ಪತ್ರಿಕಾರಂಗದ ಭೀಷ್ಮ ಪಿ.ರಾಮಯ್ಯನವರ ‘ನಾನು ಹಿಂದೂ ರಾಮಯ್ಯ’ ಕೃತಿ ಬಿಡುಗಡೆ

Social Share

ಬೆಂಗಳೂರು, ಅ.27 : ಅಭಿಮಾನಿ ಪ್ರಕಾಶನ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿ ವತಿಯಿಂದ ಗಾಂಧಿಭವನದದಲ್ಲಿ ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ತಮ್ಮ 60 ವರ್ಷಗಳ ಸುದೀರ್ಘ ಅನುಭವದ ಕಥನವನ್ನು `ನಾನು ಹಿಂದೂ ರಾಮಯ್ಯ’ ಎಂಬ ಕೃತಿ ನಾನು ಹಿಂದೂ ರಾಮಯ್ಯ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃತಿ ಲೋಕಾರ್ಪಣೆ ಮಾಡಿದರು.

# ಎಲ್ಲರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ :

ನನ್ನ 45 ವರ್ಷಗಳ ಸುದೀರ್ಘ ಪತ್ರಿಕಾ ವೃತ್ತಿಯಲ್ಲಿ ಸಮಾಜದ ಎಲ್ಲ ವರ್ಗಗಳ ಪ್ರೀತಿ-ವಿಶ್ವಾಸ ಗಳಿಸಿರುವುದೇ ನನ್ನ ದೊಡ್ಡ ಆಸ್ತಿ ಎಂದು ಹಿರಿಯ ಪತ್ರಕರ್ತರಾದ ಪಿ.ರಾಮಯ್ಯ ಅವರು ಇಂದಿಲ್ಲಿ ಹೇಳಿದರು. ಗಾಂಧಿಭವನದಲ್ಲಿಂದು ನಾನು ಹಿಂದೂ ರಾಮಯ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾ ವಲಯದಲ್ಲಿ ಮರೆಯಲಾರದಂತಹ ಕ್ಷಣಗಳನ್ನು ನಾನು ಸಾಕಷ್ಟು ನೋಡಿದ್ದೇನೆ. ವಿಧಾನಸೌಧದ 4ನೆ ದರ್ಜೆ ನೌಕರನಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೂ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದೇನೆ. ಅದು ನಾನೆಂದೂ ಮರೆಯಲಾರದಂತಹ ಮತ್ತು ಸಂಪಾದಿಸಿದ ದೊಡ್ಡ ಆಸ್ತಿ ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು

ಪತ್ರಿಕಾ ಕ್ಷೇತ್ರದಲ್ಲಿ ಹಲವರ ಜತೆ ಕೆಲಸ ಮಾಡಿದ್ದೇನೆ. ಅದರಂತೆಯೇ ಶಾಸಕಾಂಗದಲ್ಲೂ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಕೆಲಸ ಮಾಡುವ ಸದಾವಕಾಶ ಸಿಕ್ಕಿತ್ತು. ಅದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಹೇಳಿದರು.

ನಾನು ಕನ್ನಡದಲ್ಲಿ ಓದಿದ್ದರೂ ಕೂಡ ಆಂಗ್ಲ ಪತ್ರಿಕೋದ್ಯಮದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಇವರೆಲ್ಲರ ಸಹಕಾರವನ್ನು ಮರೆಯಲು ಸಾಧ್ಯವೇ ಇಲ್ಲ. ಪತ್ರಕರ್ತನಾಗಿ ನಾನು ಕೃಷಿ, ವಿಜ್ಞಾನ, ನ್ಯಾಯಾಂಗ, ತನಿಖಾ ವರದಿಗಳನ್ನು ಹೆಚ್ಚಾಗಿ ಮಾಡುತ್ತಿದ್ದೆ. ನನ್ನ ಪತ್ರಿಕೆಯ ಮುಖ್ಯಸ್ಥರಿಗೆ ಇಂತಹ ಅಸೈನ್‍ಮೆಂಟ್‍ಗಳನ್ನೇ ಹಾಕಿ ಎಂದು ಕೇಳಿಕೊಳ್ಳುತ್ತಿದ್ದೆ. ಇದು ನನಗೆ ಸಾಕಷ್ಟು ಕಲಿಸಿತು ಎಂದರು.

