ಪೋಷಕರೇ, ಧರ್ಮದ ಹೆಸರಲ್ಲಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ

Social Share

ಕರ್ನಾಟಕ ಎಂದೆಂದಿಗೂ ಭಾವೈಕ್ಯತೆಯ ನಾಡು. ಇಲ್ಲಿ ಎಲ್ಲ ಜನಾಂಗದವರೂ ಕೂಡಿ ತಲ ತಲಾಂತರಗಳಿಂದ ಸಹಬಾಳ್ವೆ ನಡೆಸುತ್ತ ಬರುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನರುದ್ಯಾನ ಅಷ್ಟೇ ಅಲ್ಲ… ಇದು ನಮ್ಮ ಕರ್ನಾಟಕ, ಸರ್ವಜನಾಂಗದ ಶಾಂತಿಯ ತೋಟ… ಇಂತಹ ಸಾಲುಗಳಿರುವ ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆ ಎಂಬ ಪದ್ಯವನ್ನು ನಾಡಗೀತೆ ಎಂದು ಕೂಡ ಅಳವಡಿಸಿಕೊಂಡಿದ್ದೇವೆ. ಆದರೂ ಇವೆಲ್ಲ ಏಕೆ? ಎಂದರೆ ಅದನ್ನು ನಾವು ಹಾಡುತ್ತೇವಷ್ಟೆ. ಅದರಲ್ಲಿರುವ ಪದಗಳ ಅರ್ಥ ಮಾಡಿಕೊಳ್ಳುವ ಗೋಜಿಗೆ ಎಂದೂ ಹೋಗಿಲ್ಲ… ಅದಕ್ಕೆ.
ಕರ್ನಾಟಕ ಭಾವೈಕ್ಯತೆಯ ನೆಲೆವೀಡು. ಕರ್ನಾಟಕವಷ್ಟೇ ಅಲ್ಲ, ನಮ್ಮ ಭಾರತವೂ ಕೂಡ. ನಮಗೆ ಸಂಸ್ಕøತಿಯಷ್ಟೇ ಮುಖ್ಯ ಧರ್ಮ. ಅಂದರೆ ಅವರವರಿಗೆ ಅವರವರ ಧರ್ಮ, ನಾವು ಹಿಂದುಗಳಿಗೆ ಹಿಂದೂ ಧರ್ಮ, ಕ್ರೈಸ್ತರಿಗೆ ಕ್ರೈಸ್ತ ಧರ್ಮ, ಮುಸಲ್ಮಾನರಿಗೆ ಇಸ್ಲಾಂ ಧರ್ಮ, ಸಿಖ್ಖರಿಗೆ ಸಿಖ್ ಧರ್ಮ… ಹೀಗೆ ಅವರವರ ಧರ್ಮ ಅವರವರಿಗೆ ಹೃದ್ಗತ, ರಕ್ತಗತವಾಗಿರುತ್ತದೆ. ನಮ್ಮ ದೇಹ ಮೂಳೆಗಳ ಹಂದರ. ಅದು ಪರಿಪೂರ್ಣವಾಗುವುದು ರಕ್ತ-ಮಾಂಸಗಳಿಂದ. ಆ ರಕ್ತಮಾಂಸಗಳನ್ನು ಹಿಡಿದಿಟ್ಟಿರುವುದು ಚರ್ಮದ ಹೊದಿಕೆ.
ಹಾಗೆಯೇ ನಮ್ಮ ಈ ಐಹಿಕ ಬದುಕಿನಲ್ಲಿ ಅನನ್ಯವಾಗಿ ತುಂಬಿಕೊಂಡಿರುವ ಮತಾಚಾರಗಳಿಗೆ ಹೊದಿಕೆಯಾಗಿರುವುದೇ ಧರ್ಮ. ಅಂದರೆ
ಇದನ್ನು ಎಂದೂ ಬೇರ್ಪಡಿಸಲಾಗದು. ಈ ದೇಶದಲ್ಲಿ ವಿವಿಧ ಧರ್ಮಗಳ ಜನಾಂಗದ ನಡುವೆ ಸಾಮರಸ್ಯ, ಭಾವೈಕ್ಯತೆಗಳು ನೆಲೆಸುವಂತೆ ಮಾಡಿ ಅದಕ್ಕೆ ಪ್ರೀತಿಯ ನೀರುಣಿಸಿ ಹೆಮ್ಮರವಾಗಿ ಬೆಳೆಸಿದ್ದಾರೆ ನಮ್ಮ ಹಿರಿಯರು.
