Home Blog Page 61

ಸಿಜೆಐ ಮೇಲೆ ಶೂ ಎಸೆಯುವ ಯತ್ನ ಖಂಡಿಸಿ ಕಾಂಗ್ರೆಸ್‌‍ ಪ್ರತಿಭಟನೆ

ಬೆಂಗಳೂರು, ಅ.8- ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ಆರೋಪಿಯನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡು, ಗಡೀಪಾರು ಮಾಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಕೇಶ್‌ಕಿಶೋರ್‌ ಎಂಬ ವಕೀಲ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಕುಳಿತಿದ್ದ ಪೀಠದತ್ತ ಶೂ ಎಸೆಯಲು ಯತ್ನಿಸಿರುವುದು ಪ್ರಜಾಪ್ರಭುತ್ವಕ್ಕೆ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನೋಹರ್‌ ಆಗ್ರಹಿಸಿದರು.

ಇತಹ ಕೃತ್ಯವೆಸಗಿದ ವ್ಯಕ್ತಿಯನ್ನು ಬಂಧಿಸಿ, ಬಿಡುಗಡೆ ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಈ ವ್ಯಕ್ತಿ ಮಾಡಿರುವ ಕೃತ್ಯ ದೇಶದ ಪ್ರತಿಯೊಬ್ಬರಿಗೂ ಮಾಡಿರುವ ಅವಮಾನವಾಗಿದೆ. ಈ ಕೃತ್ಯವನ್ನು ಖಂಡಿಸಲು ಕೇಂದ್ರ ಸರ್ಕಾರ ಮುಂದಾಗದಿರುವುದು ದುರದೃಷ್ಟಕರ ಘಟನೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯನ್ನು ಖಂಡಿಸಿದ್ದಾರೆ. ಆದರೆ ಯಾವ ಬಿಜೆಪಿ ಮುಖಂಡರೂ ಈ ಘಟನೆಯನ್ನು ಖಂಡಿಸಿಲ್ಲ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್‌‍ ಮುಖಂಡರಾದ ಸುಧಾಕರರಾವ್‌, ಪ್ರಕಾಶ್‌, ಹೇಮರಾಜು, ಕುಶಾಲ್‌ ಅರವೇಗೌಡ, ಪುಟ್ಟರಾಜು, ಉಮೇಶ್‌, ನವೀನ್‌ ಸುಂಕದಕಟ್ಟೆ, ಚಿನ್ನಿ ಪ್ರಕಾಶ್‌, ಓಬಲೇಶ್‌, ಆನಂದ್‌, ಪ್ರವೀಣ್‌, ಪವನ್‌, ಅಜಯ್‌, ಕಾಂಗ್ರೆಸ್‌‍ ಕಾರ್ಯಕರ್ತರು ಭಾಗವಹಿಸಿದ್ದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-10-2025)

ನಿತ್ಯ ನೀತಿ : ಈ ಕ್ಷಣವನ್ನು ವಿವೇಕಯುತವಾಗಿ ಮತ್ತು ಮನಃಪೂರ್ವಕವಾಗಿ ಕಳೆಯುವುದೇ ಮನಸ್ಸು ಮತ್ತು ದೇಹ ಎರಡರ ಆರೋಗ್ಯದ ಗುಟ್ಟು.

ಪಂಚಾಂಗ : ಬುಧವಾರ, 08-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ಅಶ್ವಿನಿ / ಯೋಗ: ಹರ್ಷಣ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.05
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಕೆಲಸ-ಕಾರ್ಯಗಳಲ್ಲಿ ಅಲ್ಪ ವಿಳಂಬವಾಗ ಲಿದೆ. ಅಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.
ವೃಷಭ: ಹತ್ತಿರದ ಸ್ನೇಹಿತರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.
ಮಿಥುನ: ಅನಿರೀಕ್ಷಿತ ಖರ್ಚು ಹೆಚ್ಚಾಗಲಿದೆ. ಮಾನಸಿಕ ಒತ್ತಡ.

