ಬೆಂಗಳೂರು,ಜ.11- ಮಕ್ಕಳಿಂದ ಮಕ್ಕಳಿಗೆ ಕೋವಿಡ್ ಸೋಂಕು ಹರಡುವಿಕೆ ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪೋಷಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ತನಕ ಯಾವುದೇ ಮಗು ಯಾವುದೇ ಮಗು ಚಿಕಿತ್ಸೆಗಾಗಿ ದಾಖಲಾಗಿಲ್ಲ. ಹಾಗೇಯೇ ಯಾವ ಅಪಾಯವೂ ಆಗಿಲ್ಲ. ಹೀಗಾಗಿ ಆತಂಕಪಡುವುದು ಅನಗತ್ಯ ಎಂದಿದ್ದಾರೆ. ಯಾವುದೇ ಒಂದು ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಜ್ವರ ಬಂದರೆ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಬಳಿಕ ಎರಡುಮೂರು ದಿನ ಬಂದ್ ಮಾಡಿ ಸಾನಿಟೈಸ್ ಮಾಡಲಾಗುವುದು. ಕೋವಿಡ್ ಸೋಂಕು ಹೆಚ್ಚಾಗುವ ಶಾಲೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
ನಿನ್ನೆ 62 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಒಂದೂವರೆ ವರ್ಷದ ಬಳಿಕ ಶಾಲೆ ಆರಂಭವಾಗಿದೆ. ಅನಿವಾರ್ಯವಾದರೆ ಮಾತ್ರ ತಜ್ಞರ ಜೊತೆ ಸಮಾಲೋಚಿಸಿ ಶಾಲೆ ಬಂದ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗುವುದು. ಸದ್ಯಕ್ಕೆ ಆ ರೀತಿ ಯೋಚನೆ ಇಲ್ಲ. ಸ್ಥಳೀಯ ಪರಿಸ್ಥಿತಿಯ ಅನುಗುಣವಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
