ಬೆಂಗಳೂರು,ಜ.14- ಕೊರೊನಾ ಮಹಾಮಾರಿಯ ವಕ್ರದೃಷ್ಟಿ ಮಕ್ಕಳ ಮೇಲೆ ಬಿದ್ದಿರುವುದರಿಂದ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಮಕ್ಕಳ ಮೇಲೆ ಡೆಡ್ಲಿ ಆಟ್ಯಾಕ್ ಮಾಡುವ ಸಾಧ್ಯತೆ ಇರುವುದರಿಂದ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದಂತೆ ತಜ್ಞರು ಮನವಿ ಮಾಡಿಕೊಂಡಿದ್ದಾರೆ.
ಜನವರಿಯಲ್ಲಿ ಕೊರೊನಾ ಮಹಾಮಾರಿ ಮಕ್ಕಳ ಮೇಲೆ ಕೊರೊನಾ ಅಟ್ಯಾಕ್ ಮಾಡಲಿದೆ ಎಂಬ ಮಾಹಿತಿ ಮೇರೆಗೆ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಮರೋಪಾದಿಯಲ್ಲಿ ಲಸಿಕೆ ಹಾಕಲಾಗುತ್ತಿದ್ದರೂ ಮಕ್ಕಳಿಗೆ ಸೋಂಕು ತಗುಲುತ್ತಿದೆ.
ಮುಂದಿನ ಎರಡು ವಾರಗಳ ಕಾಲ ಸೋಂಕು ಅಬ್ಬರಿಸಿ ನಂತರ ತಣ್ಣಗಾಗಲಿದೆ. ಹೀಗಾಗಿ ಎರಡು ವಾರಗಳ ಕಾಲ ತಮ್ಮ ಮಕ್ಕಳ ಆರೋಗ್ಯದ ನಿಗಾ ಇರಿಸಿದರೆ ಸೋಂಕಿನಿಂದ ಬಚಾವ್ ಆಗಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಒಂದು ವೇಳೆ ಮಕ್ಕಳಿಗೆ ಸೋಂಕು ತಗುಲಿದರೆ ಅವರಿಗೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಇಂದಿರಾಗಾಂ ಆಸ್ಪತ್ರೆಯಲ್ಲಿ ಮಕ್ಕಳ ಕೊರೊನಾ ಚಿಕಿತ್ಸಾ ಘಟಕ ತೆರೆದಿದೆ.