ಕಟಕ: ಮಾನಸಿಕ ಧೈರ್ಯ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾಡುವುದು ಒಳಿತು.
ಸಿಂಹ: ಕಾರ್ಯಸಾಧನೆಗೆ ಅಕ್ಕಪಕ್ಕದವರ ಅಡ್ಡಗಾಲು ಅಥವಾ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆಯಾಗಲಿದೆ.
ಕನ್ಯಾ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.
ವೃಶ್ಚಿಕ:ಹಿಂಜರಿಕೆ ಮತ್ತು ಭಯದ ಸ್ವಭಾವ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಧನುಸ್ಸು: ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳಿಗೆ ಲಾಭದಾಯಕವಾದ ದಿನ.

ಮಕರ: ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ನೀವಾಡುವ ಮಾತಿನಲ್ಲಿ ಹಿಡಿತವಿರಲಿ.
ಕುಂಭ: ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ.
ಮೀನ: ವೃತ್ತಿ ಬದಲಾವಣೆ ಮಾಡುವ ಬಗ್ಗೆ ಪತ್ನಿಯೊಂದಿಗೆ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನಿಸಿ.

ಮೈಸೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಹಾಡಹಗಲೇ ರೌಡಿಯ ಭೀಕರ ಕೊಲೆ

ಮೈಸೂರು,ಅ.7-ಕಾರನ್ನು ತಡೆದ ಯುವಕರ ಗುಂಪೊಂದು ಹಾಡುಹಗಲೇ ರೌಡಿಯನ್ನು ಕಾರಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಘಟನೆ ವಸ್ತು ಪ್ರದರ್ಶನ ಮೈದಾನದ ಬಳಿ ನಡೆದಿದೆ.

ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್‌ ಅಲಿಯಾಸ್‌‍ ಮುಖಾಮುಚ್ಚಿ ಅಲಿಯಾಸ್‌‍ ಗಿಲಿಗಿಲಿ ಕೊಲೆಯಾದ ರೌಡಿ.ಇಂದು ಮಧ್ಯಾಹ್ನ ಆತ ಕಾರಿನಲ್ಲಿ ಹೋಗುತ್ತಿದ್ದಾಗ ಯುವಕರ ಗುಂಪೊಂದು ಮೈಸೂರಿನ ವಸ್ತು ಪ್ರದರ್ಶನ ಬಳಿ ಕಾರು ಅಡ್ಡಗಟ್ಟಿ ಆತನನ್ನು ಕಾರಿನಿಂದ ಹೊರಗೆಳೆದು ತಲೆ, ಕೈ,ಕಾಲು ಹಾಗೂ ದೇಹದ ವಿವಿಧ ಭಾಗಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದ ನಡು ರಸ್ತೆಯಲ್ಲೇ ರೌಡಿ ವೆಂಕಟೇಶ್‌ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿದು ನಜರ್‌ಬಾದ್‌ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್‌‍ ಆಯುಕ್ತರಾದ ಸೀಮಾ ಲಾಟ್ಕರ್‌, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್‌ ಭೇಟಿ ನೀಡಿದ್ದಾರೆ.

ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್‌ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್‌ ಕಾರ್ತಿಕ್‌ ಎಂಬಾತನ ಕೊಲೆಗೆ ಪ್ರತಿಕಾರವಾಗಿ ಇಂದು ವೆಂಕಟೇಶ್‌ ಕೊಲೆ ನಡೆದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡುಹಗಲೇ ನಡು ರಸ್ತೆಯಲ್ಲಿ ಭೀಕರ ಕೊಲೆ ಮಾಡಿರುವುದನ್ನು ಕಂಡ ಸಾರ್ವಜನಿಕರು ಭಯಭೀತರಾಗಿದ್ದಾರೆ.

ಪಟಾಕಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ಬೆಂಗಳೂರು,ಅ.7- ದೀಪಾವಳಿ ಸಮೀಪಿಸುತ್ತಿದ್ದು ಪಟಾಕಿಯಿಂದ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಸೂಚಿಸಿದ್ದಾರೆ.

ಈ ಸಂಬಂಧ ತಮ ಕಚೇರಿಯಲ್ಲಿಂದು ಜಿಬಿಎ, ಅಗ್ನಿ ಶಾಮಕ, ಬೆಸ್ಕಾಂ ಹಾಗೂ ಜಿಎಸ್‌‍ಟಿ ಅಧಿಕಾರಿಗಳು ಸೇರಿದಂತೆ ಪಟಾಕಿ ಮಾರಾಟಗಾರರ ಜೊತೆ ಆಯುಕ್ತರು ಸಭೆ ನಡೆಸಿ ಕೆಲವು ಸಲಹೆ, ಸೂಚನೆ ನೀಡಿದರು.ಕಳೆದ ವರ್ಷ ಆನೇಕಲ್‌ನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಘಟನೆ ನಗರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.

