಿಪಕ್ಷಗಳಿಗೂ ಕೂಡ ಅಷ್ಟೇ ಜವಾಬ್ದಾರಿ ಇರಬೇಕು. ಆದರೆ ಈ ವಿಷಯದಲ್ಲಿ ಪ್ರತಿಪಕ್ಷಗಳು ಜಾಣ ಮೌನಕ್ಕೆ ಶರಣಾಗಿರುವುದು ಖಂಡನೀಯ.