Home Blog Page 14

ಸಂಪುಟ ವಿಸ್ತರಣೆ ಕುರಿತು ಮಾತನಾಡದಂತೆ ವರಿಷ್ಠರ ಆಜ್ಞೆಯಾಗಿದೆ : ಸಚಿವ ಮಧುಬಂಗಾರಪ್ಪ

ಕೊಳ್ಳೇಗಾಲ,ನ.1-ಮುಖ್ಯ ಮಂತ್ರಿ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರಸ್ತಾಪಿಸುವುದು ಬೇಡ, ಯಾರೊಬ್ಬರೂ ಮಾತನಾಡಕೊಡದೆಂದು ವರಿಷ್ಠರ ಆಜ್ಞೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ತಿಳಿಸಿದರು.

ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ವಸತಿಗೃಹಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ. ಎಂ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಕುರಿತು ಎಂಎಲ್‌‍ಎ ಹಾಗೂ ಸಚಿವರು ಯಾರೊಬ್ಬರೂ ಮಾತನಾಡಕೊಡದೆಂದು ಕಾಂಗ್ರೆಸ್‌‍ ಪಕ್ಷದ ವರಿಷ್ಠರಸೂಚನೆಯಾಗಿದೆ. ಪಕ್ಷದ ವರಿಷ್ಠರು ನಿಮಗೆ ನೀಡಿರುವ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿ ಬೇರೆ ವಿಷಯ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ನಿಮ ಸಚಿವ ಸ್ಥಾನವು ಹೋಗಲಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ನೀವು ನನ್ನ ಭವಿಷ್ಯ ತೀರ್ಮಾನ ಮಾಡಿ ನುಡಿಯುವರಾಗಿದ್ದರೆ ಕರ್ನಾಟಕದ ಎಲ್ಲಾ ಜನರು ನಿಮ ಮನೆಯ ಬಾಗಿಲಿನಲ್ಲಿ ನಿಲ್ಲುತ್ತಿದ್ದರು. ಇಂತಹ ಪ್ರಶ್ನೆಗಳನ್ನು ಕೇಳುವ ಚಾಳಿ ಬಿಡಬೇಕು. ಸಚಿವ ಸಂಪುಟದ ವಿಚಾರವನ್ನು ಕಾಂಗ್ರೆಸ್‌‍ ವರಿಷ್ಠರು ತೀರ್ಮಾನಿಸುತ್ತಾರೆ. ಕಾಂಗ್ರೆಸ್‌‍ ಪಕ್ಷ ಸಚಿವರಾಗಿ ಒಳ್ಳೆಯ ಕೆಲಸಮಾಡಿ ಎಂದು ಅವಕಾಶ ನೀಡಿದೆ ಸಚಿವ ಸ್ಥಾನ ಬೇಡ ಪಕ್ಷಕ್ಕೆ ದುಡಿ ಎಂದು ಹೇಳಿದರೆ ದುಡಿಯುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದರು.

ಕಳೆದ ವರ್ಷ ಎಸ್‌‍ಎಸ್‌‍ಎಸ್‌‍ಸಿ ಪರೀಕ್ಷೆ ಒಂದು ಬಾರಿ ನಡೆಸಿ ಆ ಪರೀಕ್ಷೆಯಲ್ಲಿ ಫೇಲಾದ ವಿಧ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದರಿಂದ 1 ಲಕ್ಷದ 16 ಸಾವಿರ ವಿದ್ಯಾಥಿಗಳು ಪಾಸಾಗಿ ಪಿಯುಸಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ಶುಲ್ಕ ಪಡೆಯದೆ ಅವಕಾಶ ನೀಡಿದ್ದು ಇದರಲ್ಲಿ ಬಡವರು ಹಿಂದುಳಿದ ವರ್ಗದವರು, ಕಷ್ಟದಲ್ಲಿರುವವರು ಮತ್ತು ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವಂಥ ಕೆಲಸವನ್ನು ಕಾಂಗ್ರೆಸ್‌‍ ಸರ್ಕಾರ ಕಲ್ಪಿಸಿದೆ ಎಂದು ತಿಳಿಸಿದರು.