ಎಲ್ಲಾ ವಿಭಾಗದವರು ನಮಗೆ ಮಾಹಿತಿ ನೀಡಿದ್ದಾರೆ. ಪಟಾಕಿ ಮಾರಾಟ ಮಾಡುವವರು ಅರ್ಜಿ ಹಾಕಿದರೆ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪಟಾಕಿ ಮಾರಾಟ ಮಾಡಲು 57 ಮೈದಾನಗಳಲ್ಲಿ ,411 ಜಾಗ ನಿಗಧಿ ಮಾಡಲಾಗಿದೆ ಎಂದರು.ಅಗ್ನಿ ಶಾಮಕ ಇಲಾಖೆಗೆ ಮಾಲಿನ್ಯ ಮಂಡಳಿ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಯಾವುದೇ ಗೊಂದಲ ಹಾಗೂ ಸಮಸ್ಯೆಗಳಾಗದಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದರು.

ಬೆಂಗಳೂರಲ್ಲಿ 2.66 ಲಕ್ಷ ಕುಟುಂಬಗಳ ಸಮೀಕ್ಷೆ, ಅಸಂಬದ್ಧ ಪ್ರಶ್ನೆಗಳಿಗೆ ಕೊಕ್‌

ಬೆಂಗಳೂರು, ಅ.7- ಜಾತಿ ಗಣತಿ ವೇಳೆ ಕೇಳಲಾಗುತ್ತಿದ್ದ ಕೆಲವು ಅಸಂಬದ್ಧ ಪ್ರಶ್ನೆಗಳಿಗೆ ಕೊಕ್‌ ನೀಡಲಾಗಿದೆ.ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಪ್ರಶ್ನೆಗಳಿಗೆ ವಿನಾಯಿತಿ ನೀಡಿ ಸರ್ಕಾರ ಮೌಖಿಕ ಅದೇಶ ಹೊರಡಿಸಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಗಣತಿ ವೇಳೆ ಕೇಳಲಾಗುತ್ತಿದ್ದ ನಿಮ ಮನೆಯಲ್ಲಿ ಎಷ್ಟು ಕುರಿ ಮತ್ತು ಕೋಳಿಗಳಿವೆ, ಎಷ್ಟು ಚಿನ್ನ ಇದೆ, ಮನೆ ಸ್ವಂತದ್ದಾ, ನಿಮಗೆ ಜಮೀನು ಎಷ್ಟಿದೆ ಎಂಬ ಪ್ರಶ್ನೆಗಳಿಗೆ ಬ್ರೇಕ್‌ ಹಾಕುವಂತೆ ಗಣತಿದಾರರಿಗೆ ಸೂಚಿಸಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತಿತರರು ಇಂತಹ ಇರಿಸು ಮುರಿಸು ಪ್ರಶ್ನೆ ಕೇಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅಸಂಬದ್ಧ ಪ್ರಶ್ನೆ ಕೇಳದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.

2.66 ಲಕ್ಷ ಕುಟುಂಬಗಳ ಸಮೀಕ್ಷೆ; ನಗರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗಿದ್ದರೂ ಇದುವರೆಗೂ 2.66 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಈವರೆಗೆ 2.66 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.

5 ನಗರ ಪಾಲಿಕೆಗಳಲ್ಲಿ ನಿನ್ನೆ ಸಂಜೆ 7 ಗಂಟೆಯವರೆಗೆ 1,41,442 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ.ಸಮೀಕ್ಷಾದಾರರು ನಿಮ್ಮ ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಹಕರಿಸಬೇಕು ಎಂದು ಜಿಬಿಎ ಮನವಿ ಮಾಡಿಕೊಂಡಿದೆ.

