ಬೆಲೆ ಏರಿಕೆ ವಿರೋಧಿಸಿ ಸಂಸತ್ ಭವನದ ಮುಂದೆ ಪ್ರತಿಭಟನೆ

Social Share

ನವದೆಹಲಿ, ಜು.19- ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿ ಜಿಎಸ್‍ಟಿ ದರ ವಿರೋಧಿಸಿ ಪ್ರತಿಪಕ್ಷಗಳು ಇಂದು ಸಂಸತ್ ಭವನದ ಮುಂದಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆದಿದ್ದು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದ ವೇಳೆಗೆ ಕಲಾಪ ಮುಂದೂಡಿಕೆಯಾಗಿದೆ.

ಸಂಸತ್ ಆವರಣದಲ್ಲಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಚತುರ್ವೇದಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ, ಧರಣಿ, ಹೋರಾಟ, ಉಪವಾಸ ಹಾಗೂ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿ ಇತ್ತೀಚೆಗಷ್ಟೆ ಲೋಕಸಭೆಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದರು. ಅದನ್ನು ಮೀರಿ ಸಂಸತ್ ಅಧಿವೇಶನದ ಅವಧಿಯಲ್ಲೇ ಪ್ರತಿಭಟನೆಗಳನ್ನು ನಡೆಸಲಾಗಿದೆ.

ನಿನ್ನೆಯಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಮೊದಲ ದಿನ ರಾಷ್ಟ್ರಪತಿ ಚುನಾವಣೆ, ಶ್ರದ್ಧಾಂಜಲಿ ಮತ್ತು ನೂತನವಾಗಿ ಚುನಾಯಿತರಾದ ಸದಸ್ಯರ ಪ್ರಮಾಣವಚನ ಸ್ವೀಕಾರ ಕಲಾಪಗಳು ನಡೆದವು. ಅದಕ್ಕೂ ಮೊದಲು ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬೆಲೆ ಏರಿಕೆ ಪ್ರಸ್ತಾಪಿಸಲು ಅವಕಾಶ ಕೋರಿ ನಡುವೆ ಗದ್ದಲ ಮಾಡಿದ್ದರಿಂದ ಗೊಂದಲ ಉಂಟಾಗಿ, ಕೋಲಾಹಲದ ವಾತವರಣ ನಿರ್ಮಾಣವಾಯಿತು.

ಇದರದಿಂದ ಕೆಲವೇ ಗಂಟೆಗಳಲ್ಲಿ ಅದನ್ನು ಮುಂದೂಡಲಾಯಿತು. ಎರಡನೇ ದಿನವಾದ ಇಂದು ಪ್ರತಿಪಕ್ಷಗಳು ಬೆಲೆ ಏರಿಕೆ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆಗಿಳಿದಿವೆ. ಲೋಕಸಭೆ ಆರಂಭದಲ್ಲೇ ಪ್ರತಿಪಕ್ಷಗಳ ಸಂಸದರು ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ಲೆಕಾರ್ಡ್‍ಗಳನ್ನು ಪ್ರದರ್ಶಿಸಿದರು.

ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರೋಧಿಸಿದರು. ನಿಯಮಗಳ ಪ್ರಕಾರ ಸಂಸತ್ ಒಳಗೆ ಪ್ಲೆಕಾರ್ಡ್ ತರಲು ಅವಕಾಶವಿಲ್ಲ ಎಂದು ಹೇಳಿದರು. ಸ್ಪೀಕರ್ ಅವರ ಮನವಿಗೆ ಪ್ರತಿಪಕ್ಷಗಳ ಸದಸ್ಯರು ಸ್ಪಂದಿಸದೇ ಇದ್ದಾಗ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಅತ್ತ ರಾಜ್ಯಸಭೆಯಲ್ಲೂ ಗದ್ದಲವಾಗಿದ್ದು, ಕಲಾಪವನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲಾಗಿದೆ. ರಾಜ್ಯಸಭೆಯ ಪ್ರತಿಪಕ್ಷದ ಸಚೇತಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದು, ವಿರೋಧ ಪಕ್ಷಗಳು ಸದನ ಮುಂದೂಡಿಕೆಯನ್ನು ಪಡೆದುಕೊಂಡಿವೆ. ವಿಶೇಷವಾಗಿ ಸಹಿಸಲಾಗದಷ್ಟು ಬೆಲೆ ಏರಿಕೆ, ಜಿಎಸ್‍ಟಿ ದರ ಹೆಚ್ಚಳದ ಬಗ್ಗೆ ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.

ಸಂಸತ್ ಹೊರಗಿನ ಪ್ರತಿಭಟನೆಯ ವಿಡಿಯೋವನ್ನು ಭಾರತೀಯ ಯುವ ಕಾಂಗ್ರೆಸ್‍ನ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಬಿವಿ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಅದರಲ್ಲಿರುವ ವೀಡಿಯೊದಲ್ಲಿ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ದೊಡ್ಡ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ. ಅಧಿಕ ಹಣದುಬ್ಬರ, ನಿರಂತರ ಬೆಲೆ ಏರಿಕೆ ಸಾಮಾನ್ಯ ನಾಗರಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಅಗತ್ಯ ವಸ್ತುಗಳ ಬೆಲೆಯನ್ನು ಸರಕಾರ ಇಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ನಿನ್ನೆ ಅಧಿವೇಶನಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ಅವರು ಫಲಪ್ರದ ಅಧಿವೇಶನಕ್ಕೆ ಸಹಕರಿಸುವಂತೆ ನಾಯಕರಿಗೆ ಮನವಿ ಮಾಡಿದ್ದರು. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಬೆಲೆ ಏರಿಕೆ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದರು. ಸದನದ ಒಳಗೆ ಹಾಗೂ ಹೊರಗೆ ನಮ್ಮ ಪ್ರತಿಭಟನೆ ಮುಂದುವರೆಸಲಾಗುವುದು.

ಬೆಲೆ, ಜಿಎಸ್‍ಟಿ ಏರಿಕೆ ವಿರುದ್ಧ ಹೋರಾಟ ನಡೆಸುವಂತೆ ಎಲ್ಲ ಪಕ್ಷಗಳಿಗೂ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರು, ಜಿಎಸ್‍ಟಿ ಹೆಚ್ಚಳವು ಸಂಪೂರ್ಣವಾಗಿ ಜನವಿರೋಯಾಗಿದೆ, ನಾವು ಅದರ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಸೇನಾ ನೇಮಕಾತಿಗೆ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ವಿರೋಸಿ ಪ್ರತಿ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

Articles You Might Like

Share This Article