ಹಿಜಾಬ್ ವಿವಾದದ ಹಿಂದೆ ISI ಕೈವಾಡ..!

Social Share

ನವದೆಹಲಿ.ಫೆ.12- ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ಮತ್ತು ಕೇಸರಿ ನಡುವಿನ ಸಂಘರ್ಷದ ಹಿಂದೆ ಪಾಕಿಸ್ತಾನದ ಐಎಸ್‍ಐ ಕೈವಾಡವಿದೆ ಎಂಬ ಆತಂಕಕಾರಿ ಅಂಶವನ್ನು ಭಾರತದ ಗುಪ್ತಚರ ವಿಭಾಗ ಪತ್ತೆಹಚ್ಚಿದೆ. ಸಿಕ್ ಫಾರ್ ಜಸ್ಟೀಸ್ ಎಂಬ ಹೆಸರಿನಲ್ಲಿ ಖಲಿಸ್ತಾನ ಪರವಾಗಿ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು ಐಎಸ್‍ಐನ ಕುಮ್ಮಕ್ಕಿನಿಂದಲೇ ಹಿಜಾಬ್ ವಿವಾದ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಎಂಬುದನ್ನು ಗುಪ್ತಚರ ವಿಭಾಗ ಪತ್ತೆಹಚ್ಚಿದೆ.
ಖಲಿಸ್ತಾನ್ ಬೆಂಬಲಿತ ಪ್ರತ್ಯೇಕತಾವಾದಿಗಳಿಗೆ ಐಎಸ್‍ಐ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ನೆರವು ನೀಡುತ್ತಿದ್ದು, ಭಾರತದಲ್ಲಿರುವ ಕೆಲವು ಸಮಾಜಘಾತುಕ ಶಕ್ತಿಗಳು ಇದಕ್ಕೆ ಕೈ ಜೋಡಿಸಿವೆ ಎಂದು ಉಲ್ಲೇಖಿಸಿದೆ. ಪಶ್ಚಿಮ ಬಂಗಾಳದಲ್ಲಿ ಉರ್ದುಸ್ಥಾನ್ ಪ್ರತ್ಯೇಕತಾ ರಾಜ್ಯಕ್ಕೆ ಹೋರಾಟ ನಡೆಸುವವರಿಗೂ ಐಎಸ್‍ಐ ಸಂಪೂರ್ಣವಾಗಿ ಆರ್ಥಿಕ ನೆರವು ನೀಡುತ್ತಿದೆ. ಭಾರತದಲ್ಲಿರುವ ಕೆಲವು ಸಂಘಟನೆಗಳಿಗೆ ಇದರಿಂದಲೇ ಹಣಕಾಸಿನ ನೆರವು ಸಿಗುತ್ತಿದೆ ಎಂದು ಗುಪ್ತಚರ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಸಿಕ್ ಫಾರ್ ಜಸ್ಟೀಸ್‍ನ ಮುಖ್ಯಸ್ಥ ಗುರುಪಟ್ನಾವರ್ ಸಿಂಗ್ ಪನ್ನು ಮೂಲಕ ಹಿಜಾಬ್ ವಿವಾದವನ್ನು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹವಣಿಸುತ್ತಿದೆ. ಭಾರತದ ಘನತೆಯನ್ನು ಹಾಳು ಮಾಡುವ ಷಡ್ಯಂತ್ರ ಇದರಲ್ಲಿ ಅಡಗಿದೆ ಎಂದು ತಿಳಿಸಿದೆ.
ಹಿಜಾಬ್ ಪರವಾಗಿ ಹೋರಾಟ ನಡೆಸುವ ಕಾರ್ಯಕರ್ತರೇ ಸಿಕ್ ಫಾರ್ ಜಸ್ಟೀಸ್‍ನಲ್ಲೂ ಭಾಗಿಯಾಗುತ್ತಾರೆ. ಪ್ರತ್ಯೇಕತಾ ಖಲಿಸ್ತಾನ ಮತ್ತು ಉರ್ದುಸ್ಥಾನ್ ಹೋರಾಟದಲ್ಲೂ ಇವರೇ ಕಾಣಿಸಿಕೊಳ್ಳುತ್ತಾರೆ. ಇವರ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಡಬೇಕೆಂದು ಸಲಹೆ ಮಾಡಿದೆ.
ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಹಿಜಾಬ್ ವಿವಾದವನ್ನು ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಹಬ್ಬಿಸುವಲ್ಲಿ ಐಎಸ್‍ಐ ಪಾತ್ರ ಪ್ರಮುಖವಾಗಿದೆ.
ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಮತ್ತಿತರ ಕಡೆ ಇವರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವ ಯೋಜನೆಯಲ್ಲಿದ್ದಾರೆ ಎಂದು ಎಚ್ಚರಿಸಿದೆ.
ಪ್ರತ್ಯೇಕತಾ ಖಲಿಸ್ತಾನ ಪರ ಪ್ರಮುಖ ಹೋರಾಟಗಾರ ಗುರುಪಟ್ನಾವರ್ ಸಿಂಗ್ ಪನ್ನು, ಬೇರೆ ಬೇರೆ ಭಾಗಗಳಲ್ಲಿ ಭಾಷಣ ಮಾಡಿರುವ ತುಣುಕುಗಳನ್ನು ಇವರೆಲ್ಲರೂ ತಮ್ಮ ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಬಗ್ಗೆ ಮಾಹಿತಿ ಕಲೆ ಹಾಕುವಂತೆಯೂ ಗುಪ್ತಚರ ವಿಭಾಗ ಎಚ್ಚರಿಕೆ ನೀಡಿದೆ.

Articles You Might Like

Share This Article