ಆನ್‌ಲೈನ್‌ ಸೌಲಭ್ಯ: ನಾಗರಿಕರು ಸ್ವತಃ ಆನ್‌ಲೈನ್‌‍ ಮೂಲಕವೂ ಸಮೀಕ್ಷೆಯಲ್ಲಿ
ಪಾಲ್ಗೊಳ್ಳಬಹುದಾಗಿದೆ. ವೆಬ್‌ ಸೈಟ್‌ ಲಿಂಕ್‌‍: ಕೆಎಸ್‌‍ಸಿಬಿಸಿಸೆಲ್ಫ್ ಡಿಕ್ಲೆರೇಷನ್‌.ಕರ್ನಾಟಕ.ಗಾವ್‌ಇನ್‌ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸಮೀಕ್ಷೆ ವಿವರ:1. ಕೇಂದ್ರ ನಗರ ಪಾಲಿಕೆ ಯಲ್ಲಿ 31,8152. ಪೂರ್ವ ನಗರ ಪಾಲಿಕೆ : 38,3743. ಉತ್ತರ ನಗರ ಪಾಲಿಕೆ : 68,6394. ದಕ್ಷಿಣ ನಗರ ಪಾಲಿಕೆ : 39,3155. ಪಶ್ಚಿಮ ನಗರ ಪಾಲಿಕೆ : 87,923
ದಿನಗಳಲ್ಲಿ ಸಮೀಕ್ಷೆಯಾದ ಒಟ್ಟು ಮನೆಗಳು: 2,66,066

ಸಿದ್ದರಾಮಯ್ಯ ಏನು ಲಿಂಗಾಯತ ಧರ್ಮಗುರುಗಳೇ..? : ಛಲವಾದಿ ನಾರಾಯಣಸ್ವಾಮಿ ತರಾಟೆ

ಬೆಂಗಳೂರು,ಅ.7– ಪ್ರತ್ಯೇಕ ಧರ್ಮ ಕುರಿತು ವೀರಶೈವ ಲಿಂಗಾಯಿತರಿಗೆ ಇಲ್ಲದ ಉಸಾಬರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಕೆ ಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾ ಯಣಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ಕುರಿತು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಸಮುದಾಯಕ್ಕೆ ಇಲ್ಲದ ಉಸಾಬರಿ ಸಿದ್ದರಾಮಯ್ಯನವರಿಗೆ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತರಿಗೆ ಇಲ್ಲದ ಉಸಾಬರಿ ಯಾಕೆ? ಅವರೇನು ಧರ್ಮಗುರುಗಳಾ? ಎಂದು ಕಿಡಿಕಾರಿದರು. ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದಾಗಿ ಸಿಎಂ ಹೇಳಿದ್ದಾರೆ. ಈಗಾಗಲೇ ಕೇಂದ್ರದ ಪ್ರಧಾನಿ ಮೋದಿ ಸರ್ಕಾರವೇ ಮೀಸಲಾತಿ ಕೊಟ್ಟಿದೆ. ಈಗ ನಾವು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಹೊಸದೇನಿದೆ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರದಡಿ ಯಾರು ಪರಿಶಿಷ್ಟರಿದ್ದಾರೆ ಅವರು ಬೌದ್ಧ ಧರ್ಮದಲ್ಲಿದ್ದರೆ ಅವರಿಗೆ ಮೀಸಲಾತಿ ಸಿಗಲಿದೆ ಎಂದು ಹೇಳಿದೆ. ಮೊದಲಿಂದಲೂ ಕೇಂದ್ರ ಕೊಡುತ್ತಿದೆ, ರಾಜ್ಯ ಸರ್ಕಾರ ಹೊಸದಾಗಿ ಏನೂ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಎಸ್ಟಿಗಳಿಗೆ 3%-7%ಗೆ ಮೀಸಲಾತಿ ಹೆಚ್ಚಳ ಮಾಡಿತ್ತು. ಸಿದ್ದರಾಮಯ್ಯ ಇದನ್ನು ನಂಬಬೇಡಿ ಎಂದು ಹೇಳಿದ್ದರು. ಈಗ 7% ಮೀಸಲಾತಿ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ಸುಳ್ಳು ಹೇಳ್ತಿಲ್ಲವಾ.? ಎಂದು ಪ್ರಶ್ನಿಸಿದರು. ಈಗ ಎಸ್ಟಿಗಳಿಗೆ 7% ಕೊಟ್ಟು, ಬೇರೆ ಜಾತಿಗಳನ್ನು ಸೇರಿಸಲು ಹೊರಟಿದ್ದಾರೆ. ಅವರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಜನಗಣತಿ ಗೊಂದಲದ ಗೂಡಾಗಿದೆ. ಕೊಟ್ಟಿರುವ ಸಾಫ್‌್ಟವೇರ್‌ ಕೈ ಕೊಟ್ಟಿದೆ. 60 ಪ್ರಶ್ನೆ ತುಂಬಲು ಒಂದು ಗಂಟೆ ಬೇಕಿದೆ. ಬೆಂಗಳೂರಿನಲ್ಲಿ ಯಾರ ಮನೆಲ್ಲೂ ಆರಂಭವಾಗಿಲ್ಲ. ಅಪಾರ್ಟೆಂಟ್‌ನಲ್ಲಿ ಈಗ ಶುರು ಮಾಡುತ್ತಾರಂತೆ.