ಈ ಹಿಂದೆ 13ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು ಮತ್ತೆ 13 ಸಾವಿರ ಶಿಕ್ಷಕರನ್ನು ನೇಮಕಮಾಡಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಎ.ಆರ್‌ ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್‌‍ ಪಕ್ಷದ ಮುಖಂಡರು, ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರುಗಳು ಇದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2025)

ನಿತ್ಯ ನೀತಿ : ಮನುಷ್ಯ ನಿಜವಾದ ಬದಲಾವಣೆ ಆಗುವುದು, ಅವನಿಗೆ ಅವಮಾನ ಅಪಮಾನ ಆದಾಗ ಅಲ್ಲದೆ ಆತನ ಮನಸ್ಸಿಗೆ ಸಹಿಸಿಕೊಳ್ಳಲಾಗದ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾವಣೆ ದಾರಿಯನ್ನು ಹಿಡಿಯುತ್ತಾನೆ.

ಪಂಚಾಂಗ : ಶನಿವಾರ, 01-11-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಶತಭಿಷಾ / ಯೋಗ: ಧ್ರುವ / ಕರಣ: ವಣಿಜ
ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.53
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಆರೋಗ್ಯದಲ್ಲಿ ಏರುಪೇರು.
ವೃಷಭ: ಹಣ ಕಳೆದುಕೊಳ್ಳುವ ಸಂಭವವಿದೆ.
ಮಿಥುನ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.

ಕಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಶಾಶ್ವತ ಸಿಗಲಿದೆ.
ಸಿಂಹ: ತಾವು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ಮಾತನಾಡುವಾಗ ಎಚ್ಚರಿಕೆ ಇರಲಿ.

ತುಲಾ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಶ್ಚಿಕ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.

ಮಕರ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಕುಂಭ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಮೀನ: ವೈಯಕ್ತಿಕವಾಗಿ ಉನ್ನತಿ ಸಾಧಿಸುವಿರಿ.

ನ.2ಕ್ಕೆ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ, ಕ್ಯಾಮರಾ ಕಣ್ಗಾವಲು

ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ (ನ.2) ನಡೆಸಲಿದ್ದು, ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿಯೂ ಮುಖಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ. ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 33 ವಿಷಯಗಳಿಗೆ ನಡೆಯುವ ಕೆ-ಸೆಟ್ ಪರೀಕ್ಷೆಯನ್ನು 1.36 ಲಕ್ಷ ಮಂದಿ ತೆಗೆದುಕೊಂಡಿದ್ದಾರೆ. 11 ಜಿಲ್ಲೆಗಳ (ಬೆಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ) 316 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಅವರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಎಲ್ಲ 33 ವಿಷಯಗಳ ಪರೀಕ್ಷೆ ನಡೆದರೆ, ಉಳಿದ ಜಿಲ್ಲೆಗಳಲ್ಲಿ 11 ವಿಷಯಗಳ ಪರೀಕ್ಷೆ ಗಳು ಮಾತ್ರ ನಡೆಯಲಿವೆ. ಈ ಪರೀಕ್ಷೆಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆಗಳು ನಡೆಯಲಿದ್ದು, ಒಮ್ಮೆಗೇ ಎರಡೂ ಪತ್ರಿಕೆಗಳ (ಪತ್ರಿಕೆ 1 & 2) ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಮೂರು ಗಂಟೆ ಅವಧಿಯಲ್ಲಿ 100 ಅಂಕಗಳ ಸಾಮಾನ್ಯ ಜ್ಞಾನ ಮತ್ತು 200 ಅಂಕಗಳ ವಿಷಯವಾರು ಪತ್ರಿಕೆಗಳಿಗೆ ಉತ್ತರಿಸಬೇಕಾಗುತ್ತದೆ. ಎರಡೂ ಪತ್ರಿಕೆಗಳಿಗೆ ಪ್ರತ್ಯೇಕ ಓಎಂಆರ್‌ ನೀಡುತ್ತಿದ್ದು, ಆಯಾಯ ಓಎಂಆರ್‌ ನಲ್ಲೇ ಅದರ ಉತ್ತರಗಳನ್ನು ಎಚ್ಚರಿಕೆಯಿಂದ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಹಿಂದಿನ ಎಲ್ಲ ಪರೀಕ್ಷೆಗಳ ಹಾಗೆಯೇ ಈ ಪರೀಕ್ಷೆಗೂ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳನ್ನು ಮುಖ ಚಹರೆ ಪತ್ತೆ ಮೂಲಕ ತೀವ್ರ ಶೋಧ ನಡೆಸಿಯೇ ಒಳ ಬಿಡಲಾಗುತ್ತದೆ. ಇದಕ್ಕೆ ಅಗತ್ಯ ಪೊಲೀಸ್‌ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ ಇಬ್ಬರು ಬಲಿ