ಅಭಿವೃದ್ಧಿ ಪತ್ರಿಕೋದ್ಯಮ ಹಾಗೂ ತನಿಖಾ ಪತ್ರಿಕೋದ್ಯಮ ಎರಡನ್ನೂ ಸೇರಿಸಿ ಈ ಪುಸ್ತಕವನ್ನು ನಾನು ಬರೆದಿದ್ದೇನೆ. ಇದರಲ್ಲಿ ಕೆಲವು ಲೋಪದೋಷಗಳಿರಬಹುದು. ಅವುಗಳನ್ನು ಮನ್ನಿಸಬೇಕು. ಅನುಭವಗಳ ಬುತ್ತಿಯ ಈ ಕೃತಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಅವರು ಹೇಳಿದರು.

ನನ್ನೆಲ್ಲ ಸ್ನೇಹಿತರನ್ನು ಇಲ್ಲಿ ನೋಡುತ್ತಿದ್ದೇನೆ. ಇದು ನಾನು ಜೀವವಿರುವವರೆಗೂ ಮರೆಯಲಾರದಂತಹ ಕ್ಷಣ ಎಂದರು. ವಿದೇಶದಲ್ಲಿ ಪತ್ರಿಕೆ ಓದುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಎಂಟು-ಹತ್ತು ಲಕ್ಷ ಪ್ರಸರಣ ಸಂಖ್ಯೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಒಂದು ಪತ್ರಿಕೆಯಲ್ಲಿ ಐದರಿಂದ ಆರು ಜನ ಓದುತ್ತಾರೆ.

ಇದು ಬದಲಾಗಬೇಕು. ಪತ್ರಿಕೆಗಳನ್ನು ಹೆಚ್ಚಾಗಿ ಓದುವಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಫಾರಸು ಅನುಷ್ಠಾನಕ್ಕೆ ಮನವಿ: ಜಿಲ್ಲಾ ಹಾಗೂ ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗಿ ನೀಡಿರುವ ವರದಿಯನ್ನು ಸರ್ಕಾರ ಈ ಕೂಡಲೇ ಜಾರಿ ಮಾಡಬೇಕು ಎಂದು ಹಿರಿಯ ಪತ್ರಕರ್ತ ಪಿ.ರಾಮಯ್ಯ ಸಿಎಂ ಬಳಿ ಇಂದು ಮನವಿ ಮಾಡಿದರು.

ರಾಜ್ಯದಲ್ಲಿರುವ ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳು ತಾವಾಗಿಯೇ ಬೆಳೆಯಬೇಕು ಎಂಬುದಿದ್ದರೂ ಇದಕ್ಕೆ ಸರ್ಕಾರಗಳು ಕೂಡ ಪೂರಕವಾಗಿ ಸ್ಪಂದಿಸಬೇಕಿದೆ. ಈಗಾಗಲೇ ನೀಡಲಾಗಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ತಿಳಿಸಿದರು.

# ನಾನು ಹಿಂದೂ ರಾಮಯ್ಯ ಕೃತಿ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥ :

ನಾನು ಹಿಂದೂ ರಾಮಯ್ಯ ಕೃತಿಯು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಗಲಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೋಡೆ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ಅಭಿಮಾನಿ ಪ್ರಕಾಶನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನದಲ್ಲಿಂದು ಹಮ್ಮಿಕೊಂಡಿದ್ದ ನಾನು ಹಿಂದೂ ರಾಮಯ್ಯ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಕನ್ನಡದ ಸೊಗಸಾದ ಕೃತಿಯಾಗಿದೆ. ಧಣಿವರಿಯದ ಕಾಯಕ ಯೋಗಿ ಪಿ.ರಾಮಯ್ಯ ಪತ್ರಿಕೋದ್ಯಮದ ದೃವತಾರೆಯಾಗಿದ್ದಾರೆ.