ಇಂದು ವಾಲೀಕಿ ಜಯಂತಿ ನಡೆಯುತ್ತಿದೆ. ಪ್ರಸನ್ನಾನಂದ ಗುರೂಜಿ ಬಂದಿಲ್ಲ. ಯಾಕಂದರೆ ಪ್ರಕರಣದಲ್ಲಿ ಸಿದ್ದರಾಮಯ್ಯ ಕೈವಾಡವಿದೆ ಎಂದು. ಮೂನ್ನೂರಕ್ಕೂ ಹೆಚ್ಚು ಕೋಟಿ ಎಸ್‌‍ಸಿ-ಎಸ್‌‍ಪಿ-ಎಸ್‌‍ಪಿಪಿ ಹಣ ವ್ಯಯ ಮಾಡಿರುವುದದಾಗಿ ಹೇಳಿದ್ದಾರೆ. ಚುನಾವಣೆ ಸಂಧರ್ಭದಲ್ಲಿ 7% ರಿಸರ್ವೇಷನ್‌ ಇಲ್ಲ ಎಂದೇಳಿ ಮೋಸ ಮಾಡಿದ್ದಾರೆ. ಆ ಸಮುದಾಯಗಳ ನಾಯಕ ರಾಜಣ್ಣ ಅವರನ್ನ ಉಚ್ಚಾಟನೆ ಮಾಡಿದ್ದಾರೆ. ಈಗ ಇಡೀ ಸಮುದಾಯ ನಿಮ ವಿರುದ್ಧ ತಿರುಗಿಬಿದ್ದಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಹೆಚ್ಚಿಸಿದ್ದು, ಬಿಜೆಪಿಯೇ ಹೊರತು ಕಾಂಗ್ರೆಸ್‌‍ ಅಲ್ಲ ಎಂದು ತಿರುಗೇಟು ನೀಡಿದರು.

ಖಂಡನೆ: ಈ ರಾಷ್ಟ್ರದ ಸಿಜೆ ಬಿ.ಆರ್‌ ಗವಾಯಿ ಅವರ ಮೇಲೆ ಕೋರ್ಟ್‌ ಆವರಣದಲ್ಲಿ ಶೂ ಎಸೆಯುವ ಕೃತ್ಯ ಖಂಡನೀಯ. ಇದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಬರೆದಿರುವ ಸಂವಿಧಾನಕ್ಕೆ ಅಪಚಾರ.ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆಗೆ ಆದ ಅಪಚಾರ. ಈ ರೀತಿಯ ಯಾವುಕೇ ಕೆಲಸ ಬುದ್ದಿವಂತರು ಯಾರೂ ಮಾಡುವುದಿಲ್ಲ. ಆದರೆ ವಕೀಲರೊಬ್ಬರು ಮಾಡಿದ್ದಾರೆ. ನಾನೂ ಈ ಘಟನೆ ಖಂಡಿಸುತ್ತೇನೆ. ಮುಖ್ಯ ನ್ಯಾಯಾಧೀಶರು ಯಾರೇ ಇದ್ದರೂ ಆ ಸ್ಥಾನಕ್ಕೆ ಗೌರವ ಕೊಡಬೇಕು. ಶೂ ಎಸೆದ ವ್ಯಕ್ತಿಗೆ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ದಸರಾ ರಜೆ ವಿಸ್ತರಣೆಗೆ ನೌಕರರ ಸಂಘ ಆಗ್ರಹ

