ಈಶ್ವರಪ್ಪ ತಲೆದಂಡಕ್ಕೆ ಕಾಂಗ್ರೆಸ್ ಪಟ್ಟು

Social Share

ಬೆಂಗಳೂರು,ಫೆ.19- ಸಚಿವ ಈಶ್ವರಪ್ಪ ಅವರ ವಿವಾದಿತ ಹೇಳಿಕೆ ಖಂಡಿಸಿ ಉಭಯ ಮಂಡಲದಲ್ಲಿ ಕಾಂಗ್ರೆಸ್‍ನ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದ್ದು, ಸಚಿವರ ತಲೆದಂಡದವರೆಗೂ ಕೊನೆಯಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಬುಧವಾರ ವಿಧಾನಮಂಡಲದಲ್ಲಿ ವಿಷಯ ಪ್ರಸ್ತಾಪಿಸಿರುವ ಕಾಂಗ್ರೆಸ್ ಸದಸ್ಯರು ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಆಡಳಿತ ಪಕ್ಷ ಕಾಂಗ್ರೆಸ್‍ನ ಒತ್ತಡಕ್ಕೆ ಸೊಪ್ಪು ಹಾಕಿಲ್ಲ. ಹೀಗಾಗಿ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು ಇಂದು ಮತ್ತು ನಾಳೆ ಅಧಿವೇಶನ ಪ್ರಕ್ರಿಯೆಗಳು ಕೂಡ ನಡೆಯುತ್ತಿಲ್ಲ. ಆಗಿದ್ದರೂ ಕಾಂಗ್ರೆಸ್ ಸದಸ್ಯರು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ. ನಿನ್ನೆ ರಾತ್ರಿ ಕಾಂಗ್ರೆಸ್ ಸದಸ್ಯರು ಅಂತಾಕ್ಷರಿ ಹಾಡುವ ಮೂಲಕ ಸಮಯ ಕಳೆದಿದ್ದಾರೆ. ಇಂದು ಮತ್ತು ನಾಳೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ಸರಣಿಗಳನ್ನು ಸಂಯೋಜಿಸುವ ಸಾಧ್ಯತೆಯಿದೆ.
ಇಂದು ಮುಂಜಾನೆ ಶಾಸಕರು ವಿಧಾನಸೌಧ ಆವರಣದಲ್ಲಿ ವಾಯುವಿಹಾರ ನಡೆಸಿದರು. ದಿನಪತ್ರಿಕೆಗಳನ್ನು ಓದಿ ಪರಸ್ಪರ ಸಮಾಲೋಚನೆ ನಡೆಸಿದರು. ಕೆಲವರು ಯೋಗಾಸನ ಮಾಡಿದರು. ಮಧುಮೇಹ, ಬಿಪಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ವೈದ್ಯರಿಂದ ಲಘು ತಪಾಸಣೆಗೆ ಒಳಗಾದರು.
ನಂತರ ಧರಣಿ ಮುಂದುವರೆಸಿದ್ದಾರೆ. ಸಚಿವ ಈಶ್ವರಪ್ಪ ಅವರು ನೀಡಿರುವ ಹೇಳಿಕೆ ರಾಷ್ಟ್ರ ದ್ರೋಹಕ್ಕೆ ಸಮಾನವಾಗಿದೆ. ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ತೆಗೆದು ಕೇಸರಿ ಬಾವುಟ ಹಾರಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಮನುವಾದವನ್ನು ಜಾರಿಗೆ ತಂದಂತಾಗುತ್ತದೆ.
ಈಶ್ವರಪ್ಪ ಅವರ ಹೇಳಿಕೆ ಆರ್‍ಎಸ್‍ಎಸ್‍ನ ಮನಸ್ಸಿನಲ್ಲಿ ಮೊಳಕೆಯೊಡೆದ ಚಿಂತನೆಗಳಾಗಿವೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ.
ಸಂವಿಧಾನಾತ್ಮಕವಾಗಿ ಚುನಾಯಿತರಾಗಿ ಪ್ರಮಾಣವಚನ ಸ್ವೀಕರಿಸಿದ ಈಶ್ವರಪ್ಪನವರೇ ಈ ರೀತಿ ಪ್ರಜಾಪ್ರಭುತ್ವ ವಿರೋ ಹೇಳಿಕೆ ನೀಡುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ವಿರೋಧಿ ನಡೆ ಅನುಸರಿಸಿದ ಈಶ್ವರಪ್ಪನವರು ಪ್ರಜಾಪ್ರಭುತ್ವದ ಸರ್ಕಾರದಲ್ಲಿ ಸಚಿವರಾಗುವ ಅಗತ್ಯವಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂಬುದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಮುಂದಿನ ಹೋರಾಟ ಮತ್ತು ರಣತಂತ್ರದ ಬಗ್ಗೆ ಪ್ರಮುಖ ನಾಯಕರು ಚರ್ಚೆ ನಡೆಸಲಿದ್ದಾರೆ.

Articles You Might Like

Share This Article