ಇದುವರೆಗೂ ಅವರನ್ನು ಕಡೆಗಣಿಸಿ ಯಾರೂ ಮಾತನಾಡಿದ್ದನ್ನು ನೋಡಿಲ್ಲ. ರಾಮಯ್ಯ ಅವರು ಗಾಂಧಿ ಮನಸ್ಕರು ಅವರ ಕೃತಿ ಗಾಂಧಿ ಭವನದಲ್ಲಿ ಮುಖ್ಯಮಂತ್ರಿಯಿಂದ ಲೋಕಾರ್ಪಣೆಗೊಂಡಿದ್ದು ಶ್ರೇಷ್ಠ ಕೆಲಸ. ರಾಮಯ್ಯ ಅವರ ಕೆಲಸವೇ ಸಂದೇಶ ಎನ್ನಿಸುತ್ತಿದೆ. ಅವರು ನಡೆಯುವ ವಿಶ್ವಕೋಶ ಇದ್ದಂತೆ ಎಂದರು.

ಸಂಯುಕ್ತ ಕರ್ನಾಟಕದ ಸಂಪಾದಕ ಹುಣಸವಾಡಿ ರಾಜನ್ ಅವರು, ನಾನು ಹಿಂದೂ ರಾಮಯ್ಯ ಕೃತಿ ಕುರಿತು ಮಾತನಾಡಿ, ರಾಮಯ್ಯ ಅವರು ಅನುಭವದ ಕಥನವನ್ನು ದೃಶ್ಯಾಂತಗಳ ಮೂಲಕ 270 ಪುಟಗಳಲ್ಲಿ ಕೃತಿ ರಚಿಸಿದ್ದಾರೆ.

ವಸ್ತುವಿನ ಸಾಂಧ್ರತೆ ಭಾರವಾದಾಗ ಭಾಷೆ ಅದಕ್ಕೆ ಪೂರಕವಾಗುತ್ತದೆ. ಇಂಗ್ಲಿಷ್ ಪತ್ರಕರ್ತರಾಗಿ ಅದ್ಭುತ ಕೃತಿ ನೀಡಿರುವುದಕ್ಕೆ ಗೌರವ ವಂದನೆ ಸಲ್ಲಿಸಬೇಕು ಎಂದರು. ರಾಜಕಾರಣಿಗಳ ಒಡನಾಟ, ಅಧಿಕಾರಿಗಳ ಸಂಬಂಧ, ಸಾರ್ವಜನಿಕ ಹಿತಾಸಕ್ತಿಯನ್ನು ನೋಡುವ ರೀತಿ ಎಲ್ಲವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 60 ವರ್ಷಗಳ ಸುದೀರ್ಘ ಅನುಭವವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನಾನು ಹಿಂದೂ ರಾಮಯ್ಯ ಎನ್ನುವುದಕ್ಕಿಂತ ಬೇರೆ ಶಿರೋನಾಮೆ ಇದಕ್ಕೆ ಒಪ್ಪುತ್ತಿರಲಿಲ್ಲ.

ರಾಮಯ್ಯ ಅವರು ಸುಲಭವಾಗಿ ಸಿಗುವ ಸರಕಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರೊಂದಿಗಿನ ಅನುಭವವನ್ನು ಕೇಳುವಾಗ ಸಮಗ್ರ ದೃಷ್ಟಿಯಿಂದ ಅವರು ವ್ಯಕ್ತಿ ನೋಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಒಡನಾಟ ಮತ್ತು ಸಂಬಂಧದ ಬಗ್ಗೆಯೂ ಸುದೀರ್ಘವಾಗಿ ಉಲ್ಲೇಖಿಸಿದ್ದಾರೆ.

ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಆಗಿನ ರಾಜ್ಯಪಾಲರು ಸಾರ್ವಜನಿಕವಾಗಿ ಖಳನಾಯಕರಾಗಿದ್ದರು ಎಂದು ಬಿಂಬಿತವಾಗಿದ್ದಾಗ ರಾಮಯ್ಯ ಕಾನೂನಿನಲ್ಲಿರುವ ಅವಕಾಶಗಳನ್ನು ಹೇಗೆ ಬಳಸಿಕೊಂಡಿದ್ದರು ಎಂದು ಉಲ್ಲೇಖಿಸಿ, ರಾಜ್ಯಪಾಲರನ್ನು ನಾಯಕರನ್ನಾಗಿ ಮಾಡಲಿಲ್ಲ, ಖಳನಾಯಕರನ್ನಾಗಿಯೂ ಮಾಡಲಿಲ್ಲ ಎಂದು ಕೃತಿ ಕುರಿತು ಸುದೀರ್ಘ ಮಾಹಿತಿ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್ ಅವರು, ನಮ್ಮ ಸಂಸ್ಥೆಯ 38 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ರಾಮಯ್ಯ ಅವರ ಈ ಕೃತಿ ಪ್ರಕಾಶನವೇ ದೊಡ್ಡ ಆಶೀರ್ವಾದ. ಅವರಲ್ಲಿ ಅಹಂ, ಕೋಪ ನೋಡಿಲ್ಲ. ಅವರ ಪುಸ್ತಕದ ಪ್ರಕಟಣೆ ನಮಗೆ ಪರಮ ಭಾಗ್ಯ ಎಂದರು.

ಅಭಿಮಾನಿ ಪ್ರಕಾಶನವು ಭಾರತದ 10 ಪ್ರಖ್ಯಾತ ಸಂಸ್ಥೆಗಳಲ್ಲಿ ಒಂದಾಗಿದ್ದು, 50 ಕೋಟಿ ರೂಪಾಯಿ ಯಂತ್ರೋಪಕರಣಗಳನ್ನು ಹೊಂದಿದೆ. ಪ್ರಕಟಣೆ ಅಥವಾ ಪುಸ್ತಕವನ್ನು ಮುದ್ರಿಸಿ ರಫ್ತು ಮಾಡುತ್ತಿದ್ದೇವೆ ಎಂದು ಹೇಳಿದರು.

ಸ್ವಾಗತ ಭಾಷಣ ಮಾಡಿದ ಗಾಂಧಿ ಸ್ಮಾರಕ ನಿಧಿಯ ಕೋಶಾಧ್ಯಕ್ಷರಾದ ಎಚ್.ಬಿ.ದಿನೇಶ್, ರಾಮಯ್ಯ ಅವರ ತಮ್ಮ ಆರು ದಶಕಗಳ ಅನುಭವವನ್ನು ಕನ್ನಡದಲ್ಲಿ ಬರೆದುಕೊಟ್ಟಿರುವುದು ವಿಸ್ಮಯ ಮೂಡಿಸಿದೆ. ಗಾಂಧಿ ಭವನಕ್ಕೂ ರಾಮಯ್ಯ ಅವರಿಗೂ ಅವಿನಾಭಾವ ಸಂಬಂಧ ಇದೆ. ಗಾಂಧಿ ಭವನದ ಬೆಳವಣಿಗೆಗೂ ಸಾಕಷ್ಟು ಶ್ರಮಿಸಿದ್ದರು ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ರಾಮಯ್ಯ ದಂಪತಿಯನ್ನು ಅಭಿಮಾನಿ ಸಮೂಹದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ,

