ಬೆಂಗಳೂರು, ಜ.27- ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಕಾರಾಗೃಹ ಉತ್ತರ ವಲಯ ಡಿಐಜಿ ಸೋಮಶೇಖರ್ ಅವರಿಗೆ ಸೂಚಿಸಿದೆ. ಬೆಂಗಳೂರು ಸೆಂಟ್ರಲ್ ಜೈಲ್ ಅೀಧಿಕ್ಷಕರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅನುಭವವಿರುವ ಆಧಾರದ ಮೇಲೆ ಸೋಮಶೇಖರ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿದ್ದು, ಅವರು ಖುದ್ದು ಜೈಲಿಗೆ ಭೇಟಿ ಕೊಟ್ಟು ಪ್ರಕರಣದ ತನಿಖೆ ನಡೆಸಲಿದ್ದಾರೆ.
ಎರಡು ದಿನಗಳಲ್ಲಿ ಸಂಪೂರ್ಣ ತನಿಖೆ ನಡೆಸಿ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಕಾರಾಗೃಹ ಡಿಜಿಪಿಗೆ ವರದಿ ನೀಡಲು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಘಟನೆಗಳ ಸಂಬಂಧ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಸೂಪರಿಡೆಂಟ್ ರಂಗನಾಥ್ ಅವರು ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಗಾಂಜಾ ಮತ್ತು ಮೊಬೈಲ್ ಬಳಕೆ ಸಂಬಂಧ 19 ಮಂದಿ ವಿರುದ್ಧ 12 ಎಫ್‍ಐಆರ್ ದಾಖಲಾಗಿದೆ. ಹೆಚ್ಚು ವರ್ಷ ಜೈಲಿನಲ್ಲಿ ಕೆಲಸ ಮಾಡಿದ್ದ 52 ಸಿಬ್ಬಂದಿಯನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಜೈಲಿಗೆ ಬಂದ ಒಂದೇ ವರ್ಷದಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ. ಎಂಟು ಮಂದಿ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಆದೇಶ ಕೂಡ ನೀಡಲಾಗಿದೆ.
ಚೀಫ್ ಸೂಪರಿಡೆಂಟ್ ಮತ್ತು ಸೂಪರಿಡೆಂಟ್ ಅವರನ್ನು ಬಿಟ್ಟು ಜೈಲಿನಲ್ಲಿರುವ ಎಲ್ಲ ಪೊಲೀಸ್ ಸಿಬ್ಬಂದಿಗೂ ಮೊಬೈಲ್ ನಿಷೇಧಿಸಲಾಗಿದ್ದು, ಮೂರು ಹಂತಗಳಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಲಾಗುತ್ತದೆ. ಕೆಲ ಸಿಬ್ಬಂದಿಗಳ ಪಿತೂರಿಯಿಂದ ಜೈಲಿನಲ್ಲಿ ಆಗಾಗ ಸಮಸ್ಯೆಗಳಾಗುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2019ರಲ್ಲಿ ಜೆಸಿಬಿ ನಾರಾಯಣ ಬಿಡುಗಡೆಯಾಗಿರುವ ಜೈಲಿನ ಡೈರಿ ದಿನಾಂಕ ಉಲ್ಲೇಖ, ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಕೆಲ ಸಿಬ್ಬಂದಿಗಳಿಂದ ಪಿತೂರಿ ಸೇರಿದಂತೆ ಆರು ಪುಟಗಳನ್ನೊಳಗೊಂಡ 20 ಅಂಶಗಳ ವರದಿಯನ್ನು ಜೈಲ್ ಸೂಪರಿಡೆಂಟ್ ಅವರು ಡಿಜಿಪಿ ಅಲೋಕ್ ಮೋಹನ್ ಅವರಿಗೆ ಸಲ್ಲಿಸಿದ್ದಾರೆ.
