ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸಂಸ್ಥೆಗಳ ಹೂಡಿಕೆ ಚರ್ಚೆಗೆ ಪ್ರತಿಪಕ್ಷಗಳು ಪಟ್ಟು

Social Share

ನವದೆಹಲಿ,ಫೆ.3- ಉದ್ಯಮಿ ಗೌತಮ್ ಅದಾನಿ ಕಂಪೆನಿಯಲ್ಲಿ ಸರ್ಕಾರಿ ಸೌಮ್ಯದ ಸಂಸ್ಥೆಗಳ ಬಂಡವಾಳ ಹೂಡಿಕೆಯಿಂದಾಗಿರುವ ನಷ್ಟಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವುದರಿಂದ, ಸಂಸತ್‍ನ ಎರಡನೇ ದಿನದ ಕಲಾಪವೂ ವ್ಯರ್ಥವಾಗಿದೆ.

ರಾಜ್ಯಸಭೆ ಮತ್ತು ಲೋಕಸಭೆ ಉಭಯ ಸದನಗಳು ಭೋಜನ ವಿರಾಮದವರೆಗೂ ಮುಂದೂಡಿಕೆಯಾಗಿವೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಪಣತೊಟ್ಟಿವೆ.

ನಿನ್ನೆ ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪದಲ್ಲೂ ಯಾವುದೇ ಚರ್ಚೆ ನಡೆಯದೆ ಸಮಯ ವ್ಯರ್ಥವಾಗಿತ್ತು. ಬೆಳಗ್ಗೆ ಅವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಗದ್ದಲ ಆರಂಭಿಸಿದವು. ಇದರಿಂದಾಗಿ ಮಧ್ಯಾಹ್ನದ ಭೋಜನ ವಿರಾಮ 2ಗಂಟೆವರೆಗೂ ಕಲಾಪ ಮುಂದೂಡಿಕೆಯಾಗಿತ್ತು. ನಂತರ ಸಮಾವೇಶಗೊಂಡಾಗಲೂ ಎರಡು ನಿಮಿಷದಲ್ಲೇ ದಿನದ ಕಲಾಪ ಮೊಟಕುಗೊಂಡಿತು.

ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಈ ನಡುವೆ ಸರ್ಕಾರ ತಾವು ಎಲ್ಲಾ ರೀತಿಯ ಚರ್ಚೆಗಳಿಗೂ ಸಿದ್ಧ ಎಂದು ಪ್ರತಿಪಾದಿಸುತ್ತಲೇ ಅದಾನಿ ಗುಂಪಿನ ಷೇರು ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನಿರಾಕರಿಸಿ ಗೊಂದಲ ಮೂಡಿಸಿದೆ. ಪ್ರತಿ ಪಕ್ಷಗಳಿಂದ ರಾಜ್ಯಸಭೆಯಲ್ಲಿ 20ಕ್ಕೂ ಹೆಚ್ಚು, ಲೋಕಸಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ಸದಸ್ಯರು ಪ್ರತ್ಯೇಕ ಸೂಚನೆಗಳನ್ನು ನೀಡಿ ಚರ್ಚೆಗೆ ಒತ್ತಾಯಿಸಿದ್ದರು.

ಆದರೆ, ನೋಟಿಸ್‍ಗಳು ಕ್ರಮಬದ್ಧವಾಗಿಲ್ಲ ಎಂಬ ನೆಪವೊಡ್ಡಿ ಉಭಯ ಸದನಗಳಲ್ಲಿನ ಅಧ್ಯಕ್ಷರು ಚರ್ಚೆಗೆ ಅವಕಾಶ ನಿರಾಕರಿಸಿದರು. ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ 15 ನಿಲುವಳಿ ಸೂಚನೆಗಳನ್ನು ತಿರಸ್ಕರಿಸಿದ್ದರು.

