ಬೆಳಗಾವಿ, ಡಿ.22- 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಬಿಗಿಪಟ್ಟು ಹಿಡಿದು ಹೋರಾಟ ಮುಂದುವರೆಸಿರುವುದು ಸರ್ಕಾರಕ್ಕೆ ಬಿಕ್ಕಟ್ಟು ಸೃಷ್ಟಿಸಿದೆ. ಪ್ರಸ್ತುತ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ಘೋಷಣೆ ಮಾಡಬೇಕೆಂದು ಗಡುವು ನೀಡಿ ಹೋರಾಟಕ್ಕಿಳಿದಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಸಮುದಾಯದ ನೇತೃತ್ವ ವಹಿಸಿರುವ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಇನ್ನಿತರ ಮುಖಂಡರು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿರುವುದು ಅಧಿವೇಶನದ ಸಂದರ್ಭದಲ್ಲಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇಂದೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಲಕ್ಷಾಂತರ ಜನರ ಸಮ್ಮುಖದಲ್ಲಿ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ ಮಾಡಿ ಹೋರಾಟಕ್ಕಿಳಿದಿದ್ದಾರೆ. ಅಲ್ಲದೆ, ಸಮುದಾಯದವರು ಬುತ್ತಿ ಸಮೇತ ಹೋರಾಟಕ್ಕೆ ಬನ್ನಿ ಎಂದು ಕರೆ ನೀಡಿರುವ ಹಿನ್ನೆಲೆಯಲ್ಲಿ
ರಾಜ್ಯಾದ್ಯಂತ ಇರುವ ಪಂಚಮಸಾಲಿ ಸಮುದಾಯದವರು ಬೆಳಗಾವಿಯತ್ತ ಸಾಗಿ ಬಂದಿದ್ದಾರೆ.
ಈ ಹೋರಾಟಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಕಳೆದ ಎರಡು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸಲಾಗುತ್ತಿದ್ದು, ಯಾವುದೇ ತಾರ್ಕಿಕ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಮಾಡು ಇಲ್ಲವೆ ಮಡಿ ಸ್ಥಿತಿಯ ಹೋರಾಟವನ್ನು ಮುಂದುವರೆಸಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.
ವಿಮಾನ ಪ್ರಯಾಣಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್ ದರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮೀಸಲಾತಿ ಸಂಬಂಧ ವರದಿ ನೀಡಲು ತಿಳಿಸಿದ್ದೇವೆ. ಅವರ ವರದಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನಡುವೆಯೂ ಹೋರಾಟ ಮುಂದುವರೆದಿದೆ.
ಇಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು ಮುಖ್ಯಮಂತ್ರಿಯವರಿಗೆ ಮಧ್ಯಂತರ ವರದಿ ನೀಡಿದ್ದಾರೆ. ಸಮುದಾಯಕ್ಕೆ ಮೀಸಲಾತಿ ಘೋಷಣೆಯಾಗಲಿದೆಯೇ ಅಥವಾ ಮತ್ತಷ್ಟು ಕಾಲಾವಕಾಶ ಕೇಳಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ.
ಆದರೆ, ಹೋರಾಟದ ನೇತೃತ್ವದ ವಹಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಂಪೂರ್ ಸೇರಿದಂತೆ ಹಲವಾರು ಮುಖಂಡರು ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬೇರೆಯದೇ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಹೆಚ್ಚಾಯ್ತು ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಡ್ರೋನ್ ಹಾವಳಿ
ಸರ್ಕಾರ ಇಂದು ಮೀಸಲಾತಿ ಘೋಷಣೆ ಮಾಡಿದರೆ ಸರ್ಕಾರಕ್ಕೆ ಸನ್ಮಾನ ಮಾಡುತ್ತೇವೆ. ಇಲ್ಲದಿದ್ದರೆ ಮತ್ತೆ ನಮ್ಮ ಕದನ ಮುಂದುವರೆಸುತ್ತೇವೆ ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಬೇಡಿಕೆ ವಿಚಾರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸತತ ಸಂಪರ್ಕದಲ್ಲಿದ್ದು, ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಈ ಎಲ್ಲದರ ನಡುವೆಯೂ ಮೀಸಲಾತಿಗಾಗಿ ಹೋರಾಟ ಮುಂದುವರೆದಿದ್ದು, ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
#PanchamasaliCommunity #Reservation, #Belagavi,