ಕೊಪ್ಪಳ,ಜೂ.22- ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈಗ ಆರೋಪ ಮಾಡುತ್ತಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರು ಸಚಿವ ಸಂಪುಟ ಸಭೆಯಲ್ಲಿ ವಿಷಯ ತಂದು ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸರ್ಕಾರದ ಬೊಕ್ಕಸಕ್ಕೆ 1.5 ಲಕ್ಷ ಕೋಟಿ ನಷ್ಟವಾಗಿದೆ ಎಂದು ವಿವರಿಸಿದ್ದು, ಅದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಈ ಹಿಂದಿನ ಸರ್ಕಾರಗಳು ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಚ್.ಕೆ.ಪಾಟೀಲ್ ನೇತೃತ್ವದಲ್ಲೇ ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ಆಧರಿಸಿ ಆನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಅವರು ಕ್ರಮ ಕೈಗೊಳ್ಳಬಹುದಿತ್ತು ಎಂದರು.
ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರ್ಕಾರ ರಚಿಸಿದ್ದವು. ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸಂಪುಟಕ್ಕೆ ವಿಷಯ ತಂದಿದ್ದರೆ ನಾವು ವಿರೋಧ ಮಾಡುತ್ತಿರಲಿಲ್ಲ. ಈಗ ನಮ ಸರ್ಕಾರ ಅದರ ಬಗ್ಗೆ ಗಮನಹರಿಸಿದೆ. ನೂರಾರು ಪ್ರಕರಣಗಳಿವೆ. ಏಕಾಏಕಿ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಮಾಡಿರುವುದು ಗಂಭೀರ ಆರೋಪವೇನಲ್ಲ. ಒಂದು ವೇಳೆ ವಸತಿ ಯೋಜನೆಯ ಮನೆಗಳಿಗೆ ಯಾರಾದರೂ ಲಂಚ ಕೇಳಿದರೆ ಅದರ ವಿರುದ್ಧ ದೂರು ನೀಡಬಹುದು. ಆ ಬಳಿಕ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬಿ.ಆರ್.ಪಾಟೀಲ್ ಅವರು ಸಂಬಂಧಪಟ್ಟ ಸಚಿವರ ಜೊತೆ ಈ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಾವು ಸಲಹೆ ನೀಡಿರುವುದಾಗಿ ಹೇಳಿದರು.
ಪಿಎಸ್‌ಐ ಹಗರಣಗಳು ನಡೆದು ವರ್ಷಗಳಾಗಿವೆ. ಅಲ್ಲಿಂದ ಈವರೆಗೂ ಒಂದು ಪಿಎಸ್‌ಐ ಹುದ್ದೆಗೂ ನೇಮಕಾತಿಮಾಡಲು ನಮಿಂದ ಸಾಧ್ಯವಿಲ್ಲ. ಒಂದು ಸಾವಿರ ಹುದ್ದೆಗಳ ಖಾಲಿ ಇವೆ. ಕಳೆದ 2 ತಿಂಗಳ ಹಿಂದೆ 500 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು. ಹಗರಣಕ್ಕೆ ಸಿಲುಕಿದ್ದ 470ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಿಂಧುತ್ವ ಪ್ರಮಾಣ ಪತ್ರ ಪಡೆದು ಇನ್ನು 15 ದಿನಗಳ ಒಳಗಾಗಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಯಾವುದೇ ಪ್ರಕರಣದಲ್ಲೂ ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿದ್ದೇವೆ. ಯಾರ ಮೇಲೂ ಒತ್ತಡ ಹೇರುವುದಿಲ್ಲ. ಅಪರಾಧಗಳನ್ನು ನಿಯಂತ್ರಿಸಿ ಶಾಂತಿ ಸುವ್ಯವಸ್ಥೆ ಪಾಲನೆ ನಮ ಮೊದಲ ಆದ್ಯತೆ ಎಂದರು.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