ಬೆಂಗಳೂರು,ಅ.7- ಕಳೆದ ಸೆಪ್ಟಂಬರ್‌ 22ರಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯದಲ್ಲಿ ಶಿಕ್ಷಕರು ತೊಡಗಿರುವ ಕಾರಣ, ದಸರಾ ರಜೆ ವಿಸ್ತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪನವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಪ್ರಸ್ತುತ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆಪ್ಟೆಂಬರ್‌ 20ರಿಂದ ಅಕ್ಟೋಬರ್‌ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಆದರೆ, ಶಿಕ್ಷಕರು ಜಾತಿಗಣತಿ ಕಾರ್ಯದಲ್ಲಿ ತೊಡಗಿರುವುದರಿಂದ ಈ ರಜೆಯ ಅವಧಿಯನ್ನು ವಿಸ್ತರಿಸಬೇಕೆಂದು ಸಂಘ ಒತ್ತಾಯಿಸಿದೆ.
ಸೆಪ್ಟಂಬರ್‌ 22ರಿಂದ ಶಿಕ್ಷಕರು ಜಾತಿಗಣತಿ ಪ್ರಾರಂಭಿಸಿದ್ದಾರೆ. ಸಮೀಕ್ಷೆ ಬೆಂಗಳೂರಿನಲ್ಲಿ ಇನ್ನೂ ಗೊಂದಲದಲ್ಲಿ ನಡೆಯುತ್ತಿದೆ. ಹೀಗಾಗಿ ಶಿಕ್ಷಕರು ದೈಹಿಕ ಬೌದ್ದಿಕವಾಗಿ ಒತ್ತಡದಲ್ಲಿದ್ದಾರೆ. ಅವರಿಗೆ ದೈಹಿಕ ಮಾನಸಿಕ ವಿರಾಮದ ಅವಶ್ಯಕತೆ ಇದೆ. ಹೀಗಾಗಿ ಅಕ್ಟೋಬರ್‌ 17ರವರೆಗೆ ದಸರಾ ರಜೆ ವಿಸ್ತರಿಸುವಂತೆ ಮನವಿ ಮಾಡಿದೆ.

ಜಾತಿಗಣತಿಯ ಕಾರ್ಯವು ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಹೇರಿದ್ದು, ಇದರಿಂದ ಅವರ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಶಾಲೆಗಳು ಮಕ್ಕಳಿಗೆ ರಜೆ ಘೋಷಿಸಿದ್ದರೂ, ಶಿಕ್ಷಕರು ಗಣತಿಯ ಕೆಲಸದಲ್ಲಿ ತೊಡಗಿರುವುದರಿಂದ ಅವರಿಗೆ ರಜೆಯ ಲಾಭವು ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಈ ಸಮೀಕ್ಷೆಯು ಇನ್ನೂ ಅಸ್ತವ್ಯಸ್ತವಾಗಿ ನಡೆಯುತ್ತಿದ್ದು, ಶಿಕ್ಷಕರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಂದರ್ಭದಲ್ಲಿ ರಜೆಯನ್ನು ವಿಸ್ತರಿಸಿದರೆ ಶಿಕ್ಷಕರಿಗೆ ಕೆಲಸದ ಒತ್ತಡ ತಗ್ಗಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಈ ಮನವಿಯು ಶಿಕ್ಷಕರ ಆರೋಗ್ಯವನ್ನು ಕಾಪಾಡುವ ಜೊತೆಗೆ, ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. ಒತ್ತಡದಿಂದ ಕೂಡಿದ ಶಿಕ್ಷಕರು ತಮ ಶಿಕ್ಷಣ ಕಾರ್ಯದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ನೀಡಲು ಸಾಧ್ಯವಾಗುವುದಿಲ್ಲ. ರಜೆಯನ್ನು ವಿಸ್ತರಿಸಿದರೆ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ. ಈ ಕೋರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಕೋರಿಕೊಂಡಿದೆ.

ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಅವರ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು. ಜಾತಿಗಣತಿ ಮುಂತಾದ ಹೆಚ್ಚುವರಿ ಕಾರ್ಯಗಳು ಶಿಕ್ಷಕರ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಹಾಗಾಗಿ ರಜೆಯ ವಿಸ್ತರಣೆಯು ಈ ಸಮಸ್ಯೆಗೆ ಪರಿಹಾರವಾಗಬಹುದು ಎಂದು ಹೇಳಿದೆ.