ನಿವೃತ್ತ ಐಎಎಸ್ ಅಧಿಕಾರಿಗಳಾದ ಐ.ಎಂ.ವಿಠಲಮೂರ್ತಿ, ಶಂಕರಲಿಂಗೇಗೌಡ, ಬಿ.ಎನ್.ಕೃಷ್ಣಯ್ಯ, ಗುರುಪ್ರಸಾದ್, ನಿರ್ಮಾಪಕರಾದ ಸಾ.ರಾ.ಗೋವಿಂದು, ಹಿರಿಯ ಪತ್ರಕರ್ತರಾದ ಸಿದ್ದರಾಜು, ಪೊನ್ನಪ್ಪ, ಮಲ್ಲಪ್ಪ, ಪದ್ಮರಾಜ ದಂಡಾವತಿ, ಬಿ.ವಿ.ಮಲ್ಲಿಕಾರ್ಜುನಯ್ಯ, ಶೇಷ ಚಂದ್ರಿಕಾ, ಅರಕೆರೆ ಜಯರಾಂ, ಅ.ಚ.ಶಿವಣ್ಣ, ಬಿ.ವಿ.ಸತ್ಯನಾರಾಯಣ ಸೇರಿದಂತೆ ಅನೇಕ ಪತ್ರಕರ್ತರ ಬಳಗವೇ ನೆರೆದಿತ್ತು.

# ಪಿ.ರಾಮಯ್ಯ ಪರಿಶುದ್ಧ ಪತ್ರಕರ್ತ : ಸಿಎಂ ಗುಣಗಾನ :

ಹಿರಿಯ ಪತ್ರಕರ್ತ ರಾಮಯ್ಯ ಅವರ ವರದಿ ಹಾಗೂ ಬರಹದಿಂದ ನಾವು ಬಹಳಷ್ಟು ಕಲಿಯಬಹುದು. ಅವರ ಸಾವಿರ ಹೆಜ್ಜೆಗಳಲ್ಲಿ ನಾವು ಎರಡು ಹೆಜ್ಜೆಯನ್ನಾದರೂ ಇಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.

ಗಾಂಧಿಭವನದಲ್ಲಿಂದು ಅಭಿಮಾನಿ ಪ್ರಕಾಶನ ಹೊರತಂದಿರುವ ನಾನು ಹಿಂದೂ ರಾಮಯ್ಯ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ರಾಮಯ್ಯ ಅವರ ಕೃತಿಯಲ್ಲಿ ಸಮಾಜ, ರಾಜಕೀಯ ಹಾಗೂ ಜನರ ಬದುಕನ್ನು ಚಿತ್ರಿಸಲಾಗಿದೆ. ರಾಮಯ್ಯ ಅವರ ಮಾರ್ಗದರ್ಶನ ಸಮಾಜಕ್ಕೆ, ಸರ್ಕಾರಕ್ಕೆ ಅವಶ್ಯಕ ಎಂದು ಹೇಳಿದರು.

ಅವರು ಸಕ್ಕರೆ ತಿನ್ನುವುದಿಲ್ಲ ಆದರೆ, ಎಲ್ಲರಿಗೂ ಸಕ್ಕರೆ ತಿನ್ನಿಸಿದ್ದಾರೆ. ಇವರು ಶತಾಯುಷಿಯಾಗಿ ಇನ್ನೊಂದು ಪುಸ್ತಕವನ್ನು ಬರೆಯಲಿ. ಅಭಿಮಾನಿ ಪ್ರಕಾಶನವೇ ಅದನ್ನು ಹೊರತರಲಿ ಎಂದು ಅವರು ಹೇಳಿದರು.

ರಾಮಯ್ಯ ಅವರ ಬರಹ ಮತ್ತು ವರದಿಯಿಂದ ಬಹಳಷ್ಟು ಕಲಿಯಬಹುದು, ಅವರು ಸಾವಿರ ಹೆಜ್ಜೆಯಲ್ಲಿ ಎರಡು ಹೆಜ್ಜೆಯನ್ನಾದರೂ ಇಡಬಹುದು. ಸತ್ಯವನ್ನು ಕೂಡ ಪ್ರಿಯವಾಗಿ ಹೇಳುವುದು ರಾಮಯ್ಯನವರ ಕಲೆ. ಈ ಕೃತಿಯಲ್ಲಿ ಹೇಳಿರುವುದರಿಂದ ಹತ್ತಿಪ್ಪತ್ತು ಪಟ್ಟು ಹೇಳದಿರುವುದು ಇದೆ.

