ಗೊಟಬಯ ರಾಜಪಕ್ಸೆ ಅಕ್ರಮಗಳ ವಿರುದ್ಧ ತನಿಖೆಗೆ ಪ್ರತಿಪಕ್ಷಗಳ ಆಗ್ರಹ

Social Share

ಕೊಲೊಂಬೊ,ಆ.21- ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಜನಾಕ್ರೋಶಕ್ಕೆ ಹೆದರಿ ದೇಶಭ್ರಷ್ಟರಾಗಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಕ್ರಮಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂದು ಪ್ರತಿಪಕ್ಷ ಆಗ್ರಹಿಸಿದೆ.

ಶ್ರೀಲಂಕಾದ ಪ್ರಮುಖ ಪ್ರತಿಪಕ್ಷವಾಗಿರುವ ಸಮಗಿಜನ ಬಲವೇಗಯ, ಗೊಟಬಯ ಈ ದೇಶದ ಪ್ರಜೆ. ಅವರು ತಾಯ್ನಾಡಿಗೆ ಮರಳಲು ಎಲ್ಲ ಅಧಿಕಾರ ಹೊಂದಿದ್ದಾರೆ. ಅದನ್ನು ತಡೆಯಲು ಯಾರಿಗೂ ಅಧಿಕಾರ ಇಲ್ಲ. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪಕ್ಷದ ಮುಖ್ಯ ಕಾಯ ನಿರ್ವಹಣಾಧಿಕಾರಿ ಅಜೀತ್ ಪೆರೇರಾ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಮಾಜಿ ಅಧ್ಯಕ್ಷರಿಗೆ ಭದ್ರತಾ ಸಿಬ್ಬಂದಿ ಸಹಾಯಕ ಅಧಿಕಾರಿಗಳು ಸೇರಿ ಕೆಲವು ಶಿಷ್ಟಾಚಾರಗಳಿವೆ. ಹೀಗಾಗಿ ಗೊಟಬಯ ದೇಶಕ್ಕೆ ಮರಳಬಹುದೆಂಬ ಚರ್ಚೆಗಳು ನಡೆಯುತ್ತಿವೆ. ಗೊಟಬಯ ಅವರು ತಮ್ಮ ತಂದೆ-ತಾಯಿ ಸ್ಮಾರಕಗಳಿಗಾಗಿ ಸರ್ಕಾರದ ಹಣ ಖರ್ಚು ಮಾಡಿದ್ದಾರೆ. ಆ ಪ್ರಕರಣ ವಿಚಾರಣಾ ಹಂತದಲ್ಲಿದೆ. ಒಂದು ವೇಳೆ ಸಾಬೀತಾದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಅವರು ಸಾಂವಿಧಾನಿಕವಾಗಿ ಲಭ್ಯವಿರುವ ಶಿಷ್ಟಾಚಾರಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುಮಾರು ಒಂದು ಬಿಲಿಯನ್ ಅಮೆರಿಕನ್ ಡಾಲರ್ ಅವ್ಯವಹಾರ ಗೊಟಬಯ ವಿರುದ್ಧ ಕೇಳಿಬಂದಿದೆ. ಶ್ರೀಲಂಕಾ ಮಿತಿಮೀರಿದ ವಿದೇಶಿ ಸಾಲ, ವಿದೇಶಿ ವಿನಿಮಯ ಕೊರತೆಯಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತ್ತು. ಜನ ನಿತ್ಯದ ಅಗತ್ಯ ವಸ್ತುಗಳಿಗಾಗಿ ದುಬಾರಿ ತೆತ್ತಲು ಲಭ್ಯತೆ ಕೊರತೆಯಿಂದ ಪರದಾಡಿದ್ದರು.

ಕೊನೆಗೆ ಸಿಟ್ಟಾದ ಜನಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ಅರಮನೆಗೆ ನುಗ್ಗಿ ಕಚೇರಿಯನ್ನು ವಶಪಡಿಸಿಕೊಂಡಿದ್ದರು. ಪ್ರಧಾನಿ ಕಚೇರಿಗೂ ನುಗ್ಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಂಸತ್ ಅಧಿವೇಶನ ನಡೆದು ರಣೀಲೆ ವಿಕ್ರಮ ಸಿಂಘೇ ಅಧ್ಯಕ್ಷರಾಗಿದ್ದಾರೆ.

Articles You Might Like

Share This Article