ಜಿಪಂ ಮೀಸಲಾತಿಯಲ್ಲಿ ಲೋಪ : ಡಾ.ಜಿ. ಪರಮೇಶ್ವರ್

ತುಮಕೂರು,ಜು.6- ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಎಲ್ಲ ವರ್ಗದವರಿಗೆ ಪ್ರಾತಿನಿಧ್ಯ ದೊರೆಯಬೇಕು, ಮಹಿಳೆಯರಿಗೆ ಅವಕಾಶ ಸಿಗಬೇಕೆಂದು ಮೀಸಲಾತಿ ಜಾರಿಗೆ ತಂದರು. ಆದರೆ, ರಾಜ್ಯ ಸರ್ಕಾರ ಪ್ರಕಟಿಸಿರುವ ಜಿಪಂ, ತಾಪಂ ಮೀಸಲಾತಿಯಲ್ಲಿ ತಪ್ಪುಗಳಾಗಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಸಂಖ್ಯೆಗಳು ಕಡಿಮೆಯಾಗಿವೆ. ಕೊರಟಗೆರೆ ಕ್ಷೇತ್ರದಲ್ಲಿ ಆರು ಕ್ಷೇತ್ರಗಳನ್ನು ಮಹಿಳಾ ಮೀಸಲು ಮಾಡಲಾಗಿದೆ. ಇದು ಎಲ್ಲ ಕ್ಷೇತ್ರಗಳಿಗೆ ಹಂಚಿಕೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಸಮಾಜ ಸಮುದಾಯಗಳಿಗೆ ಪ್ರಾತಿನಿಧ್ಯ ಈ ಮೀಸಲಾತಿ ಸಿಗದೇ ಇರುವುದರಿಂದ ಕೆಪಿಸಿಸಿ ಅಧ್ಯಕ್ಷರು ನ್ಯಾಯಾ ಲಯದ ಮೊರೆ ಹೋಗಬೇಕಿದೆ ಎಂದು ಹೇಳಿದರು.

ಮುಂಬರುವ ವಿಧಾನ ಪರಿಷತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದು ಆರೋಪಿಸಿದ ಅವರು, ಸರ್ಕಾರದ ವೈಫಲ್ಯ ಹಾಗೂ ಕೋವಿಡ್ ಅವ್ಯವಹಾರದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕಿದ್ದು, ಸರ್ಕಾರ ವಿಧಾನಸಭಾ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

ಕೋವಿಡ್‍ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ತೆರಿಗೆ , ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ಚರ್ಚೆಯಾಗಬೇಕಿದೆ. ಅಂಕಗಳೇ ಮಾನದಂಡವಾಗಿ ಸ್ವೀಕರಿಸಬೇಕಾ ಅಥವಾ ಬೇರೆ ಅವಕಾಶಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದು ತಿಳಿಸಿದ ಅವರು, ಸರ್ಕಾರ ತುರ್ತು ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆ ಬಗ್ಗೆ ತಮಿಳು ನಾಡು ಸರ್ಕಾರಕ್ಕೆ ಸಿಎಂ ಪತ್ರ ಬರೆದಿರುವುದು ಸರಿಯಲ್ಲ, ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆಯೂ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.