ಮೂರು ತಲೆಮಾರಿನ ಪತ್ರಕರ್ತರನ್ನು ನೋಡಿದ್ದಾರೆ. ಎರಡು ಪೀಳಿಗೆಯ ರಾಜಕಾರಣಿಗಳನ್ನು ಕಂಡಿದ್ದಾರೆ. ಎಲ್ಲ ಮುಖ್ಯಮಂತ್ರಿಗಳ ಜೊತೆ ಆತ್ಮೀಯರಾಗಿದ್ದರು. ಆದರೂ ಯಾವುದೇ ರೀತಿಯಲ್ಲಿ ಈ ಸಂಬಂಧವನ್ನು ವೈಯಕ್ತಿಕವಾಗಿ ಬಳಸಿಕೊಳ್ಳದ ಶುದ್ಧ ಪತ್ರಕರ್ತರು ಎಂದು ಗುಣಗಾನ ಮಾಡಿದರು.

ಅಪರೂಪದ ವ್ಯಕ್ತಿಯಾದ ಇವರು ಅಂದಿನಿಂದ ಇಂದಿನವರೆಗೂ ಮುಗ್ಧತೆಯನ್ನು ಉಳಿಸಿಕೊಂಡ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದವರು. ಯಾವುದಕ್ಕೂ ರಾಜಿ ಆಗದೆ ಸತ್ಯ ಬರೆದಿದ್ದಾರೆ. ಅವರದು ತಪಸ್ವಿ ಬದುಕು. ರಾಮಯ್ಯ ಅವರಿಗೆ ಸತ್ಯವೇ ಐಡಿಯಾ, ಐಡಿಯಾಲಜಿ. ಸತ್ಯದ ಊರ್ಣವನ್ನು ಬರೆಯುತ್ತಿದ್ದರು ಎಂದರು.

ವಾಸ್ತವಿಕ ಸಂಗತಿಗಳಿಂದ ಕೆಲವರಿಗೆ ನೋವಾಗಿರಬಹುದು. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ಗೌರವ ನೀಡುತ್ತಿದ್ದರು. ಹಿಂದು ಪತ್ರಿಕೆಗೂ ರಾಮಯ್ಯ ಅವರಿಗೂ ಅನ್ಯೋನ್ಯ ಸಂಬಂಧವಿದೆ. ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ರಾಮಯ್ಯ ನಾಡಿನ ಆಸ್ತಿ ಎಂದು ಬಣ್ಣಿಸಿದರು.

ರಾಮಯ್ಯ ತಿಳಿದಿರುವುದರಿಂದ ಹೆಚ್ಚು ಕಲಿಸಿದ್ದಾರೆ. ಪತ್ರಕರ್ತರಿಗೆ ಹತ್ತು-ಹಲವು ಜವಾಬ್ದಾರಿಗಳಿವೆ ಎಂಬುದನ್ನು ಅವರ ಬರಹದಿಂದ ಕಲಿಯಬೇಕು. ವ್ಯಕ್ತಿ ಮಾತನಾಡುವಾಗ ನಿಯಂತ್ರಣ ತಪ್ಪಬಹುದು. ಬರೆಯುವಾಗ ಸ್ವಯಂ ನಿಯಂತ್ರಣ ಇರಬೇಕು. ಅವರು ಮಾತನಾಡುವಾಗಲೂ ನಿಯಂತ್ರಣ ಮೀರಲಿಲ್ಲ ಎಂದು ಅವರು ಶ್ಲಾಘಿಸಿದರು.

Articles You Might Like

Share This Article