ಜಿಪಂ-ತಾಪಂ : 3 ತಿಂಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆ, ಮೀಸಲಾತಿ ನಿರ್ಧರಿಸಲು ಹೈಕೋರ್ಟ್ ನಿರ್ದೇಶನ

Spread the love

ಬೆಂಗಳೂರು, ಮೇ 24- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್ವಿಂಗಡಣೆ, ಹಿಂದುಳಿದವರು ಹಾಗೂ ಎಲ್ಲ ವರ್ಗಗಳಿಗೂ ಮೂರು ತಿಂಗಳೊಳಗೆ ಮೀಸಲಾತಿ ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿರುವ ಹೈಕೋರ್ಟ್ ನಂತರ ಒಂದು ವಾರದೊಳಗೆ ಚುನವಣೆ ಪ್ರಕ್ರಿಯೆ ಆರಂಭಿಸಲು ಆಯೋಗಕ್ಕೆ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವುದಕ್ಕೆ ತಡೆ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ಆದೇಶ ನೀಡಿತು.

ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಒಂದು ವಾರದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿರುವ ನ್ಯಾಯಾಲಯವು ಯಾವುದೇ ಕಾರಣಕ್ಕೂ ಅನಂತರ ಸಮಯ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಬಿಬಿಎಂಪಿ ಪ್ರಕರಣದಲ್ಲಿ ಎಂಟು ವಾರಗಳಲ್ಲಿ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗಡುವು ವಿಧಿಸಿದೆ.

ಒಂದು ವಾರದ ಬಳಿಕ ಚುನಾವಣೆ ಪ್ರಕ್ರಿಯೆ ಆರಂಭಿಸಲು ಆಯೋಗಕ್ಕೆ ನಿರ್ದೇಶಿಸಿದೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ವರ್ಗಗಳನ್ನೊಳಗೊಂಡ ಮೀಸಲಾತಿ ನಿರ್ಧರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಚುನಾವಣಾ ಆಯೋಗದ ನಿವೃತ್ತ ಆಯುಕ್ತರನ್ನೊಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ.

ಹೀಗಾಗಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೂ ಮುನ್ನ ಕ್ಷೇತ್ರ ಪುನರ್ವಿಂಗಡಣೆ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರಿಗೂ ಮೀಸಲಾತಿ ಕಲ್ಪಿಸಲು 10 ವಾರ ಕಾಲಾವಕಾಶ ನೀಡಬೇಕು. ಜಿಪಂ, ತಾಪಂ ವ್ಯಾಪ್ತಿ ದೊಡ್ಡದಿದೆ. ಮೀಸಲಾತಿ ಕಲ್ಪಿಸುವುದು ದೊಡ್ಡ ಪ್ರಕ್ರಿಯೆ. ಹೀಗಾಗಿ ಎರಡು ವಾರ ಹೆಚ್ಚುವರಿ ಕಾಲಾವಕಾಶ ಬೇಕಾಗುತ್ತದೆ. ಹಿಂದುಳಿದ ವರ್ಗಗಳನ್ನು 1995 ರಿಂದ ವಿಶ್ಲೇಷಿಸಬೇಕು. ಇದು ಅತ್ಯಂತ ತ್ರಾಸದಾಯಕ ಕೆಲಸ. ಇದಕ್ಕಾಗಿ ನಿರ್ದಿಷ್ಟ ಆಯೋಗ ರಚಿಸಲಾಗಿದೆ. ಆಯೋಗವು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ.

ತಾಪಂ ಮತ್ತು ಜಿಪಂಗಳಿಗೆ ಮೀಸಲಾತಿ ಕಲ್ಪಿಸುವುದು ಕಷ್ಟಕರವಾದ ಕೆಲಸ. ಹೀಗಾಗಿ ಕಾಲಾವಕಾಶ ಕೋರುತ್ತಿದ್ದೇವೆ ಎಂದು ಹೇಳಿದರು.
ರಾಜಕೀಯವಾಗಿ ಹಿಂದುಳಿದ ಸಮುದಾಯವನ್ನು ಗುರುತಿಸಬೇಕಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯನ್ನು ಪ್ರತಿಷ್ಠಾಪಿಸಬೇಕಿದೆ. ಚುನಾವಣೆ ನಡೆಸುವುದು ಆಯೋಗದ ಕೆಲಸ. ಅದು ಸರ್ಕಾರಕ್ಕೆ ಎದುರಾಳಿಯ ರೀತಿ ಕೆಲಸ ಮಾಡಲಾಗದು ಎಂದು ಇದೇ ವೇಳೆ ಆಯೋಗದ ವಾದಕ್ಕೆ ಮೌಖಿಕ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಪೀಠವು ಬಿಬಿಎಂಪಿ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಂಟು ವಾರ ಕಾಲಾವಕಾಶ ನೀಡಿದೆ. 10 ವಾರಗಳು ನಿಮಗೆ ಏಕೆ? ನಾವು ಎಂಟು ವಾರ ಮಾತ್ರ ಕಾಲಾವಕಾಶ ನೀಡುತ್ತೇವೆ. ಸುಪ್ರೀಂಕೋರ್ಟ್ ಆದೇಶದಂತೆ ಅದೇ ವೇಳಾಪಟ್ಟಿ ಪಾಲಿಸಿ ಆಯೋಗಕ್ಕೆ ಹೆಚ್ಚಿನ ಮಾನವ ಸಂಪನ್ಮೂಲ ಕಲ್ಪಿಸಿ ಎಂದು ಹೇಳಿತು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ಮಧ್ಯ ಪ್ರದೇಶ ಪ್ರಕರಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಸ್ಪಷ್ಟ ನಿರ್ದೇಶನ ನೀಡಿದೆ. ಜಿಪಂ, ತಾಪಂ ಪಂಚಾಯಿತಿ ಚುನಾವಣೆ ನಡೆಸಲು ಆಯೋಗ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ರಾಜ್ಯ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತಂದು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಅಕಾರ ಕಸಿದುಕೊಂಡಿದೆ. ಇದರಿಂದ ಚುನಾವಣೆ ವಿಳಂಬವಾಗಿದೆ. ಹೀಗಾಗಿ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ನೀಡಬಾರದು ಎಂದು ತಕರಾರು ತೆಗೆದರು.

Facebook Comments