ಸಾವಯವ ‘ರೈತ ಸಂತೆ’ಗೆ ಚಾಲನೆ ನೀಡಿದ ಸಚಿವ ಯೋಗೇಶ್ವರ್
ದೊಡ್ಡಬಳ್ಳಾಪುರ, ಮಾ.14- ಸ್ವತಃ ನಾನು ರೈತನಾಗಿದ್ದು, ಕೃಷಿ ಬಗ್ಗೆ ನನಗೂ ಸಾಕಷ್ಟು ವಾಸ್ತವಿಕ ಅನುಭವವಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಇಂದಿಲ್ಲಿ ಹೇಳಿದರು. ಸ್ವದೇಶಿ ಜಾಗರಣ ಮಂಚ್ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಸಾವಯವ ಸಂತೆಯಲ್ಲಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂತೆ ಎಂಬ ಪದ ಕೆಲವು ದಶಕಗಳ ಹಿಂದೆ ಎಲ್ಲರ ಮನೆ ಮಾತಾಗಿತ್ತು. ಆದರೆ, ಆಧುನಿಕತೆ ಬೆಳೆದಂತೆ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆಗಳು, ಮಾಲ್ಗಳು ಅಸ್ತಿತ್ವಕ್ಕೆ ಬಂದಿವೆ ಎಂದರು. ಇತಿಹಾಸ ಮರುಕಳಿಸುವುದಿಲ್ಲ ಎಂದು ಹಲವರು ಹೇಳುತ್ತಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ. ಅದಕ್ಕೆ ಸಾವಯವ ಸಂತೆಯೇ ಬಹುದೊಡ್ಡ ಉದಾಹರಣೆಯಾಗಿದೆ ಎಂದರು.
1960ರ ನಂತರ ಪಾರಂಪರಿಕ ಕೃಷಿ ಪದ್ಧತಿ ಕಡಿಮೆಯಾಗುತ್ತ ಸಾಗಿದೆ. ಈ ಸ್ಥಳದಲ್ಲಿ ಆಧುನಿಕ ಕೃಷಿ ಪದ್ಧತಿ ಮೇಳೈಸುತ್ತ ಬಂದಿದೆ. ರೈತರು ಪಾರಂಪರಿಕ ಕೃಷಿ ಪದ್ಧತಿಗೆ ವಿರುದ್ಧವಾಗಿ ವ್ಯವಸಾಯ ಮಾಡಲು ಆರಂಭಿಸಿದರು. ಹೆಚ್ಚಿನ ಇಳುವರಿಗೆ ಪ್ರಾಮುಖ್ಯತೆ ನೀಡಿ, ಕೃತಕ ರಾಸಾಯನಿಕ ಗೊಬ್ಬರಗಳು ಹಾಗೂ ರಾಸಾಯನಿಕ ಕೀಟ-ನಾಶಕಗಳನ್ನು ಹೆಚ್ಚು ಹೆಚ್ಚು ಬಳಸತೊಡಗಿದರು.
ಅನ್ನದಾತನಿಗೆ ಅರಿವಿಲ್ಲದಂತೆ ಭೂಮಿ ತಾಯಿ ಫಲವತ್ತತೆ ಕಳೆದುಕೊಳ್ಳುತ್ತ ಸಾಗಿದಳು. ಅನ್ನದ ಬಟ್ಟಲು ವಿಷವಾಯಿತು ಎಂದು ಸಚಿವರು ನುಡಿದರು. ಪ್ರಕೃತಿಯಲ್ಲಿ ದೊರೆಯುವ ಯಾವುದೇ ವಸ್ತುಗಳನ್ನು ನಾವು ಮರುಸೃಷ್ಟಿ ಮಾಡಲು ಸಾಧ್ಯವಿಲ್ಲ. ಈ ಸತ್ಯವನ್ನು ನಾವು ನೀವೆಲ್ಲರೂ ತಿಳಿದುಕೊಳ್ಳಬೇಕು. 50 ವರ್ಷಗಳ ಹಿಂದೆ ರೈತನ ಹೊಲದಲ್ಲಿ ಇಂಗಾಲದ ಪ್ರಮಾಣ ಶೇ.5 ರಿಂದ ಶೇ.6 ರಷ್ಟು ಇತ್ತು.
ಇಂದು ಅನ್ನದಾತನ ಹೊಲದಲ್ಲಿನ ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಶೇ.0.2ಕ್ಕಿಂತಲೂ ಕಡಿಮೆಯಾಗಿದೆ. ಅಂದರೆ ಭೂಮಿ ತಾಯಿ ಅನಾರೋಗ್ಯ ಪೀಡಿತಳಾಗಿದ್ದಾಳೆ ಎಂದು ವಿಷಾದಿಸಿದರು. ಮನುಷ್ಯನ ರಕ್ತದಲ್ಲಿ ಸಕ್ಕರೆ ಹಾಗೂ ಹಿಮೋಗ್ಲೋಬಿನ್ ಅಂಶ ಎಷ್ಟು ಮುಖ್ಯವೋ ಮಣ್ಣಿನ ಆರೋಗ್ಯದಲ್ಲಿ ಇಂಗಾಲದ ಅಂಶವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಈ ಅಂಶವನ್ನು ಎಲ್ಲರೂ ಮನಗಂಡು ಭೂಮಿಯ ಫಲವತ್ತತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಸಾವಯವ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ 500 ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದರು.
ಸಾವಯವ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯಬೇಕು ಮತ್ತು ಅದನ್ನು ಜನರು ಸ್ವೀಕರಿಸಬೇಕು ಎಂದು ಮನವಿ ಮಾಡಿದರು.