ಶುರುವಾಯ್ತು ಗ್ರಾ. ಪಂ. ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ಬೆಂಗಳೂರು, ಡಿ.31- ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪಂಚಾಯ್ತಿ ಚುಕ್ಕಾಣಿ ಹಿಡಿಯಲು ಪೈಪೋಟಿ ಶುರುವಾಗಿದೆ. ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಾಗಿ ಕಸರತ್ತು ಆರಂಭವಾಗಿದೆ.  5728 ಗ್ರಾಪಂಗಳಿಗೆ ನಡೆದ ಚುನಾವಣೆಯಲ್ಲಿ ಕಮಲ ಪಕ್ಷ ಹೆಚ್ಚು ಕಮಾಲ್ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲುಗೈ ಸಾಧಿಸಿದ್ದು, ಹೆಚ್ಚಿನ ಗ್ರಾಮ ಪಂಚಾಯ್ತಿಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ತಂತ್ರ ರೂಪಿಸಲು ಶುರು ಮಾಡಿದೆ.

ಗೆದ್ದ ಅಭ್ಯರ್ಥಿಗಳು ಸಂಭ್ರಮದ ಲ್ಲಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಗಾದಿಹಿಡಿಯುವ ಮಹತ್ವಾಕಾಂಕ್ಷೆಯಲ್ಲಿರುವವರು ಸರ್ಕಾರ ಪ್ರಕಟಿಸುವ ಮೀಸಲಾತಿಯನ್ನು ಎದುರು ನೋಡುತ್ತಿದ್ದಾರೆ. ಸ್ಥಳೀಯ ಶಾಸಕರು ಹೆಚ್ಚಿನ ಪಂಚಾಯ್ತಿಗಳನ್ನು ತಮ್ಮ ಕೈ ವಶ ಮಾಡಿಕೊಳ್ಳಲು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಅಗತ್ಯ ಮೀಸಲಾತಿ ರೂಪಿಸುವ ಯೋಜನೆಯಲ್ಲಿ ತೊಡಗಿದ್ದಾರೆ.

ರಾಜಕೀಯ ಪಕ್ಷ ರಹಿತವಾಗಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದರೂ ಪರೋಕ್ಷವಾಗಿ ರಾಜಕೀಯ ಪಕ್ಷಗಳ ದರ್ಬಾರೇ ಹೆಚ್ಚಾಗಿತ್ತು. ಈಗ ಪಂಚಾಯ್ತಿಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ತಮಗೆ ಬೇಕಾದವರನ್ನು ಪಂಚಾಯ್ತಿಗಳ ಗದ್ದುಗೆಯಲ್ಲಿ ಕೂರಿಸಲು ರಾಜಕೀಯ ಪಕ್ಷಗಳು ತಂತ್ರ ಹೆಣೆಯುತ್ತಿವೆ. ಮೊದಲ ಸ್ಥಾನದಲ್ಲಿರುವ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆದು ಹೆಚ್ಚು ಪಂಚಾಯ್ತಿಗಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೆ ಈಗಾಗಲೇ ಕೈ ಹಾಕಿದೆ. ಹಲವು ಪಂಚಾಯ್ತಿಗಳಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮಾತುಕತೆಗಳು ಪ್ರಾರಂಭವಾಗಿವೆ.

ಮುಂಬರುವ ತಾಪಂ, ಜಿಪಂ, ವಿಧಾನಸಭೆ ಚುನಾವಣೆಗಳಿಗೆ ಪಂಚಾಯ್ತಿ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಪಂಚಾಯ್ತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತಂತ್ರ-ಪ್ರತಿ ತಂತ್ರಗಳನ್ನು ರೂಪಿಸುತ್ತಿವೆ. ತಮ್ಮ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನದಲ್ಲಿ ಗೆದ್ದರೂ ಮೀಸಲಾತಿಯಲ್ಲಿ , ಅಧಿಕಾರ ಹಿಡಿಯುವಲ್ಲಿ ವಂಚಿತರಾಗುವ ಸಾಧ್ಯತೆಗಳು ಇವೆ. ಹಾಗಾಗಿ ಪ್ರತಿಪಕ್ಷಗಳು ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿವೆ.

ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಬೆಂಬಲಿತ ಸದಸ್ಯರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಹಲವು ಪಂಚಾಯ್ತಿಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ನಿರ್ಣಾಯಕವಾಗಲಿದ್ದಾರೆ. ಯಾವ ಪಂಚಾಯ್ತಿ ಯಾವ ಪಕ್ಷದ ಪಾಲಾಗಲಿವೆ. ಯಾರು ಗದ್ದುಗೆ ಏರಲಿದ್ದಾರೆ ಎಂಬುದು ಮೀಸಲಾತಿ ಪ್ರಕಟವಾದ ನಂತರ ಗೊತ್ತಾಗಲಿದೆ.

ಸ್ಥಳೀಯ ಶಾಸಕರು, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಪ್ರತಿನಿಧಿಗಳು ಪಂಚಾಯ್ತಿ ಚುಕ್ಕಾಣಿ ಹಿಡಿಯುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮೀಸಲಾತಿ ಸಿಗುವಂತೆ ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.