ಚಿಕ್ಕಮಗಳೂರು,ಅ.31- ಹಸುವಿಗೆ ಸೊಪ್ಪು ತರಲು ಇಂದು ಮುಂಜಾನೆ ವ್ಯಕ್ತಿಗಳಿಬ್ಬರು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗದ್ದೆ ಗ್ರಾಮದ ನಿವಾಸಿಗಳಾದ ಹರೀಶ್‌ ಮತ್ತು ಉಮೇಶ್‌ ಮೃತಪಟ್ಟವರು. ಇಂದು ಮುಂಜಾನೆ 6.30 ರ ಸುಮಾರಿನಲ್ಲಿ ಇವರಿಬ್ಬರೂ ಹಸುವಿಗೆ ಸೊಪ್ಪು ತರಲು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹೋಗುತ್ತಿದ್ದಾಗ ಕೆರೆ ಗ್ರಾಪಂ ವ್ಯಾಪ್ತಿಯ ಮುಡುಬಾ ಎಲ್ಸಾರ ಬಳಿ ಕಾಡಾನೆಯೊಂದು ಏಕಾಏಕಿ ಇವರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಶೃಂಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ಸರಗೂರಿನಲ್ಲಿ ಹುಲಿಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಸಾಯಿಸಿತು. ಈ ಘಟನೆ ಮಾಸುವ ಮುನ್ನವೇ ಇಂದು ಆನೆ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಾಣಿಗಳು ಹಾಗೂ ಮಾನವ ಸಂಘರ್ಷ ಹೆಚ್ಚಾಗಿದ್ದು, ಅರಣ್ಯ ಭಾಗದ ನಿವಾಸಿಗಳು ಆತಂಕಗೊಂಡಿದ್ದಾರೆ.

ವಿಮೆ ಹಣಕ್ಕಾಗಿ ಮಗನನ್ನೇ ಹತ್ಯೆ ಮಾಡಿಸಿದ ತಾಯಿ

ಕಾನ್ಪುರ, ಅ.31- ವಿಮೆ ಹಣಕ್ಕಾಗಿ ಹೆತ್ತ ತಾಯಿಯೇ ತನ್ನ ಪ್ರಿಯಕರನ ಸಹಕಾರದೊಂದಿಗೆ ಮಗನನ್ನು ಕೊಂದು ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಮುಂದಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ತನ್ನ ಅಕ್ರಮ ಸಂಬಂಧವನ್ನು ವಿರೋಧಿಸಿದ್ದ 23 ವರ್ಷದ ಮಗನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವವನ್ನು ರಸ್ತೆಯಲ್ಲಿ ಬಿಸಾಡಿ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅ. 26 ರಂದು ಕಾರಿನೊಳಗೆ ಮಗನನ್ನು ಕೊಲೆ ಮಾಡಲು ತಾಯಿಯ ಸಂಗಾತಿಯ ಸಹೋದರ ಕೂಡ ಸಹಾಯ ಮಾಡಿದ್ದಾನೆ. ಇಲ್ಲಿಯವರೆಗೆ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯಿಂದಲೇ ಕೊಲೆಯಾದ ಪುತ್ರವನ್ನು ಪ್ರದೀಪ್‌ ಶರ್ಮಾ ಎಂದು ಗುರುತಿಸಲಾಗಿದೆ. ಅವರ ಶವ ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಪತ್ತೆಯಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಇದರ ಬಗ್ಗೆ ವಿವರವಾದ ತನಿಖೆ ನಡೆಸುವವರೆಗೆ ಈ ವಿಷಯವನ್ನು ಆರಂಭದಲ್ಲಿ ಅಪಘಾತವೆಂದು ನೋಡಲಾಗಿತ್ತು.

