ಆಯೋಗದ ವರದಿ ನಂತರ ಪಂಚಮಸಾಲಿ ಸಮುದಾಯಕ್ಕೆ 2ಎಗೆ ಮೀಸಲಾತಿ : ಸಿಎಂ

Social Share

ಬೆಂಗಳೂರು,ಸೆ.20- ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ ನಂತರ ರಾಜ್ಯ ಸರ್ಕಾರ ಕಾನೂನು ಬದ್ದವಾಗಿ ಯಾರಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲಿದೆ
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಸಭೆಗೆ ಭರವಸೆ ನೀಡಿದರು.

ಪಂಚಮಸಾಲಿ ಸಮುದಾಯ, ವಾಲ್ಮೀಕಿ ಸಮುದಾಯ, ಪರಿಶಿಷ್ಟ ಜಾತಿ/ಪಂಗಡ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೆಚ್ಚಳದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಅದು ಕಾನೂನು ಬದ್ದವಾಗಿರಬೇಕು. ಹಾಗಾಗಿ ಯಾರಿಗೂ ಕೂಡ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗುತ್ತದ ಎಂದು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ

ಶೂನ್ಯವೇಳೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವಂತೆ ಸಿಎಂ ಗಮನ ಸೆಳೆದರು. ಇದಕ್ಕೆ ಸುದೀರ್ಘ ಉತ್ತರ ಕೊಟ್ಟ ಬೊಮ್ಮಾಯಿ, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕೆಂದು ಹಲವು ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಇದು ತಪ್ಪು ಎಂದು ನಾನು ಹೇಳುವುದಿಲ್ಲ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದೇವೆ.

ಆಯೋಗದವರು ಈಗಾಗಲೇ 10ರಿಂದ 12 ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಇನ್ನು ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬೇಕು. ಆದಷ್ಟು ಶೀಘ್ರ ವರದಿ ಸಲ್ಲಿಸಬೇಕೆಂದು ಆಯೋಗಕ್ಕೆ ಸೂಚನೆ ಕೊಟ್ಟಿದ್ದೇವೆ. ವರದಿ ಬಂದ ನಂತರ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ.ವೈಜ್ಞಾನಿಕವಾಗಿ ಮಾಡಬೇಕಾಗಿರುವುದರಿಂದ ಸಮಯ ಬೇಕಾಗುತ್ತದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಈ ಹಿಂದೆ ಇದೇ ರೀತಿ ಸಮುದಾಯಗಳ ಮೀಸಲಾತಿ ಹೆಚ್ಚಳ ಬೇಡಿಕೆ ಬಂದಾಗ ಶೇ.50ರಿಂದ 60ಕ್ಕೆ ಹೆಚ್ಚಳ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಯಿತು. ಆದರೆ ರಾಜ್ಯ ಸರ್ಕಾರ ನೀಡಿದ ದತ್ತಾಂಶಗಳು ಸರಿ ಇಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಮತ್ತು ಸುಪ್ರೀಂಕೋರ್ಟ್ ಎರಡೂ ಕೂಡ ತಿರಸ್ಕಾರ ಮಾಡಿವೆ. ಪುನಃ ಇದು ಆಗದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕೆಂದರು.

ಕರ್ನಾಟಕದಲ್ಲಿ ಪ್ರಸ್ತುತ ವಿವಿಧ ಸಮುದಾಯಗಳಿಗೆ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ನೀಡುತ್ತಿದ್ದೇವೆ. ಇಂದಿರಾ ಸಹನಿ ಪ್ರಕರಣದಲ್ಲಿ ಮೀಸಲಾತಿ ಶೇ.50ರಷ್ಟು ಮೀರಬಾರದೆಂದು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ನಮ್ಮ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.34ರಷ್ಟು ಮೀಸಲಾತಿ ಕೊಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಎಲ್ಲಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈಗ ಪ್ರತಿಯೊಂದು ಸಮುದಾಯದಲ್ಲೂ ಜಾಗೃತ ಮನೋಭಾವನೆ ಬಂದಿದ್ದು, ಮೀಸಲಾತಿಯಿಂದ ಸಾಂವಿಧಾನಿಕ ಸೌಲಭ್ಯಗಳ ಬಗ್ಗೆ ಎಲ್ಲರಿಗೂ ಗೊತ್ತು. ಹೀಗಾಗಿ ಎಸ್ಸಿ-ಎಸ್ಟಿಯವರು ಶೇ.7.5ರಷ್ಟು ಮೀಸಲಾತಿ ಹೆಚ್ಚಳ, ವಾಲ್ಮೀಕಿ ಸಮುದಾಯ, ಹಾಲುಮತ ಸಮುದಾಯದವರು 2ಎ, ಪ್ರವರ್ಗ-1ರಲ್ಲಿ ಇರುವವರು ಎಸಿಗೆ, ಮರಾಠ, ಕ್ಷತ್ರೀಯದವರು 2ಎ, 3ಬಿನಲ್ಲಿರುವವರು ಹಿಂದುಳಿದ ವರ್ಗಕ್ಕೆ ಕೇಳುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನು ಗಳಿವೆ. ಸುಪ್ರೀಂಕೋರ್ಟ್ ಈ ಬಗ್ಗೆ ಹಲವಾರು ಬಾರಿ ಅನೇಕ ತೀರ್ಪುಗಳನ್ನು ನೀಡಿದೆ. ಅವಕಾಶ ವಂಚಿತರು, ಶೈಕ್ಷಣಿಕವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡಬೇಕು.

ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಎರಡು ಸಮಿತಿಗಳ ಶಿಫಾರಸ್ಸು ನಮ್ಮ ಮುಂದಿದೆ. ಇದರ ನಡುವೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೂ ವರದಿ ನೀಡುವಂತೆ ಸೂಚಿಸಿದ್ದೇವೆ. ಇದು ಸೂಕ್ಷ್ಮ ವಿಷಯ. ಕಾನೂನು ಚೌಕಟ್ಟಿನೊಳಗೆ ಅಂಕಿಸಂಖ್ಯೆಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕು, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗಾಗಿ ಸರ್ಕಾರ ಆತುರವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಎಚ್ಚರಿಕೆಯಿಂದ ತೀರ್ಮಾನಿಸಬೇಕಿದೆ ಎಂದರು.

Articles You Might Like

Share This Article