ಇಮ್ರಾನ್ ಮೆಗಾ ಮಾರ್ಚ್‍ಗೆ ಸಿದ್ಧತೆ, 100ಕ್ಕೂಹೆಚ್ಚು ಕಾರ್ಯಕರ್ತರ ಬಂಧನ

Spread the love

ಲಾಹೋರ್, ಮೇ 24 -ಅವಧಿಪೂರ್ವ ಚುನಾವಣೆಗೆ ಆಗ್ರಹಿಸಿ ರಾಜಧಾನಿ ಇಸ್ಲಾಮಾಬಾದ್‍ನಲ್ಲಿ ಮೆಗಾ-ಮಾರ್ಚ್ ನಡೆಸಲು ಪಾಕಿಸ್ತಾನಿ ಮಾಜಿ  ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದಲ್ಲಿ ವಿರೋಧಪಕ್ಷಗಳು ಮುಂದಾಗುತ್ತಿದ್ದಂತೆ 100 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಂಜಾಬ್ ಪ್ರಾಂತ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ-ಎನ್ (ಪಿಎಂಎಲ-ಎನ) ನೇತೃತ್ವದ ಸಮ್ಮಿಶ್ರ ಸರ್ಕಾರದ ಆದೇಶದ ಮೇರೆಗೆ ಈ ಬಂಧನಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿಯಿಂದಲೆ ಪಾಕಿಸ್ತಾನ್ ತೆಹ್ರೀಕ-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರ ಮೇಲೆ ನಿರ್ಬಂಧ ವಿಧಿಸಿ ಬಂಧಿಸಲಾಗುತ್ತಿದೆ.

ಸಂಸತ್ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಬೇಕೆಂದು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರ ನಡುವೆ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಜೋರಾಗಿ ನಡೆಯುತ್ತಿವೆ. ಪ್ರಸ್ತುತ ಆಂದೋಲನಕಾರರು ಮೇ 25 ರಂದು ಇಸ್ಲಾಮಾಬಾದ್‍ನಲ್ಲಿ ಸಮಾವೇಶಗೊಳ್ಳಲು ನಿರ್ಧರಿಸಿದ್ದರು.

ಆಜಾದಿ ಮಾರ್ಚ ನಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದ್ ಹೋಗುತ್ತಿದ್ದ ಮಹಿಳಾ ಶಾಸಕಿ ರಶೀದಾ ಖಾನುಮ್ ಸೇರಿದಂತೆ 100 ಕ್ಕೂ ಹೆಚ್ಚು ಪಿಟಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ಪಕ್ಷದ ಕಾರ್ಯದರ್ಶಿ ಮುಸ್ಸರತ್ ಚೀಮಾ ಹೇಳಿದ್ದಾರೆ.

ಹೆಚ್ಚಿನ ಪಿಟಿಐ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಲಾಹೋರ್‍ನಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಬಂಧನದಿಂದ ತಪ್ಪಿಸಿಕೊಳ್ಳಲು ಪಕ್ಷದ ಹಲವಾರು ಪ್ರಾಂತೀಯ ನಾಯಕರು ಭೂಗತರಾಗಿದ್ದಾರೆ .

Facebook Comments