ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಕಣ್ಮರೆ, ಅಪಹರಣದ ಶಂಕೆ

ಚನ್ನಪಟ್ಟಣ,ಜ.6-ತಾಲ್ಲೂಕಿನ ಕೂಡ್ಲೂರು ಗ್ರಾಮದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಿಜೇತರಾದ ಜೆ.ಡಿ.ಎಸ್ ಬೆಂಬಲಿತ ಸದಸ್ಯರೊಬ್ಬರು ಕಾಣೆಯಾಗಿದ್ದಾರೆಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾಗಿರುವ ಜೆ.ಡಿ.ಎಸ್.ಬೆಂಬಲಿತ ಅಭ್ಯರ್ಥಿ ನಂಜೇರಾಜೇ ಅರಸ್ ಎಂದು ಹೇಳಲಾಗಿದ್ದು, ಕೂಡ್ಲೂರು ಗ್ರಾಮದ ಲೇಟ್ ಹೋದೆರಾಜೇ ಅರಸ್ ಎಂಬುವರ ಮಗನಾದ ಇವರು ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದವರು ಮನೆಗೆ ಹಿಂತಿರುಗದೆ ಕಾಣೆಯಾಗಿದ್ದಾರೆಂದು ಆಕೆಯ ಪತ್ನಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾಗಿರುವ ನಂಜೇರಾಜೇ ಅರಸ್‍ರವರು ಕೆಲ ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜೆ.ಡಿ.ಎಸ್.ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ದೆ ಮಾಡಿ ಚುನಾಯಿತರಾಗಿದ್ದರು, ಕುಡ್ಲೂರು ಗ್ರಾಮ ಪಂಚಾಯ್ತಿಯ 17 ಸದಸ್ಯರಲ್ಲಿ 9ಮಂದಿ ಜೆ.ಡಿಎಸ್. ಬೆಂಬಲಿತ ಸದಸ್ಯರಿದ್ದು 8 ಮಂದಿ ಬಿ.ಜೆ.ಪಿ.ಬೆಂಬಲಿತ ಸದಸ್ಯರಿದ್ದಾರೆ, ಜೆ.ಡಿ.ಎಸ್.ಬೆಂಬಲಿತ ಸದಸ್ಯ ಕಾಣೆಯಾಗಿರುವುದು, ಜೆ.ಡಿ.ಎಸ್.ವಲಯದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಯಾರೋ ದುರುದ್ದೇಶದಿಂದಲೇ ಅಪಹರಣ ಮಾಡಿದ್ದಾರೆಂದು ಎಲ್ಲೆಡೆ ಹರಿದಾಡಿದೆ.