ಅದಾನಿ ಗುಂಪಿನಲ್ಲಿ ಎಸ್‍ಬಿಐ, ಎಲ್‍ಐಸಿ ಸೇರಿದಂತೆ ವಿವಿಧ ಸರ್ಕಾರಿ ಸೌಮ್ಯದ ಕಂಪೆನಿಗಳು ಬಂಡವಾಳ ಹೂಡಿದ್ದು, ಅದಾನಿ ಗುಂಪಿನ ಷೇರು ಅವ್ಯಾಹಾರ ಕುರಿತು ಅಮೆರಿಕ ಮೂಲದ ಹಿಡನ್ಸ್‍ಬರ್ಗ್ ಸಂಸ್ಥೆ ಸಂಶೋಧನಾ ವರದಿ ಪ್ರಕಟಿಸಿದೆ. ಇದರ ಬಳಿಕ ಅದಾನಿ ಗುಂಪಿನ ಷೇರು ಮೌಲ್ಯ ಕುಸಿತವಾಗಿದ್ದು, ಎಸ್‍ಬಿಐ ಮತ್ತು ಎಲ್‍ಐಸಿ ಸಂಸ್ಥೆಗಳು ಭಾರೀ ನಷ್ಟಕ್ಕೀಡಾಗಿವೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಆದರೆ, ರಾಜ್ಯಸಭೆಯಲ್ಲಿ ಅಧ್ಯಕ್ಷರಾದ ಜಗದೀಪ್ ಧನ್ಕರ್ ಅವಕಾಶ ನಿರಾಕರಿಸಿದರು. ಇದನ್ನು ವಿರೋಸಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದಾಗ ಪ್ರಜಾಪ್ರಭುತ್ವದ ಉತ್ತರ ಧೃವವಾಗಿರುವ ಸಂಸತ್ ಚರ್ಚೆಗಾಗಿದೆಯೇ ಹೊರತು ಕಲಾಪಕ್ಕೆ ಅಡ್ಡಿಪಡಿಸಲು ಅಲ್ಲ. ನನಗೆ 15 ನೋಟಿಸ್‍ಗಳು ನಿಯಮ 267ರ ಅಡಿ ಬಂದಿವೆ. ಬೇರೆ ಬೇರೆ ಸದಸ್ಯರು ಇವುಗಳನ್ನು ನೀಡಿದ್ದಾರೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಯಾವೂ ಕೂಡ ನಿಯಮ 267ರಡಿ ಚರ್ಚೆಗೆ ಅರ್ಹವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರ ದಕ್ಷಿಣದಿಂದ ಕಾಂಗ್ರೆಸ್ ಪ್ರತ್ಯೇಕ ಪ್ರಜಾಧ್ವನಿ ಕಹಳೆ

ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದಾಗ ಕಲಾಪವನ್ನು ಮಧ್ಯಾಹ್ನ 2.30ರವರೆಗೆ ಮುಂದೂಡಿದ್ದಾರೆ.
ಇತ್ತ ಲೋಕಸಭೆಯಲ್ಲೂ ಅದಾನಿ ಗುಂಪಿನ ಷೇರು ಅವ್ಯವಹಾರ ಮತ್ತು ಸರ್ಕಾರಿ ಸಂಸ್ಥೆಗಳಿಗಾದ ನಷ್ಟದ ವಿರುದ್ಧ ಜಂಟಿ ಸದನ ಸಮಿತಿಯ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಹಾಗೂ ಯಾವುದೇ ವ್ಯವಹಾರಗಳಿಗೆ ಅವಕಾಶ ನೀಡದೆ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದರು.

ಸಭಾಧ್ಯಕ್ಷ ಓಂಬಿರ್ಲಾ ಪ್ರಶ್ನೋತ್ತರಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಿ. ಸದಸ್ಯರು ತಾಳ್ಮೆಯಿಂದ ವರ್ತಿಸಿ. ಪ್ರತಿಪಕ್ಷಗಳು ಸೂಕ್ತವಾದ ನೋಟಿಸ್ ನೀಡಿದರೆ ಆ ವಿಚಾರಗಳ ಚರ್ಚೆಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು. ಅದರ ಹೊರತಾಗಿಯೂ ಗದ್ದಲ ಮುಂದುವರೆದಾಗ ಕಲಾಪವನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಗಿದೆ.

Parliament, session, adjourned, amid, ruckus, Adani row,

Articles You Might Like

Share This Article