ಆಮ್ಲಜನಕ ತಯಾರು, ದಾಸ್ತಾನು, ವಿತರಣೆ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳ ನೇಮಕ

ಬೆಂಗಳೂರು, ಮೇ 8- ಕೋವಿಡ್-19 ರೋಗವನ್ನು ತಡೆಗಟ್ಟಲು ಅವಶ್ಯವಿರುವ ಆಮ್ಲಜನಕ ಸಿಲಿಂಡರ್ ಗಳ ವ್ಯವಸ್ಥೆ ಸರಾಗವಾಗಿ ಒದಗಿಸುವ ಸಲುವಾಗಿ ಔಷಧ ನಿಯಂತ್ರಣ ಇಲಾಖೆ ಆದೇಶದಂತೆ ಆಮ್ಲಜನಕ ಸಿಲಿಂಡರ್ ಪ್ಲಾಂಟ್‌ಗಳ, ಲಿಕ್ವಿಡ್ ಆಮ್ಲಜನಕ ತಯಾರು ಮಾಡುವ ಘಟಕಗಳಲ್ಲಿ ದಾಸ್ತಾನು ಮತ್ತು ವಿತರಣೆಗಳ ಬಗ್ಗೆ ನಿಗಾ ವಹಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು ಪಾಳೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ‌ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ಅಧಿಕಾರಿಗಳು ಜಿಲ್ಲೆಯಲ್ಲಿರುವ ಆಮ್ಲಜನಕ ಸಿಲಿಂಡರ್ ಪ್ಲಾಂಟ್‌ಗಳ, ಲಿಕ್ವಿಡ್ ಆಮ್ಲಜನಕ ತಯಾರಿಸುವ ಘಟಕಗಳಿಗೆ ಖುದ್ದು ಸ್ಥಳ ಪರಿಶೀಲನೆ ಮಾಡಬೇಕು. ಆಮ್ಲಜನಕ ಸಿಲಿಂಡರ್ ಪ್ಲಾಂಟ್‌ಗಳ, ಲಿಕ್ವಿಡ್ ಆಮ್ಲಜನಕ ತಯಾರು ಮಾಡುವ ಘಟಕಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಮ್ಲಜನಕ ನೋಡಲ್ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ ಅವರನ್ನು ನೇಮಿಸಲಾಗಿದೆ. ಅವರಿಗೆ ವಿಷೇಶ ಆಮ್ಲಜನಕ ಸಮನ್ವಯ ಅಧಿಕಾರಿಗಳಾಗಿ ಪ್ರೊಬೇಷನರಿ ಎ.ಸಿ ಸಂತೋಷ ಪಾಟಿಲ್ ಮೊ.ಸಂ.: 9845482973, ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಎಂ‌. ಹಫೀಜ್ ಮೊ.ಸಂ.: 9448381916, ಆರೋಗ್ಯ ಇಲಾಖೆ ಲೆಕ್ಕಾಧಿಕಾರಿ ಮಾರುತಿ ಮೊ.ಸಂ.: 8310654261ಅವರನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಇವರು ಪ್ರತಿದಿನ ಕ್ಯಾಂಪ್ ಅಧಿಕಾರಿಗಳಿಂದ ಮಾಹಿತಿ ಪಡೆದು, ರಾಜ್ಯ ನೋಡಲ್ ಅಧಿಕಾರಿಗೆ ಇಮೇಲ್ ಮೂಲಕ ವರದಿ ನೀಡಬೇಕು. ಪ್ರತಿದಿನ ಆಸ್ಪತ್ರೆಗಳಿಂದ ಆಮ್ಲಜನಕ ಅವಶ್ಯಕತೆ, ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಮಾಹಿತಿ ಪಡೆದು, ಆಸ್ಪತ್ರೆಗಳಲ್ಲಿ ಆಮ್ಲಜನಕ ಬಳಕೆಯ ಬಗ್ಗೆ ಆಡಿಟ್ ವರದಿಯನ್ನು ಪಡೆಯುವುದು ಹಾಗೂ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸಮನ್ವಯ ಮಾಡಿಕೊಂಡು ಯಾವುದೇ ಲೋಪಗಳು ಬಾರದ ಹಾಗೆ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ತಾಲ್ಲೂಕುವಾರು ನೇಮಕವಾಗಿರುವ ಎಲ್ಲಾ ಕ್ಯಾಂಪ್ ಅಧಿಕಾರಿಗಳು ತಮಗೆ ಸೂಚಿಸಿರುವ ತಯಾರಿಕ ಘಟಕದಲ್ಲಿ ಖುದ್ದಾಗಿ ಇದ್ದು, ಅದರ ಮಾಹಿತಿಯನ್ನು ಪಡೆಯಬೇಕು. ಆಮ್ಲಜನಕ ಸರಬರಾಜು ಆಗುವ ಬಗ್ಗೆ ಮಾಹಿತಿ ಪಡೆಯುವುದು ಮತ್ತು ತಯಾರು ಘಟಕದ ಕೇಂದ್ರ ಸ್ಥಾನದಲ್ಲಿ ಹಾಜರಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಮ್ಲಜನಕ ಸರಬರಾಜು ಆಗುವ, ಆಗುತ್ತಿರುವ ಮಾಹಿತಿಯನ್ನು ಖುದ್ದಾಗಿ ನೋಡಿ ಪರಿಶೀಲಿಸಿ ವರದಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ತಮಗೆ ನೀಡಿರುವ ಕೆಲಸದಲ್ಲಿ ನಿರ್ಲಕ್ಷತನ ಹಾಗೂ ಬೇಜಬ್ದಾರಿತನ ತೋರುವುದು, ಸರ್ಕಾರಿ ಕೆಲಸದಲ್ಲಿ ಕರ್ತವ್ಯ ಲೋಪವೆಸಗುವುದು ಕಂಡು ಬಂದಲ್ಲಿ, ಅಂತಹವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ನಿಯಮ 55 (1) (2) ರಡಿ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುಲು ಶಿಫಾರಸ್ಸು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.