ಪ್ರದೀಪ್‌ ಅವರ ತಂದೆಯ ಮರಣದ ನಂತರ, ಅವರ ತಾಯಿ ಪ್ರಮುಖ ಆರೋಪಿ ಮಾಯಾಂಕ್‌ ಅಲಿಯಾಸ್‌‍ ಇಶು ಕಟಿಯಾರ್‌ ಜೊತೆ ಸಂಬಂಧವನ್ನು ಪ್ರಾರಂಭಿಸಿದರು ಎಂದು ದೇರಾಪುರ ವೃತ್ತ ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಪ್ರದೀಪ್‌ ಅವರ ಸಂಬಂಧವನ್ನು ವಿರೋಧಿಸಿದರು ಮತ್ತು ಕ್ರಮೇಣ ತಾಯಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

ನಂತರ ಆತ ಆಂಧ್ರಪ್ರದೇಶದಲ್ಲಿ ಸ್ವತಃ ಕೆಲಸವನ್ನೂ ಪಡೆದರು.ಇದರಿಂದ ಕೋಪಗೊಂಡ ಪ್ರದೀಪ್‌ನ ತಾಯಿ ಮಾಯಾಂಕ್‌ ಮತ್ತು ಅವನ ಸಹೋದರ ರಿಷಿ ಕಟಿಯಾರ್‌ ಅವರೊಂದಿಗೆ ಸಂಚು ರೂಪಿಸಿ ಮಗನನ್ನೇ ಕೊಲ್ಲಲು ಯೋಜನೆ ರೂಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಯಾಂಕ್‌ ಮತ್ತು ರಿಷಿ ಉದ್ದೇಶಪೂರ್ವಕವಾಗಿ ಪ್ರದೀಪ್‌ನ ಹೆಸರಿನಲ್ಲಿ ಹಲವಾರು ವಿಮಾ ಪಾಲಿಸಿಗಳನ್ನು ಖರೀದಿಸಿದರು.ದೀಪಾವಳಿ ರಜೆಗಾಗಿ ಪ್ರದೀಪ್‌ ಮನೆಗೆ ಹಿಂದಿರುಗಿದಾಗ, ಅಕ್ಟೋಬರ್‌ 26 ರಂದು ಭೋಜನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಮಾಯಾಂಕ್‌ ಮತ್ತು ರಿಷಿ ಪ್ರದೀಪ್‌ನನ್ನು ತಮ ಕಾರಿನಲ್ಲಿ ಕರೆದೊಯ್ದರು. ಕಾರಿನಲ್ಲಿ, ಪ್ರದೀಪ್‌ನ ತಲೆಗೆ ಸುತ್ತಿಗೆಯಿಂದ ಹಲವು ಬಾರಿ ಹೊಡೆದು ಹತ್ಯೆ ಮಾಡಿದರು.ರಸ್ತೆ ಅಪಘಾತದಂತೆ ಕಾಣುವಂತೆ ಮಾಡಲು, ಆರೋಪಿಗಳು ಶವವನ್ನು ಡೆರಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬಲ್ಹರಾಮೌ ಗ್ರಾಮದ ಬಳಿಯ ಕಾನ್ಪುರ-ಇಟಾವಾ ಹೆದ್ದಾರಿಯಲ್ಲಿ ಎಸೆದರು.

