ಇಸ್ಲಾಮಾಬಾದ್, ಫೆ.10- ಕರ್ನಾಟಕದಲ್ಲಿ ನಡೆದ ಹಿಜಾಬ್ ಗದ್ದಲಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಗು ತೂರಿಸಿದ್ದು, ಭಾರತೀಯ ವಿದೇಶಾಂಗ ಕಾರ್ಯದರ್ಶಿಯನ್ನು ಕರೆಸಿ ತನ್ನ ಕಳವಳವನ್ನು ವ್ಯಕ್ತ ಪಡಿಸಿದೆ. ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತದ ಉಸ್ತುವಾರಿಯನ್ನು ಕರೆಸಿ ವಿವರಣೆ ಪಡೆದಿದೆ. ಭಾರತದಲ್ಲಿ ಮುಸ್ಲಿಮರ ವಿರುದ್ಧ ಧಾರ್ಮಿಕ ಅಸಹಿಷ್ಣುತೆ, ನಕಾರಾತ್ಮಕ ಪ್ರಚಾರ, ಕಳಂಕ ಮತ್ತು ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ತನ್ನ ಕಳವಳವನ್ನು ವ್ಯಕ್ತ ಪಡಿಸಿದೆ. ಈ ಕುರಿತು ವಿದೇಶಾಂಗ ಕಚೇರಿ ನಿನ್ನೆ ತಡವಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಮುಸ್ಲಿಂ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಅಪರಾಧಿಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕ್ರಮ ಜರುಗಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ಮಾನವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಹುಸೇನ್, ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಮುಸ್ಲಿಂ ಮಹಿಳೆಯರಿಗೆ ಇತರ ಉಡುಗೆಗಳಂತೆ ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆಯಾಗಿದೆ. ಈ ವಿಷಯದಲ್ಲಿ ಅವರಿಗೆ ಮುಕ್ತ ಆಯ್ಕೆಯನ್ನು ನೀಡಬೇಕು ಎಂದು ಹೇಳಿದೆ.
ಪಾಕಿಸ್ತಾನದ ಸಚಿವರ ಟ್ವೀಟ್‍ಗಳಿಗೆ ಪ್ರತಿಕ್ರಿಯಿಸಿರುವ ಭಾರತೀಯ ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಭಾರತವನ್ನು ಮಾನಹಾನಿ ಮಾಡುವ ಸಂಚಿನ ಭಾಗವಾಗಿ ಕೆಲವರು ಡ್ರೆಸ್ ಕೋಡ್ ಮತ್ತು ಸಂಸ್ಥೆಗಳ ಶಿಸ್ತಿನ ನಿರ್ಧಾರಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಅಪರಾಧ ಮತ್ತು ಕ್ರೌರ್ಯದ ಕಾಡಾಗಿರುವ ಪಾಕಿಸ್ತಾನ ಭಾರತಕ್ಕೆ ಸಹಿಷ್ಣುತೆ ಮತ್ತು ಜಾತ್ಯತೀತತೆಯ ಬಗ್ಗೆ ಬೋಧಿಸುತ್ತಿದೆ. ನಮ್ಮ ದೇಶ ಅಂತರ್ಗತ ಸಂಸ್ಕೃತಿಯ ಬೀಡು ಎಂದು ನಖ್ವಿ ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಕ್ಕುಗಳನ್ನು ನಿರ್ಲಜ್ಜವಾಗಿ ತುಳಿಯಲಾಗುತ್ತಿದೆ. ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರ ಸಮಾನ ಹಕ್ಕುಗಳು, ಘನತೆ ಮತ್ತು ಸಮೃದ್ಧಿಯು ಸಹಿಷ್ಣುತೆ, ಸಾಮರಸ್ಯ ಮತ್ತು ಒಳಗೊಳ್ಳುವಿಕೆಗೆ ಭಾರತದ ಬದ್ಧತೆಯ ಒಂದು ಭಾಗವಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.