ಬೆಂಗಳೂರು : ಜಾರ್ಖಂಡ್‌ ಮೂಲದ ಗ್ರಾನೈಟ್‌ ಕಾರ್ಮಿಕನ ಕೊಲೆ

ಬೆಂಗಳೂರು,ಅ.7- ಜಾರ್ಖಂಡ್‌ ಮೂಲದ ಇಬ್ಬರು ಗ್ರಾನೈಟ್‌ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅಮೃತಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮು (35) ಕೊಲೆಯಾದ ವ್ಯಕ್ತಿ. ಆರೋಪಿ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರು ಜಾರ್ಖಂಡ್‌ ನಿವಾಸಿಗಳಾಗಿದ್ದು ಮರಿಯಣ್ಣಪಾಳ್ಯದಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್‌ ಕಟ್ಟಡದಲ್ಲಿ ಗ್ರಾನೇಟ್‌ ಹಾಕುವ ಕೆಲಸ ಮಾಡಿಕೊಂಡು ಅಲ್ಲಿಯ ಲೇಬರ್‌ ಶೆಡ್‌ನಲ್ಲಿ ರಾತ್ರಿ ತಂಗುತ್ತಿದ್ದರು.

ರಾತ್ರಿ 12 ಗಂಟೆ ಸುಮಾರಿನಲ್ಲಿ ಮದ್ಯಪಾನ ಸೇವಿಸಿದ್ದ ಇವರಿಬ್ಬರು ಲೇಬರ್‌ ಶೆಡ್‌ನಲ್ಲಿ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾರೆ. ಆ ವೇಳೆ ರಘು ಚಾಕುವಿನಿಂದ ರಾಮುವಿನ ಹೊಟ್ಟೆ ,ಎದೆ ಇನ್ನೀತರ ಭಾಗಗಳಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದನು.

ಸುದ್ದಿ ತಿಳಿದು ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಶೋಧ ಕಾರ್ಯ ನಡೆಸಿದಾಗ ಆತ ಜಾರ್ಖಂಡ್‌ಗೆ ಪರಾರಿಯಾಗಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತನ್ನ ಜನರ ಮೇಲೆ ಬಾಂಬ್‌ ದಾಳಿ ನಡೆಸುವ ದೇಶ ಪಾಕಿಸ್ತಾನ : ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ

ನವದೆಹಲಿ, ಅ.7- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಪಾಕಿಸ್ತಾನದ ಚಳಿ ಬಿಡಿಸಿದೆ. ಭಯೋತ್ಪಾದನೆಯ ಕೇಂದ್ರ ಬಿಂದುವಾಗಿರುವ ಪಾಕಿಸ್ತಾನವು ತನ್ನ ಜನರ ಮೇಲೆ ಬಾಂಬ್‌ ದಾಳಿ ನಡೆಸುವ ದೇಶ ಎಂದು ಭಾರತ ತೀವ್ರ ವಾಗ್ದಾಳಿ ನಡೆಸಿದೆ.

ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತ ಮುಕ್ತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್‌ ಅವರು, ಪಾಕಿಸ್ತಾನ ವ್ಯವಸ್ಥಿತ ನರಮೇಧ ನಡೆಸುತ್ತದೆ ಮತ್ತು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ
ಜಗತ್ತನ್ನು ಬೇರೆಡೆಗೆ ಸೆಳೆಯಲು ಮಾತ್ರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕಾಶ್ಮೀರಿ ಮಹಿಳೆಯರು ದಶಕಗಳಿಂದ ಲೈಂಗಿಕ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿಯೊಬ್ಬರು ಆರೋಪಿಸಿದ ಸ್ವಲ್ಪ ಸಮಯದ ನಂತರ ಅವರ ಹೇಳಿಕೆಗಳು ಬಂದವು.ಪ್ರತಿ ವರ್ಷ, ದುರದೃಷ್ಟವಶಾತ್‌, ನನ್ನ ದೇಶದ ವಿರುದ್ಧ, ವಿಶೇಷವಾಗಿ ಅವರು ಬಯಸುವ ಭಾರತೀಯ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪಾಕಿಸ್ತಾನದ ಭ್ರಮೆಯ ಟೀಕೆಗಳನ್ನು ಕೇಳಲು ಆಗುತ್ತಿಲ್ಲ. ಮಹಿಳೆಯರು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯಲ್ಲಿ ನಮ್ಮ ಪ್ರವರ್ತಕ ದಾಖಲೆಯು ಕಳಂಕರಹಿತ ಮತ್ತು ಹಾನಿಗೊಳಗಾಗುವುದಿಲ್ಲ ಎಂದು ಹರೀಶ್‌ ಹೇಳಿದರು.