ಆದರೆ ಇಂದು ಏನಾಗುತ್ತಿದೆ? ಹಿರಿಯರ ಆದರ್ಶಗಳನ್ನು ಕಡೆಗಣಿಸಿ ಕೋಮುವಾದದ ದಳ್ಳುರಿ ಸೃಷ್ಟಿಸುತ್ತಿದ್ದೇವೆ. ನಮ್ಮ ಇಂದಿನ ರಾಜಕಾರಣಿಗಳಂತೂ ಈ ಕೆಲಸದಲ್ಲಿ ಸಿದ್ಧಹಸ್ತರು. ಅವರು ಹೆಜ್ಜೆ ಇಟ್ಟರೆ, ಬಾಯಿ ಬಿಟ್ಟರೆ ದ್ವೇಷದ ಬೆಂಕಿ ಹರಡುವಂತಾಗಿದೆ.
ಬಸವಾದಿ ಪ್ರಮಥರೇ ಮೊದಲಾದ ಶಿವಶರಣರು, ವಚನಕಾರರು, ವಚನಕಾರ್ತಿಯರು, ಸ್ವಾಮೀಜಿಗಳು, ದಾಸರು, ಕಬೀರ, ಶಿಶುನಾಳ ಶರೀಫರು, ಬಾಬಾಗಳು, ಇತ್ತೀಚೆಗಷ್ಟೆ ವಿಧಿವಶರಾದ ಮಹಾಲಿಂಗಪುರದ ಸೂಫಿ ಸಂತ, ಕನ್ನಡದ ಕಬೀರ ಇಬ್ರಾಹಿಂ ಸುತಾರ ಮೊದಲಾದವರೆಲ್ಲರೂ ಸಾರಿದ್ದು ಇದೇ ಭಾವೈಕ್ಯತೆಯನ್ನೇ, ಕೋಮು ಸಾಮರಸ್ಯವನ್ನೇ, ಸೌಹಾರ್ದತೆಯನ್ನೇ, ಭ್ರಾತೃತ್ವವನ್ನೇ, ಪರಧರ್ಮ ಸಹಿಷ್ಣುತೆಯನ್ನೇ.
ಬಸವಣ್ಣನವರು ಹೇಳಿದರಲ್ಲ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ (ನಿನ್ನ ಧರ್ಮವನ್ನೇ ದೊಡ್ಡದು ಮಾಡಿ, ಇತರರ ಧರ್ಮವನ್ನು ಜರಿಯಬೇಡ) ಎಂಬ ಕಿವಿಮಾತನ್ನು. ಆದರೆ, ಇಂದು ನಾವು ಅವರೆಲ್ಲರ ಮಾತನ್ನು ಧಿಕ್ಕರಿಸಿ, ಪರಸ್ಪರ ಕಿತ್ತಾಡಲಾರಂಭಿಸಿದ್ದೇವೆ. ಧರ್ಮದ ಹೆಸರಿನಲ್ಲಿ, ಸಾಮ್ರಾಜ್ಯದ ಹೆಸರಿನಲ್ಲಿ ಹೊಡೆದಾಡಿ ಇಡೀ ಸಾಮ್ರಾಜ್ಯವನ್ನೇ ಸರ್ವನಾಶ ಮಾಡಿದ ಅನೇಕರು ನಮ್ಮ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಅಂತಹ ಚರಿತ್ರೆಗಳನ್ನು ಓದಿಯೂ ನಾವು ಇನ್ನೂ ಪಾಠ ಕಲಿತಿಲ್ಲ ಎಂದರೆ ಯಾವುದೋ ಒಂದು ಧರ್ಮದ ಸ್ಥಾಪನೆಗೆ ಹೋರಾಡುತ್ತಿದ್ದೇವೆಂದರೆ ಇದಕ್ಕಿಂತಲೂ ದುರಂತ ಬೇರೊಂದಿದೆಯೇ?