ಪ್ರದೀಪ್‌ನ ಶವವನ್ನು ಪೊಲೀಸರು ವಶಪಡಿಸಿಕೊಂಡ ನಂತರ ಮತ್ತು ಅವನ ಕುಟುಂಬವನ್ನು ಪತ್ತೆಹಚ್ಚಿದ ನಂತರ, ಅವನ ಚಿಕ್ಕಪ್ಪ ಮತ್ತು ಅಜ್ಜ ರಿಷಿ ಮತ್ತು ಮಾಯಾಂಕ್‌ ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಆದಾಗ್ಯೂ, ಪ್ರದೀಪ್‌ನ ತಾಯಿ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಲೇ ಇದ್ದರು. ಘಟನೆಯ ವಿವರವಾದ ತನಿಖೆಯಲ್ಲಿ ಪ್ರದೀಪ್‌ ಕೊಲೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಪರಾಧಕ್ಕೆ ಬಳಸಿದ ಸುತ್ತಿಗೆ, ಅಕ್ರಮ ಬಂದೂಕು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಕೌಂಟರ್‌ ನಂತರ ಮಾಯಾಂಕ್‌ ಮತ್ತು ರಿಷಿ ಇಬ್ಬರನ್ನೂ ಬಂಧಿಸ ಲಾಗಿದೆ ಎಂದು ವೃತ್ತ ಅಧಿಕಾರಿ ಹೇಳಿದರು.

ರಿಷಿ ಪೊಲೀಸ್‌‍ ತಂಡದ ಮೇಲೆ ಗುಂಡು ಹಾರಿಸಿದ ನಂತರ ಎನ್‌ಕೌಂಟರ್‌ ನಡೆಯಿತು. ಪೊಲೀಸರು ಪ್ರತಿದಾಳಿ ನಡೆಸಿದರು ಮತ್ತು ಅವರ ಮೇಲೆ ಗುಂಡು ಹಾರಿಸಲಾಯಿತು. ಅವರು ಆಸ್ಪತ್ರೆಯಲ್ಲಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಾಟಾಳ್ ಸಿದ್ಧತೆ

ಬೆಂಗಳೂರು, ಅ.31– ಕರ್ನಾಟಕ ರಾಜ್ಯೋತ್ಸವ ಸಮಿತಿ (ರಿ) ವತಿಯಿಂದ ನಾಳೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.

ನಾಳೆ (ನ.1) ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮೈಸೂರು ಬ್ಯಾಂಕ್‌ ಹತ್ತಿರ ಕನ್ನಡ ತಾಯಿ ಭುವನೇಶ್ವರಿ ಪೂಜೆ ಹಾಗೂ ನಗರ ದೇವತೆ ಶ್ರೀ ಅಣ್ಣಮ ದೇವಿಯ ವೈಭವದ ಮೆರವಣಿಗೆಯನ್ನು ಹಮಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಾಂಬೆ ಭುವನೇಶ್ವರಿ ಗೆೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರೆ, ವಾಟಾಳ್‌ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್‌ ರಾವ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಗಾಲ್‌ ಆಟಗಾರ್ತಿ ಅನುಪಮ ವಾಟಾಳ್‌ ನಾಗರಾಜ್‌ ಅವರು ಆಗಮಿಸಲಿದ್ದಾರೆ.

ಇದೇ ವೇಳೆ ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದ್‌, ಆ.ತಿ.ರಂಗನಾಥ್‌, ಶಿವರಾಮೇಗೌಡ, ಪ್ರವೀಣ್‌ ಕುಮಾರ್‌ ಶೆಟ್ಟಿ, ಕೆ.ಆರ್‌.ಕುಮಾರ್‌, ಮಂಜುನಾಥ್‌ದೇವ್‌, ಹೆಚ್‌.ವಿ.ಗಿರೀಶ್‌ಗೌಡ ಮುಂತಾದವರನ್ನು ಸನಾನಿಸಲಾಗುವುದು.ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕು ಎಂದು ವಾಟಾಳ್‌ ನಾಗರಾಜ್‌ ಅಭಿಮಾನಿ ಸಂಘದ ಅಧ್ಯಕ್ಷ ವಾಟಾಳ್‌ ಎನ್‌.ವೆಂಕಟೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪ ವಿಭಾಗಾಧಿಕಾರಿಗೆ ಕೃಷ್ಣಬೈರೇಗೌಡ ತರಾಟೆ

