3ನೇ ದಿನವೂ ಪ್ರತಿಪಕ್ಷಗಳು ಗದ್ದಲ, ಸಂಸತ್‍ ಕಲಾಪ ಮುಂದೂಡಿಕೆ

Social Share

ನವದೆಹಲಿ,ಜು.20- ಜಿಎಸ್‍ಟಿ ಏರಿಕೆ, ಹಣದುಬ್ಬರ, ಅಗ್ನಿಪಥ್ ಯೋಜನೆ ವಿರೋಸಿ ಮೂರನೆ ದಿನವೂ ಪ್ರತಿಪಕ್ಷಗಳು ಗದ್ದಲ, ಕೋಲಾಹಲ, ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ಸಂಸತ್‍ನ ಉಭಯ ಸದನಗಳ ಕಲಾಪ ಮಧ್ಯಾಹ್ನದವರೆಗೂ ಮುಂದೂಡಿಕೆಯಾಗಿದೆ.

ಸೋಮವಾರದಿಂದ ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಯಾವುದೇ ಫಲಪ್ರದ ಚರ್ಚೆಯಾಗದೆ ಸಮಯ ವ್ಯರ್ಥವಾಗುತ್ತಿದೆ. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆಗಿಳಿದಿವೆ.

ಸಂಸತ್‍ನ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಪ್ರತಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿವೆ. ಸಂಸತ್ ಒಳಗೆ ಕಾಂಗ್ರೆಸ್, ಡಿಎಂಕೆ, ಎಎಪಿ, ಎಐಎಡಿಎಂಕೆ, ತೃಣ ಮೂಲ ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ಹಲವು ಪಕ್ಷಗಳು ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಾ ಕಲಾಪಗಳನ್ನು ಬದಿಗಿರಿಸಿ ಜಿಎಸ್‍ಟಿ ಪರಿಷ್ಕರಣೆ ಚರ್ಚೆಗೆ ಅವಕಾಶ ನೀಡಬೇಕೆಂದು ನೋಟಿಸ್ ನೀಡಿವೆ.

ಆದರೆ, ಈ ನೋಟಿಸ್‍ಗಳನ್ನು ಉಭಯ ಸದನಗಳಲ್ಲೂ ಸಭಾಧ್ಯಕ್ಷರು ತಿರಸ್ಕರಿಸಿದ್ದು, ಸೂಕ್ತ ನಿಯಮಾವಳಿಗಳ ಪ್ರಕಾರ ಮತ್ತು ಅಗತ್ಯ ಸಮಯದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ರೂಲಿಂಗ್ ನೀಡಿದ್ದಾರೆ. ಇದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಇಂದು ಬೆಳಗ್ಗೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಲೋಕಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಗದ್ದಲ ಎಬ್ಬಿಸಿ ಧರಣಿ ನಡೆಸಿದರು. ಜಿಎಸ್‍ಟಿ ಏರಿಕೆ, ಹಣದುಬ್ಬರ, ಡಾಲರ್ ಎದುರು ರೂಪಾಯಿ ಮ್‍ಲ್ಯ ಕುಸಿತ, ಅಗ್ನಿಪಥ್ ಯೋಜನೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಧ್ಯ ಪ್ರವೇಶಿಸಿ ಪ್ರತಿಪಕ್ಷಗಳ ನಡವಳಿಕೆ ಸರಿಯಲ್ಲ. ಸಂಸತ್‍ನ ಬಹುತೇಕ ಸದಸ್ಯರು ಪ್ರಶ್ನೋತ್ತರ ನಡೆಯಬೇಕೆಂದು ಬಯಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಲಾಪ ನಡೆಯಬೇಕೋ, ಬೇಡವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತರಾಟೆಗೆ ತೆಗೆದುಕೊಂಡರು.

ಗದ್ದಲ, ಕೋಲಾಹಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಓಂಬಿರ್ಲಾ ಅವರು, ಘೋಷಣೆ ಕೂಗುವವರು ನಿಮ್ಮ ಅಭಿಪ್ರಾಯಗಳನ್ನು ಚರ್ಚೆಯಲ್ಲಿ ಭಾಗವಹಿಸಿ ವ್ಯಕ್ತಪಡಿಸಿ. ಜನ ಸಂಸತ್ ಕೆಲಸ ಮಾಡಬೇಕು ಎಂದು ಬಯಸುತ್ತಿದ್ದಾರೆ. ಅಡ್ಡಿ ಪಡಿಸಬೇಡಿ ಎಂದು ಸಲಹೆ ನೀಡಿದರು. ಪ್ರತಿಪಕ್ಷಗಳ ಸದಸ್ಯರು, ಚರ್ಚೆಗೆ ಅವಕಾಶ ನೀಡಿದರೆ ಅದರಲ್ಲಿ ನಾವು ಭಾಗವಹಿಸಲು ಸಿದ್ದ ಎಂದರು.

ವಾದ-ವಿವಾದ, ಗದ್ದಗಳ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಗದೇ ಇದ್ದಾಗ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 2 ಗಂಟೆ ಮುಂದೂಡಿದರು.

ಅತ್ತ ರಾಜ್ಯಸಭೆಯಲ್ಲಿ ಸದಸ್ಯರಾಗಿ ನೇಮಕವಾಗಿರುವ ಕ್ರೀಡಾಪಟು ಪಿ.ಟಿ.ಉಷಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಇದೇ ರೀತಿಯ ಗದ್ದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ತಿಳಿಗೊಳ್ಳದ ಹಿನ್ನೆಲೆಯಲ್ಲಿ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ಮೂರನೆ ದಿನದ ಕಲಾಪವೂ ಭೋಜನ ವಿರಾಮದವರೆಗೂ ಯಾವುದೇ ಫಲಪ್ರದ ಚರ್ಚೆ ನಡೆಯದೆ ಸಮಯ ವ್ಯರ್ಥವಾಗಿದೆ.

ನಿನ್ನೆ ಎರಡನೇ ದಿನದ ಕಲಾಪದಲ್ಲಿ ಭಾರತೀಯ ಅಂಟಾರ್ಟಿಕ ಮಸೂದೆಯನ್ನು ಪರ್ಯಾಲೋಚನೆಗೆ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇತ್ತ ರಾಜ್ಯಸಭೆಯಲ್ಲಿ ಪ್ರತಿಭಟನೆ ಗದ್ದಲಗಳ ನಡುವೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಮಸೂದೆಯನ್ನು ಮಂಡಿಸಿದ್ದಾರೆ.

ತಮಿಳುನಾಡು ಮತ್ತು ಪುದುಚೇರಿ ಭಾಗದ ಸಂಸದರು ಶ್ರೀಲಂಕಾ ಪರಿಸ್ಥಿತಿಯ ಬಗ್ಗೆ ಭಾರತ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಲು ಪ್ರಧಾನಿ ನೇತೃತ್ವದಲ್ಲಿ ಹಿರಿಯ ಸಚಿವರುಗಳ ಸಭೆ ನಡೆಸಲಾಗಿತ್ತು.

Articles You Might Like

Share This Article