# ಭಾರತದಲ್ಲಿ ಮಾತ್ರ ಸಾಧ್ಯ:
ಹಾಗೆ ನೋಡಿದರೆ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಕೊಡಮಾಡಲಾಗಿರುವಷ್ಟು ಸ್ವಾತಂತ್ರ್ಯವನ್ನು ಇತರೆ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಕೊಡಲಾಗಿಲ್ಲ ಎಂದೇ ಹೇಳಬಹುದು. ಇನ್ನು ಷರೀಯತ್ ರಾಷ್ಟ್ರಗಳಲ್ಲಂತೂ ಅಲ್ಲಿನ ಅಲ್ಪಸಂಖ್ಯಾತ ರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ಅದು ಧಾರ್ಮಿಕವಿರಲಿ, ಸಾಮಾಜಿಕವಿರಲಿ, ರಾಜಕೀಯವೇ ಇರಲಿ. ಇದನ್ನು ಇಲ್ಲಿನ ಅಲ್ಪಸಂಖ್ಯಾತರು ಗಮನಿಸಬೇಕು. ಭಾರತವು ಅಲ್ಪಸಂಖ್ಯಾತರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ. ಅಲ್ಪಸಂಖ್ಯಾತರು ಅವುಗಳ ಫಲಾನುಭವಿಗಳೂ ಆಗಿದ್ದಾರೆ.
ಅಲ್ಪಸಂಖ್ಯಾತರಿಗೆ ವಿದ್ಯಾಸಂಸ್ಥೆಗಳನ್ನು ತೆರೆಯುವ ಹಕ್ಕು ನೀಡಲಾಗಿದೆ. ಶಾಲೆಗಳನ್ನು ನಡೆಸುವ ಹಕ್ಕು ನೀಡಿದೆ. ಧಾರ್ಮಿಕ ಆಚರಣೆಯ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಾಮಾಜಿಕವಾಗಿ ಸ್ಥಾನಮಾನಗಳನ್ನು ನೀಡಲಾಗಿದೆ. ರಾಜಕೀಯ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ನೀಡಿಯೂ ಅವುಗಳ ಸದ್ಬಳಕೆ ಮಾಡಿಕೊಂಡು ಮೇಲೆ ಬರುವುದರ ಬದಲು ಕ್ಷುಲ್ಲಕ ಕಾರಣಗಳಿಗಾಗಿ ಯಾರದೋ ಮಾತು ಕೇಳಿ ಈ ರೀತಿ ದುಂಡಾವರ್ತನೆ ಮಾಡುವುದು ಎಷ್ಟು ಸರಿ?
ಇನ್ನೊಂದು ಅಂಶವನ್ನೂ ಗಮನಿಸಬಹುದು. ಮುಸ್ಲಿಮರ ಮೆಕ್ಕಾ-ಮದೀನ ಯಾತ್ರೆಗೆ ಹಣ ಸಹಾಯವನ್ನೂ ಕೂಡ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ನೀಡಿವೆ. ಇದಕ್ಕಿಂತಲೂ ಜಾತ್ಯತೀತ ನಿಲುವು ಇನ್ನೆಲ್ಲಿ ತಾನೇ ಇರಲು ಸಾಧ್ಯ. ಕೇವಲ ಭಾರತದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.