ಬೆಂಗಳೂರು, ಅ.31-ನಿಮಗೆ ಎಷ್ಟು ಜನ ಏಜೆಂಟ್‌ ಇದ್ದಾರೆ, ಆ ಪೈಕಿ ಅಧಿಕೃತ ಏಜೆಂಟ್‌ ಯಾರೆಂಬ ಬೋರ್ಡ್‌ ಹಾಕಿಬಿಡಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉಪ ವಿಭಾಗಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಕಾಸಸೌಧದಲ್ಲಿಂದು ನಡೆದ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ವಿಲೇವಾರಿ ಸಂಬಂಧ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು, ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಕಿರಣ್‌ ಅವರನ್ನು ತರಾಟೆಗೆ ತೆಗೆದುಕೊಂಡರು,

ಸಭೆಯಲ್ಲಿ ಉಪ ವಿಭಾಗಾಧಿಕಾರಿಯವರ ಬೆವರಿಳಿಸಿದ ಅವರು, ಜನರು ತಮ ಕೆಲಸಗಳಿಗೆ ಏಜೆಂಟರನ್ನೇ ಭೇಟಿಯಾಗಿಬಿಡಲಿ. ನೀವೂ ನನಗೇ ಸಿಗಲ್ಲ ಅಂದರೆ ಇನ್ನೂ ಜನರ ಕಥೆ ಏನು? ಎಂದು ಪ್ರಶ್ನಿಸಿದರು. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಅನಗತ್ಯವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡದೇ ವಿಳಂಬ ಮಾಡಬಾರದು ಎಂದು ಸಚಿವರು ಸೂಚಿಸಿದರು.

ಪೊಲೀಸರು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದ ವಜಾ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಅ.31- ಪೊಲೀಸ್‌‍ ಇಲಾಖೆಯ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾ ಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭ್ರಷ್ಟಚಾರವನ್ನು ತಮ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಕೆ. ಶಿವಕುಮಾರ್‌ ಎಂಬುವರು ತಮ ಮಗಳ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ಕೆಲಸಗಳಿಗೆ ಯಾವ ರೀತಿ ಲಂಚ ವಸೂಲಿ ಮಾಡಲಾಯಿತು ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಬೆಳಂದೂರು ಪೊಲೀಸ್‌‍ಠಾಣೆಯ ಸಬ್‌ ಇನ್‌್ಸಪೆಕ್ಟರ್‌ ಮತ್ತು ಕಾನ್‌್ಸಟೆಬಲ್‌ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್‌, ಪೊಲೀಸ್‌‍ ಇಲಾಖೆ ಮಾತ್ರವಲ್ಲದೆ ಸರ್ಕಾರದ ಯಾವುದೇ ಇಲಾಖೆಯಲ್ಲಾದರೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚ ಪಡೆದಿದ್ದರೆ ಅದನ್ನು ಸಹಿಸುವುದಿಲ್ಲ. ಕಠಿಣಕ್ರಮ ಕೈಗೊಳ್ಳುತ್ತೇವೆ ಎಂದರು.

ಅದರಲ್ಲೂ ಪ್ರಮುಖವಾಗಿ ಪೊಲೀಸ್‌‍ ಇಲಾಖೆಯಲ್ಲಿ ಲಂಚ ಪಡೆದಿದ್ದರೆ ಅದು ಸಾವಿರ ಇರಲಿ, ಐದುನೂರೆ ಇರಲಿ ತಕ್ಷಣವೇ ಅಮಾನತಿನಂತಹ ಕ್ರಮ ಕೈಗೊಂಡು ಇಲಾಖೆಯ ವಿಚಾರಣೆ ನಡೆಸಲಾಗುವುದು. ತನಿಖೆಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಸೇವೆಯಿಂದಲೇ ವಜಾಗೊಳಿಸಲಾಗುತ್ತದೆ ಎಂದರು.

ಇಂತಹ ಪ್ರಕರಣಗಳು ನಮಗಾಗಲೀ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದರೆ ತಕ್ಷಣವೇ ನಿರ್ಧಾಕ್ಷೀಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸ್‌‍ ಸಮಾವೇಶ ಹಾಗೂ ಇತರ ಸಭೆಗಳಲ್ಲಿ ಸೂಚನೆ ನೀಡಿದ್ದೇವೆ. ಮುಖ್ಯಮಂತ್ರಿ ಕೂಡ ಸ್ಪಷ್ಟ ಆದೇಶ ನೀಡಿದ್ದಾರೆ. ಭ್ರಷ್ಟಚಾರವನ್ನು ಯಾವುದೇ ಹಂತದಲ್ಲೂ ತಾವು ಬೆಂಬಲಿಸುವುದಿಲ್ಲ ಎಂದು ಹೇಳಿದರು.

