ತಾರಕಕ್ಕೇರಿದ ಪಂಚಮಸಾಲಿ ಮೀಸಲಾತಿ ಸಮರ

Social Share

ಬೆಂಗಳೂರು,ಜ.14- ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು , ಸರ್ಕಾರ ಮತ್ತು ಹೋರಾಟಗಾರರ ಸಮರಕ್ಕೆ ನಾಂದಿ ಹಾಡಿದೆ.ಇನ್ನೊಂದೆಡೆ ಆಡಳಿರೂಢ ಬಿಜೆಪಿಯ ಸಚಿವರು ಮತ್ತು ಶಾಸಕರ ನಡುವೆ ಒಡಕು ಮೂಡಿದ್ದು ಶಾಸಕ ಬಸನಗೌಡ ಪಾಟೀಲ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಲಾಗಿದೆ.

ಶನಿವಾರದಿಂದ ಹೋರಾಟವನ್ನು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಸವ ಕಲ್ಯಾಣದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದ್ಲಿಲ ಎಂದು ಗುಡುಗಿದ್ದಾರೆ.

ಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಿಗ್ಗಾವಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀಗಳು ಮತ್ತು ಹೋರಾಟಗಾರರ ವಿರುದ್ಧ ಖುದ್ದು ಸಿಎಂ ಹಾಗೂ ಸಚಿವರು ಅಖಾಡಕ್ಕಿಳಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ ಅವರು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿ , ವಿಜಯಾನಂದ ಕಾಶಪ್ಪನವರ್,ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅಸಮಾಧಾನ
ವ್ಯಕ್ತಪಡಿಸಿದ್ದಾರೆ. ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಮುರುಗೇಶ್ ನಿರಾಣಿ ಅವರುಗಳು ಬೊಮ್ಮಾಯಿ ಪರವಾಗಿ ಬ್ಯಾಟಿಂಗ್ ಮಾಡಿದ್ದು ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಬದ್ದವಾಗಿದೆ.ಅಲ್ಲಿಯವರೆಗೂ ಸಹನೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.

ಹೋರಾಟ ನಿಲ್ಲೋಲ್ಲ:

ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಸವಕಲ್ಯಾಣದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಾವು ಸಹನೆಯಿಂದ ಇದ್ದೇವೆ. ನಮ್ಮ ಸಮುದಾಯದ ಬೇಡಿಕೆಯಂತೆ 2ಎಗೆ ಸೇರ್ಪಡೆ ಮಾಡಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಮಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ಮೀಸಲಾತಿ ಕಲ್ಪಿಸಿದರೆ ನಾವು ಕೃತಜ್ಞರಾಗಿರುತ್ತೇವೆ. ಆದರೆ ಬೊಮ್ಮಾಯಿ ಅವರು ನಮಗೆ ಮೋಸ ಮಾಡಿದ್ದಾರೆ. ತಾಯಿ ಮೇಲೆ ಆಣೆ ಮಾಡಿ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಭಾನುವಾರ ಅಥವಾ ಸೋಮವಾರ ಕಾರ್ಯಕಾರಿಣಿ ಸಭೆ ನಡೆಸುತ್ತೇವೆ. ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ಸಿದ್ದಪಡಿಸುತ್ತೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಜವಾದ ಹುಲಿ. ಅವರ ಬಗ್ಗೆ ಮಾತನಾಡುವ ನಿರಾಣಿ ಯತ್ನಾಳ್ ಜೊತೆ ಮಾತನಾಡಲಿ ಎಂದು ಸವಾಲೆಸೆದರು.

ಎಲ್ಲಿ ಮಲಗಿದ್ದೀರಿ?:
ಈ ಹಿಂದೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸಲಾಗಿತ್ತು. ಈಗ ಹೋರಾಟ ಮಾಡುತ್ತಿರುವವರು ಆಗ ಎಲ್ಲಿ ಮಲಗಿದ್ದರು ಎಂದು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು. ಹಿಂದುಳಿದ ಆಯೋಗದ ಮಧ್ಯಂತರ ವರದಿಯನ್ನು ಸಂಪುಟದಲ್ಲಿ ಚರ್ಚೆ ಮಾಡಿ ಪ್ರವರ್ಗ 2ಡಿ ಗೆ ಸೇರಿಸಲು ಮುಂದಾಗಿದ್ದೇವೆ. ಹೆಚ್ಚಳ ಮಾಡುವುದಕ್ಕೆ ಸುಪ್ರೀಂಕೋರ್ಟ್ ಮತ್ತು ಸಂವಿಧಾನದಲ್ಲಿ ಕೆಲವು ನಿಯಮಗಳಿವೆ. ಅದನ್ನು ಕೂಡ ಆದಷ್ಟು ಬೇಗ ಮಾಡಲಿದ್ದೇವೆ ಎಂದು ಹೇಳಿದರು.