ಮುಸಲ್ಮಾನ ವಿದ್ಯಾರ್ಥಿಗಳಿಗೆ ಮುಕ್ತವಾದ ಶೈಕ್ಷಣಿಕ ಹಕ್ಕುಗಳನ್ನು ನಮ್ಮ ಸಂವಿಧಾನ ನೀಡಿದೆ. ಇದನ್ನು ಬಳಸಿಕೊಂಡು ಇಂದಿನ ಪೀಳಿಗೆ ವಿದ್ಯಾವಂತರಾಗಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಎಲ್ಲರೂ ಸೌಹಾರ್ದತೆಯಿಂದ, ಸಹೋದರ ಭಾವದಿಂದ ಬದುಕುವುದನ್ನು ಕಲಿಯಬೇಕು. ಇಲ್ಲದಿದ್ದರೆ ಇದೆಲ್ಲವೂ ವ್ಯರ್ಥವಾಗುವುದಿಲ್ಲವೇ?
ಒಂದು ವೇಳೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೂ, ಧರಿಸದಿದ್ದರೂ ಅದರಿಂದ ಯಾವುದೇ ನಷ್ಟವಿಲ್ಲ. ಹಿಂದೆಲ್ಲ ನೋಡಿದ್ದೇವೆ, ಹಿಜಾಬ್ ಧರಿಸಿ ಮನೆಯಿಂದ ಶಾಲೆಗೆ ಬರುವ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಗೆ ಪ್ರವೇಶಿಸುವಾಗ, ತರಗತಿಗಳಲ್ಲಿ ಕುಳಿತು ಪಾಠ ಕೇಳುವಾಗ ತಮ್ಮ ಶಿರೋವಸ್ತ್ರಗಳನ್ನು ತೆಗೆದು ತಮ್ಮ ಬ್ಯಾಗ್‍ಗಳಲ್ಲಿಡುತ್ತಿದ್ದರು.  ಆಗ ಎಲ್ಲವೂ ಸುಸೂತ್ರವಾಗಿತ್ತು. ಆದರೆ, ಇತ್ತೀಚೆಗೆ ಕೆಲ ಕಿಡಿಗೇಡಿಗಳು ಬೇಕೆಂದೇ ಈ ಗಲಾಟೆ ಎಬ್ಬಿಸಿದ್ದಾರೆ. ಇದನ್ನು ಮುಸ್ಲಿಂ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು.
ಪ್ರಸ್ತುತ ಹಿಜಾಬ್-ಕೇಸರಿ ವಿಚಾರ ನಮ್ಮ ರಾಜಕಾರಣಿಗಳು ಮತ್ತು ಸರ್ಕಾರದ ಕೈ ಮೀರಿ ನ್ಯಾಯಾಲಯದ ಕಟಕಟೆ ಏರಿದೆ. ನ್ಯಾಯಾಲಯ ಏನೇ ತೀರ್ಪು ನೀಡಲಿ ಅದನ್ನು ಎಲ್ಲರೂ ಗೌರವಿಸಬೇಕು. ನ್ಯಾಯದಾನದಲ್ಲಿ ನಂಬಿಕೆ ಇಡಬೇಕು. ನ್ಯಾಯಾಲಯದ ಆದೇಶ ಏನೇ ಇರಲಿ ಎಲ್ಲರೂ ಅದನ್ನು ಗೌರವಿಸಬೇಕು. ಇಲ್ಲದಿದ್ದರೆ ಯಾರದೋ ಸ್ವಾರ್ಥಕ್ಕೆ, ಯಾರದೋ ಪ್ರತಿಷ್ಠೆಗೆ, ಇನ್ನಾರದೋ ಅಧಿಕಾರ ಲಾಲಸೆಗೆ ಇಡೀ ರಾಜ್ಯ ಬಲಿಯಾಗಬೇಕಾಗುತ್ತದೆ.