ತನ್ನ ಜನರ ಮೇಲೆ ಬಾಂಬ್‌ ದಾಳಿ ಮಾಡುವ, ವ್ಯವಸ್ಥಿತ ನರಮೇಧವನ್ನು ನಡೆಸುವ ದೇಶವು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಮಾತ್ರ ಜಗತ್ತನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬಹುದು ಎಂದು ಅವರು ಪಾಕಿಸ್ತಾನವನ್ನು ಉಲ್ಲೇಖಿಸಿ ಹೇಳಿದರು.
ಪಾಕಿಸ್ತಾನವು 1971 ರಲ್ಲಿ ಆಪರೇಷನ್‌ ಸರ್ಚ್‌ಲೈಟ್‌‍ ನಡೆಸಿದ ದೇಶವಾಗಿದ್ದು, ತನ್ನದೇ ಆದ ಸೈನ್ಯದಿಂದ 400,000 ಮಹಿಳಾ ನಾಗರಿಕರ ಮೇಲೆ ಸಾಮೂಹಿಕ ಅತ್ಯಾಚಾರದ ವ್ಯವಸ್ಥಿತ ಅಭಿಯಾನ ಕ್ಕೆ ಅನುಮತಿ ನೀಡಿದೆ ಎಂದು ಭಾರತೀಯ ರಾಯಭಾರಿ ಹೇಳಿದರು.

ವಿಶ್ವದ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ದಾಖಲೆಗಳಲ್ಲಿ ಒಂದನ್ನು ಹೊಂದಿರುವ ದೇಶವು ತನ್ನ ಸಮಾಜದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಅತಿಯಾದ ರಾಜ್ಯ ಪ್ರಾಯೋಜಿತ ಕಿರುಕುಳ ಮತ್ತು ವ್ಯವಸ್ಥಿತ ತಾರತಮ್ಯ ವನ್ನು ಎದುರಿಸಬೇಕು ಎಂದು ಭಾರತ ಕಳೆದ ವಾರವೂ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತ್ತು.

“ಐ ಲವ್‌ ಮುಹಮದ್‌” ಪೋಸ್ಟರ್‌ ಹಾಕಿದರೆ ಕಠಿಣ ಕ್ರಮ

ಬೆಂಗಳೂರು,ಅ.7– ರಾಜ್ಯದಲ್ಲಿ ಐ ಲವ್‌ ಮುಹಮದ್‌ ಎಂಬ ಪೋಸ್ಟರ್‌ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ಎಚ್ಚರಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹಾಕಿದ್ದ ಪೋಸ್ಟರ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಅಲ್ಲದೇ ಮತ್ತೆ ಹಾಕದಂತೆ ಸೂಚನೆ ನೀಡಿದ್ದೇವೆ ಎಂದರು.

ಐ ಲವ್‌ ಮುಹಮದ್‌ ಎಂಬ ಪೋಸ್ಟರ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದೆಂತೆ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿವೆ. ದಾವಣಗೆರೆಯಲ್ಲಿ 8 ಮಂದಿಯನ್ನು ಹಾಗೂ ಬೆಳಗಾವಿಯಲ್ಲಿ 11 ಮಂದಿಯನ್ನು ಬಂಧಿಸಿ ಕ್ರಮಕೈಗೊಂಡಿದ್ದೇವೆ ಎಂದರು.ಕಲ್ಬುರ್ಗಿಯಲ್ಲಿ ಪೋಸ್ಟರ್‌ ಹಾಕಿದ್ದನ್ನು ತೆರವುಗೊಳಿಸಿದ್ದೇವೆ.

ಈ ರೀತಿಯ ಘಟನೆ ಮರು ಕಳಿಸದಂತೆ, ಯಾವುದೇ ಅಹಿತರ ಘಟನೆ ನಡೆಯದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಭದ್ರತೆ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿದೆ ಎಂದರು.ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.