ಶ್ರೀನಗರ,ಸೆ.4- ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿ ಒಳನುಸುಳುವ ಯತ್ನದಲ್ಲಿ ಗಾಯಗೊಂಡಿದ್ದ ಪಾಕ್‍ನ ಉಗ್ರ ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಭಾಜ್‍ಕೋಟ್ ಗ್ರಾಮದ ತಬ್ರಕ್ ಹುಸೇನ್ ಆ.21ರಂದು ಜಮ್ಮುಕಾಶ್ಮೀರದ ರಜೋರಿ ಜಿಲ್ಲೆಯ ನೌಷಾರ ಸೆಕ್ಟರ್‍ನಲ್ಲಿ ಒಳನುಸುಳುವ ಯತ್ನ ನಡೆಸಿದ್ದ. ಇದನ್ನು ಗುರುತಿಸಿದ ಭಾರತೀಯ ಸೇನೆ ಗುಂಡು ಹಾರಿಸಿತ್ತು. ಈ ವೇಳೆ ಆತ ಗಾಯಗೊಂಡು ಸೆರೆ ಸಿಕ್ಕಿದ್ದ.
ರಜೋರಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಹೇಳಲಾಗಿದೆ. ತಬ್ರಾಕ್ ಹುಸೇನ್‍ನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಸಿಒಎಲ್‍ನಲ್ಲಿ ತರಬೇತುಗೊಳಿಸಲಾಗಿದೆ. ಭಾರತದ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಲು ಯೂನಸ್ ಚೌಧರಿ ಎಂಬುವರು 30 ಸಾವಿರ ಪಾಕ್ ರೂಪಾಯಿಗಳನ್ನು ಕೊಟ್ಟು ಕಳಹಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿತ್ತು.
ತನ್ನೊಂದಿಗೆ ಇನ್ನು ಮೂರಕ್ಕೂ ಹೆಚ್ಚು ಮಂದಿ ಭಾರತದೊಳಗೆ ನುಸುಳಿದ್ದು, ಗುರಿ ಸಾಧನೆಗಾಗಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ತಬ್ರಾಕ್ ಹೇಳಿದ್ದಾನೆ. 2016ರಲ್ಲಿ ತಬ್ರಾಕ್ ಹುಸೇನ ತನ್ನ ಸಹೋದರ ಅರೋನ್ ಆಲಿ ಯೊಂದಿಗೆ ಭಾರತದೊಳಗೆ ನುಸುಳುವ ಯತ್ನ ಮಾಡಿ ಸಿಕ್ಕಿಬಿದ್ದಿದ್ದ. ಆತನನ್ನು ಮಾನವೀಯತೆ ಆಧಾರದ ಮೇಲೆ 2017ರ ನವೆಂಬರ್‍ನಲ್ಲಿ ಬಿಡುಗಡೆ ಮಾಡಿ ವಾಪಸ್ ಕಳುಹಿಸಲಾಗಿತ್ತು.
ಆದರೆ ಪಾಕಿಸ್ತಾನದ ಉಗ್ರ ಸಂಘಟನೆಗಳು ಹಾಗು ಸೇನೆಯ ಚಿತಾವಣೆಯಿಂದ ತರಬೇತಿ ಪಡೆದು ಮತ್ತೆ ಅಕ್ರಮವಾಗಿ ಭಾರತಕ್ಕೆ ನುಸುಳಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.