ಒಳ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಗೊಂದಲ ಮೂಡಿಸಿತ್ತು. ಅದನ್ನು ಸರಿಪಡಿಸಿ, ಕಾನೂನಿಗೆ ಬಲ ನೀಡಲು ನಮ ಸರ್ಕಾರ ಮುಂದಾಗಿದೆ. ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಯಾವುದೇ ಗೊಂದಲಗಳಿಲ್ಲ. ಎ,ಬಿ,ಸಿ,ಡಿ ಎಂಬ ವರ್ಗೀಕರಣ ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿ ನಂತರ ಕಾನೂನು ರೂಪಿಸಿ, ಜಾರಿಗೊಳಿಸಲು ಚರ್ಚಿಸಲಾಗಿತ್ತು. ಆದರೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಗ್ರೀವಾಜ್ಞೆ ಬದಲಾಗಿ ಕಾನೂನು ರೂಪಿಸಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕಾನೂನು ಸಚಿವರಿಗೆ ಸೂಚನೆ ನೀಡಲಾಗಿದೆೆ ಎಂದರು.

ಬಿಜೆಪಿಯ ಸಂಸದ ಗೋವಿಂದ ಕಾರಜೋಳ ಅವರಿಗೆ ಒಳ ಮೀಸಲಾತಿ ವಿಚಾರ ಅರ್ಥವಾಗಿಲ್ಲ. ಅವರ ಸರ್ಕಾರ ಆಡಳಿತದಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ನಾವು ಅದನ್ನು ಸರಿಪಡಿಸಿ ಮತ್ತು ಕಾನೂನಿನ ಶಕ್ತಿ ನೀಡಲು ಮುಂದಾಗಿದ್ದೇವೆ ಎಂದರು.

ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆಗೆ ಹೈಕೋರ್ಟ್‌ ತಡೆ ನೀಡಿರುವ ಆದೇಶವನ್ನು ತಾವು ಓದಿಲ್ಲ. ಈ ಬಗ್ಗೆ ಕಾನೂನು ಇಲಾಖೆ ಅಡ್ವೊಕೇಟ್‌ ಜನರಲ್‌ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಹೈಕೋರ್ಟ್‌ ಆದೇಶಕ್ಕೆ ಮೇಲನವಿ ಸಲ್ಲಿಸಬೇಕೇ? ಅಥವಾ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕೆ? ಯಾವ ರೀತಿಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚರ್ಚಿಸಿ ನಿರ್ಧರಿಸುತ್ತೇವೆ. ಎಸ್‌‍ಐಟಿ ತಂಡ ತನಿಖೆಯ ವರದಿಯನ್ನು ಒಂದೆರಡು ದಿನಗಳಲ್ಲಿ ಸಲ್ಲಿಸುವ ಸಾಧ್ಯತೆಯಿದೆ ಎಂದರು.

ಖಾಸಗಿ ಹೋಟೆಲ್‌ನಲ್ಲಿ ಮಿಡ್‌ನೈಟ್‌ ಮೀಟಿಂಗ್‌ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಬಾಸ್ಕೆಟ್‌ಬಾಲ್‌ ಅಂತಾರಾಷ್ಟ್ರೀಯ ಸಂಸ್ಥೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ತಾವು ಹೋಗಿದ್ದು, ಯಾವುದೇ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಿಲ್ಲ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಇಂದು ತೆರೆ, ನ.10ರ ವರೆಗೆ ಆನ್‌ಲೈನ್‌ನಲ್ಲಿ ಅವಕಾಶ

