ಮಾಸ್ಕೋವ್, ಮಾ.4- ಭಾರತ ಸೇರಿದಂತೆ ವಿದೇಶಿಯರು ಯುದ್ಧ ಭೂಮಿ ಬಿಟ್ಟು ಹೋಗದಂತೆ ಉಕ್ರೇನ್‍ನ ನವ ನಾಜಿಗಳು ತಡೆಯುತ್ತಿದ್ದು, ತಮ್ಮ ರಕ್ಷಣೆಗಾಗಿ ಮನುಷ್ಯರನ್ನು ರಕ್ಷಾ ಕವಚವನ್ನಾಗಿ ಬಳಕೆ ಮಾಡುತ್ತಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವಾಲ್ಡಿಮಿರ್ ಪುಟಿನ್ ಆರೋಪಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಸತ್ಯವೆಂದರೆ ನಾವು ನವ ನಾಜಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅವರು ವಿದೇಶಿಯರನ್ನು ಎಷ್ಟು ದಿನಗಳವರೆಗೆ ಒತ್ತೆಯಾಳಾಗಿ ಇರಿಸಿಕೊಳ್ಳಲು ಸಾಧ್ಯವೆಂದು ನೋಡುತ್ತೇವೆ. ಮಧ್ಯ ಪೂರ್ವ ಭಾಗದ ವಿದೇಶಿ ವಲಸಿಗರನ್ನು ರಾಷ್ಟ್ರೀಯವಾದಿ ನಿಯೋ ನಾಜಿಗಳ ಘಟಕಗಳು ಮಾನವ ಕವಚಗಳನ್ನಾಗಿ ಬಳಕೆ ಮಾಡಿಕೊಂಡು ಅವರ ಹಿಂದೆ ಅವಿತುಕೊಂಡಿದ್ದಾರೆ.
ಉಕ್ರೇನಿಯರು ಜನವಸತಿ ಪ್ರದೇಶದಲ್ಲಿ ಭಾರಿ ಪ್ರಮಾಣದ ಆಯುಧ ಹಾಗೂ ಸೇನೆಯನ್ನು ನಿಯೋಜಿಸಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ. ಅವರು ಶಿಶುವಿಹಾರ ಹಾಗೂ ಆಸ್ಪತ್ರೆಯಲ್ಲಿರುವ ಗೂಂಡಾಗಳಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ಬಂದೂಕು, ಟ್ಯಾಂಕ್‍ಗಳನ್ನು ತೆಗೆದುಕೊಳ್ಳಲಿ, ಆದರೆ ಉಕ್ರೇನ್ ನಲ್ಲಿ ಓದಲು ಬಂದ ಸಾವಿರಾರು ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ತಮ್ಮ ಬಳಿ ಇರುವ ಮಾಹಿತಿ ಪ್ರಕಾರ ಸುಮಾರು 3 ಸಾವಿರ ವಿದ್ಯಾರ್ಥಿಗಳನ್ನು ಉಕ್ರೇನಿಯರನ್ನರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಪುಟಿನ್ ಆರೋಪಿಸಿದ್ದಾರೆ. ಒತ್ತೆಯಾಳುಗಳ ಪೈಕಿ 576 ಮಂದಿ ಸುಮಿಗಳು ಸೇರಿದ್ದಾರೆ. ಕ್ಯಿವ್‍ನಿಂದ ಹೊರ ಹೋಗಲು ಮುಂದಾದ ವಿದ್ಯಾರ್ಥಿಗಳ ಮೇಲೆ ನವ ನಾಜಿಗಳು ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ನಿನ್ನೆ ಸ್ಪಷ್ಟನೆ ನೀಡಿ ತಮಗೆ ಈವರೆಗೂ ಉಕ್ರೇನ್ ನಲ್ಲಿ ಭಾರತೀಯರು ಒತ್ತೆಯಾಳಾಗಿರುವ ಯಾವ ಮಾಹಿತಿಯೂ ಬಂದಿಲ್ಲ ಎಂದು ಸ್ಪಷ್ಟ ಪಡಿಸಿತ್ತು.
ಆದರೆ ಭಾರತೀಯ ವಿದ್ಯಾರ್ಥಿಗಳು ಪುಟಿನ್ ಅವರ ಆರೋಪಕ್ಕೆ ಪೂರಕವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದು, ತಮ್ಮ ಸಹವರ್ತಿಗಳು ಒತ್ತೆಯಾಳಾಗಿದ್ದಾರೆ ಎಂದು ಆರೋಪಿಸಿದ್ದಾರೆ. ರಷ್ಯಾ ಉಕ್ರೇನ್ ವಿದೇಶಿಯರನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ಆರೋಪಿಸಿದರೆ, ಉಕ್ರೇನ್ ರಷ್ಯಾ ಸೈನಿಕರು ವಿದೇಶಿಯರನ್ನು ಅಪಹರಿಸುತ್ತಿದೆ ಎಂದು ಆರೋಪಿಸಿದೆ. ಆರೋಪ ಪ್ರತ್ಯಾರೋಪದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಆತಂಕ ಮತ್ತಷ್ಟು ಹೆಚ್ಚಾಗಿದೆ.