ಅಲ್ಲದೆ, ವಿದ್ಯಾರ್ಥಿಗಳಿಗೆ ಇದು ತಮ್ಮ ಭವಿಷ್ಯದ ವಿಷಯದಲ್ಲಿ ನಿರ್ಣಾಯಕ ಘಟ್ಟ ಎಸ್‍ಎಸ್‍ಎಲ್‍ಸಿ, ಪಿಯು ಘಟ್ಟದಲ್ಲಿ ಸ್ವಲ್ಪ ಎಡವಿದರೂ ಅವರ ಇಡೀ ಭವಿಷ್ಯವೇ ಹಾಳಾಗುವ ಅಪಾಯವಿದೆ. ಇದನ್ನು ವಿದ್ಯಾರ್ಥಿಗಳು, ಪೆÇೀಷಕರು, ಸಂಘಟಕರು, ರಾಜಕೀಯ ನಾಯಕರು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
# ನಿಮ್ಮ ಬದುಕಿಗೆ ನೀವೇ ಹೊಣೆ
ಪ್ರೀತಿಯ ವಿದ್ಯಾರ್ಥಿಗಳೇ, ನೀವೇನೋ ಯಾರದೋ ಮಾತು ಕೇಳಿ ಧರ್ಮದ ಅಮಲು ತಲೆಗೇರಿಸಿಕೊಂಡು ಹಠಕ್ಕೆ ಬಿದ್ದವರಂತೆ ವರ್ತಿಸುತ್ತೀರ ನಿಜ. ಆದರೆ, ಪೊಲೀಸರು ಬಿಡುತ್ತಾರೆಯೇ? ನಿಮ್ಮ ಮೇಲೆ ಇದ್ದಬದ್ದ ಸೆಕ್ಷನ್‍ಗಳನ್ನೆಲ್ಲಾ ಹುಡುಕಿ ಕೇಸು ಮಾಡುತ್ತಾರೆ. ಒಂದು ಬಾರಿ ನೀವು ಪೊಲೀಸ್ ತನಿಖೆಗೆ, ಕೋರ್ಟ್ ವಿಚಾರಣೆಗೆ ಒಳಪಟ್ಟರೆ ಆಯಿತು. ಚಾರ್ಜ್‍ಶೀಟ್ (ಆರೋಪ ಪಟ್ಟಿ) ಸಲ್ಲಿಕೆಯಾಯಿತೆಂದರೆ ಅಲ್ಲಿಗೆ ನಿಮ್ಮ ಕಥೆ ಮುಗಿದಂತೆಯೆ.
ಒಂದು ವೇಳೆ ಜಾಮೀನಿನ ಮೇಲೆ ಹೊರಬಂದರೂ ಇಡೀ ಜೀವಮಾನ ಕೋರ್ಟ್‍ಗೆ ಅಲೆಯುವುದು ತಪ್ಪುವುದಿಲ್ಲ. ಆ ಕೇಸ್ ಮುಗಿದರೂ ನಿಮ್ಮ ಬದುಕಂತೂ ಹಾಳಾಗಿರುತ್ತದೆ. ವಯಸ್ಸೂ ಆಗಿರುತ್ತದೆ. ನಿಮಗೆ ಎಲ್ಲಿಯೂ ನೌಕರಿ ಕೊಡುವುದಿಲ್ಲ. ನೆನಪಿಡಿ, ಆಗ ನಿಮ್ಮ ಜತೆ ನಿಮ್ಮನ್ನು ಈಗ ಬೀದಿ ಕಾಳಗಕಕ್ಕೆ ಇಳಿಸುವ ಯಾವ ನಾಯಕನೂ ಇರುವುದಿಲ್ಲ. ನಿಮಗೆ ಈ ಭೂಮಿಯ ಮೇಲೆ ನೆಲೆಯೇ ಇರುವುದಿಲ್ಲ. ನಿಮ್ಮ ಜೀವನವೇ ವ್ಯರ್ಥ. ಇಂದು ನಿಮ್ಮನ್ನು ಧರ್ಮ, ಜಾತಿ ಹೆಸರಲ್ಲಿ ಹುಚ್ಚೆಬ್ಬಿಸಿ ಹುರಿದುಂಬಿಸುವ ಯಾವನೂ ನಿಮ್ಮ ಬದುಕು ಕಟ್ಟಿಕೊಡುವವರಲ್ಲ. ನಿಮ್ಮ ಭವಿಷ್ಯಕ್ಕೆ ನೀವೇ ಜವಾಬ್ದಾರರು. ಎಚ್ಚರವಿರಲಿ, ನಿಮ್ಮ ಬದುಕು ಹಸನಾಗಲಿ.

Articles You Might Like

Share This Article