ಬೆಂಗಳೂರು, ಅ.31– ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಇಂದು ಸಂಜೆ ತೆರೆ ಬೀಳಲಿದೆ. ಆದರೆ, ಆನ್‌ಲೈನ್‌ ಮೂಲಕ ಮಾಹಿತಿ ನೀಡುವವರಿಗೆ ನವೆಂಬರ್‌ 10ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಸೆಪ್ಟೆಂಬರ್‌ 22ರಿಂದ ಪ್ರಾರಂಭವಾದ ಈ ಸಮೀಕ್ಷೆಯು ಅಕ್ಟೋಬರ್‌ 7ರಂದು ಮುಗಿಯಬೇಕಿತ್ತು. ಆದರೆ, ಜಿಬಿಎ ವ್ಯಾಪ್ತಿಯಲ್ಲಿ ತಡವಾಗಿ ಸಮೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಸಮೀಕ್ಷೆಯ ಅಂತಿಮ ಗಡುವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಇಂದಿಗೆ ಆ ಗಡುವು ಮುಗಿಯುತ್ತಿದ್ದು, ಮತ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿದೆ.

ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಆನ್‌ಲೈನ್‌ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್‌ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳುವವರಿಗೆ ಅವಧಿಯನ್ನು ನವೆಂಬರ್‌ 10ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

http://kscbcselfdeclaration.karnataka.gov.in ಈ ಲಿಂಕ್‌ ಮೂಲಕ ಆನ್‌ಲೈನ್‌ನಲ್ಲಿ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.ನಿನ್ನೆಯವರೆಗೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಮತ್ತು 5,52,57,205 ಜನರ ಸಮೀಕ್ಷೆ ಮುಗಿದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲವು ತಾಂತ್ರಿಕ ಕಾರಣಗಳು ಕಂಡುಬಂದಿದೆ. ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರು ಇರುತ್ತಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಮಾಹಿತಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದ್ಯುತ್‌ ಮೀಟರ್‌ಗಳು ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ. ಏಕೆ? ಸಮೀಕ್ಷೆ ಕಡಿಮೆಯಾಗಿದೆ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂತ್ಯ ಸಂಸ್ಕಾರಕ್ಕೂ ಲಂಚ : ಅಶೋಕ್‌ ಆಕ್ರೋಶ

ಬೆಂಗಳೂರು,ಅ.31– ಕಾಂಗ್ರೆಸ್‌‍ ಹೈಕಮಾಂಡ್‌ ಮತ್ತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಜೋಳಿಗೆ ತುಂಬಿಸಿ, ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಪಾಲಿಕೆ ಅಧಿಕಾರಿ ಗಳಿಗೆ ಎಷ್ಟು ಸುಲಿಗೆ ಟಾರ್ಗೆಟ್‌ ಕೊಟ್ಟಿದ್ದೀರಿ? ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮರಣೋತ್ತರ ಪರೀಕ್ಷೆ ವರದಿ ಪಡೆಯಲು ಲಂಚ, ಮರಣ ಪ್ರಮಾಣಪತ್ರ ಪಡೆಯಲು ಲಂಚ, ಅಂತ್ಯಸಂಸ್ಕಾರ ಮಾಡೋದಕ್ಕೆ ಲಂಚ.ನಿಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಉಪಮುಖ್ಯಮಂತ್ರಿಗಳೇ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಡಿ.ಕೆ ಶಿವಕುಮಾರ್‌ ಅವರೇ, ಪಾಲಿಕೆ ಶಿಕ್ಷಕರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಸಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.

ಮಾತೆತ್ತಿದರೆ ಟನಲ್‌ ರೋಡು, ಸ್ಕೈ ಡೆಕ್ಕು, ಬ್ರ್ಯಾಂಡ್‌ ಬೆಂಗಳೂರು ಎಂದು ದೊಡ್ಡ ದೊಡ್ಡ ಮಾತು ಅಡಿ ಬೊಗಳೆ ಬಿಡುವುದಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಾಲ ಕೊಡಿ. ನಿಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ , ಟಿವಿಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತಕ ಸುದ್ದಿ ಬಂದು ನಗರದ ಹೆಸರು ಹಾಳಾಗುತ್ತಿದೆ. ಒಳ್ಳೆಯ ಆಡಳಿತ ಕೊಡಲು ಸಾಧ್ಯವಾದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ ಎಂದು ಅಶೋಕ್‌ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.