ಪಂಚಮಸಾಲಿ ಸಮುದಾಯದ ಅಧ್ಯಕ್ಷರಾದ ಕಾಶಪ್ಪನವರ್ ಕೂಡ ಶಾಸಕರಾಗಿದ್ದವರು. ಅವರ ತಂದೆ ಮಂತ್ರಿಯಾಗಿದ್ದರು. ಅವರು ಏಕೆ ಮೀಸಲಾತಿ ಜಾರಿ ಮಾಡಲಿಲ್ಲ. ಸ್ವಾಮೀಜಿ ಅಕ್ಕಪಕ್ಕ ಯಾರಿದ್ದಾರೆ ಎಂಬುದನ್ನ ಶ್ರೀಗಳು ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಿಎಂ ಮನೆಗೆ ಎಷ್ಟು ಸಲ ಮುತ್ತಿಗೆ ಹಾಕುತ್ತೀರಿ?: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿ ಗಳು ಶಿಗ್ಗಾವಿಯಲ್ಲಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದು, ಪ್ರತಿಭಟನೆ ನಡೆಸುವುದು ಒಳ್ಳೆಯದಲ್ಲ. ನಮ್ಮ ಮುಖ್ಯಮಂತ್ರಿಗಳು ಸಮುದಾಯದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ನಾವೆಲ್ಲರೂ ಸಿಎಂ ಮೇಲೆ ಒತ್ತಡ ಹಾಕಿದ್ದೆವು. ನಮ್ಮ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು. ಪ್ರತಿಭಟನೆ ಸಂಪೂರ್ಣ ರಾಜಕೀಯ ಪ್ರೇರಿತ ಕಾಂಗ್ರೆಸ್ ಮುಖಂಡರ ಮಾತು ಕೇಳಿಕೊಂಡು ಈ ರೀತಿ ಸ್ವಾಮಿಗಳು ವರ್ತನೆ ಮಾಡಬಾರದು.

ನಾವು ಎಲ್ಲರಿಗೂ ನ್ಯಾಯ ಕೊಡಲು ಬದ್ದರಾಗಿದ್ದೇವೆ. ಖುದ್ದು ಸ್ವಾಮೀಜಿಯವರ ಜೊತೆಯೇ ಸಿಎಂ ಮಾತನಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ವರದಿ ಕೊಡುವ ಮುನ್ನವೇ ಮುಖ್ಯಮಂತ್ರಿಯವರು ಮಧ್ಯಂತರ ವರದಿ ಪಡೆದು ಸಮಸ್ತ ಲಿಂಗಾಯಿತ ಸಮುದಾಯವನ್ನು 3ಬಿ ಇಂದ 2ಡಿ ಗೆ ಸೇರ್ಪಡೆ ಮಾಡಿದ್ದಾರೆ. ಇದಕ್ಕೆ ಮೆಚ್ಚುಗೆ ಸೂಚಿಸಬೇಕಿತ್ತು. ಆದರೆ ಪ್ರತಿಭಟನೆ ನಡೆಸಿದ್ದು ನಮಗೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಕರಾತ್ಮಕ ಸ್ಪಂದನೆ:
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ವೀರಶೈವ, ಲಿಂಗಾಯತ ಸಮುದಾಯಕ್ಕೆ 2ಎ ಕೊಡಬೇಕೆಂಬ ಬೇಡಿಕೆ ಇಂದು, ನೆನ್ನೆಯದಲ್ಲ. ಈ ಹೋರಾಟದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತಮ್ಮ ಅಧಿಕಾರಅವಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು.

ಅದರ ಪ್ರತಿಫಲವಾಗಿಯೇ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಸೂಚನೆ ಕೊಟ್ಟಿದ್ದರು. ಆದರೆ ಅವರ ವಿರುದ್ಧವೂ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ.ಅವರು ಎಂದೂ ಕೂಡ ಮೀಸಲಾತಿ ನೀಡಲು ವಿರೋಧಿಸಿಲ್ಲ. ಇದು ಕೆಲವರು ಸೃಷ್ಟಿಸಿರುವ ಷಡ್ಯಂತ್ರ ಎಂದು ನಿರಾಣಿ ಅಸಮಾಧಾನ ಹೊರಹಾಕಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬದ್ದತೆಯಿದೆ. 2ಸಿ, 2ಡಿ ಮರುಸ್ಥಾಪನೆ ಮಾಡಿ ಮೀಸಲಾತಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇಡಬ್ಲ್ಯುಎಸ್ನಡಿ 4-5% ಮಾತ್ರ ಬರುತ್ತದೆ, ಉಳಿದಿದ್ದನ್ನು ಸಮುದಾಯಕ್ಕೆ ನೀಡುವ ನಿರ್ಧಾರವನ್ನು ಸಿಎಂ ಮಾಡಿದ್ದರು ಎಂದು ಹೇಳಿದರು.

#PanchamasaliReservation, #PanchamasaliCommunity,

Articles You Might Like

Share This Article