ಜಾನ್ಸನ್-ಮೋದಿ ಭೇಟಿ : ಬ್ರಿಟನ್-ಭಾರತ ನಡುವೆ ರಕ್ಷಣೆ-ಇಂಧನ ಕ್ಷೇತ್ರಗಳ ಸಂಬಂಧ ಸುಧಾರಣೆಗೆ ಆದ್ಯತೆ
ನವದೆಹಲಿ, ಏ.22- ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನವದೆಹಲಿಯಲ್ಲಿಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಭೂಮಿ, ಸಮುದ್ರ, ಬಾಹ್ಯಾಕಾಶ, ಸೈಬರ್ ಸುರಕ್ಷತೆ ಸೇರಿದಂತೆ ಐದು ವಲಯಗಳಲ್ಲಿನ ಭದ್ರತೆ ಕುರಿತು ಚರ್ಚೆ ನಡೆಸಲಿದ್ದಾರೆ. ಎರಡು ದಿನಗಳ ಭಾರತ ಪ್ರವಾಸ ಕೈಕೊಂಡಿರುವ ಜಾನ್ಸನ್ ನಿನ್ನೆ ಗುಜರಾತ್ಗೆ ಭೇಟಿ ನೀಡಿದ್ದರು. ಗುರುವಾರ ತಡ ರಾತ್ರಿ ದೆಹಲಿಗೆ ಆಗಮಿಸಿದ ಅವರು, ಶುಕ್ರವಾರ ಬೆಳಗ್ಗೆ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದರು. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಬ್ರಿಟನ್ ಪ್ರಧಾನಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು.
ಭಾರತ ಮತ್ತು ಬ್ರಿಟನ್ ಎರಡು ದೇಶಗಳು ಸಂಕೀರ್ಣ ಬೆದರಿಕೆಗಳನ್ನು ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ರಕ್ಷಣೆ ಮತ್ತು ಭದ್ರತೆ ವಿಷಯವಾಗಿ ಉಭಯ ದೇಶಗಳ ಪ್ರಧಾನಿಗಳು ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ಬ್ರಿಟನ್ ರಾಯಭಾರ ಕಚೇರಿ ತಿಳಿಸಿದೆ. ಉಭಯ ಪ್ರಧಾನಿಗಳು ಪ್ರತ್ಯೇಕ ಟ್ವೀಟ್ಗಳ ಮೂಲಕ ಪರಸ್ಪರ ಭೇಟಿಗೆ ಕುತೂಹಲಿಗಳಾಗಿರುವುದಾಗಿ ಹೇಳಿಕೊಂಡಿದ್ದರು.
ನಮ್ಮ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವ, ನ್ಯಾಯ ಸಮ್ಮತ ವ್ಯಾಪಾರಕ್ಕೆ ಅಡ್ಡಿ ಪಡಿಸುವ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ನಿರಂಕುಶ ಶಕ್ತಿಗಳನ್ನು ಎದುರಿಸಲು ಭಾರತ ಮತ್ತು ಬ್ರಿಟನ್ ಜಂಟಿ ಪಾಲುದಾರಿಕೆ ಸಾಸಲಿವೆ ಎಂದು ಜಾನ್ಸನ್ ಹೇಳಿರುವುದಾಗಿ ಬ್ರಿಟನ್ ರಾಯಭಾರ ಕಚೇರಿ ತಿಳಿಸಿದೆ.
ಮುಂದಿನ ಪೀಳಿಗೆಯ ತಂತ್ರಜ್ಞಾನ, ಆಧುನಿಕ ಯುದ್ಧ ವಿಮಾನಗಳ ವಿನಿಮಯ, ಹಿಂದು ಮಹಾಸಾಗರದ ಬೆದರಿಕೆಗಳನ್ನು ನಿಗ್ರಹಿಸಲು ಅಗತ್ಯ ತಂತ್ರಜ್ಞಾನ ಅಭಿವೃದ್ಧಿಗೆ ಪರಸ್ಪರ ಸಹಕಾರ ಕುರಿತು ಚರ್ಚೆಗಳು ನಡೆಯಲಿವೆ. ರಕ್ಷಣಾ ಕ್ಷೇತ್ರದ ಜೊತೆಗೆ ಸುಸ್ಥಿರ ಇಂಧನ, ನವೀಕರಿಸಬಹುದಾದ ಶಕ್ತಿ, ಹವಾಮಾನ ಬದಲಾವಣೆ ವಲಯಗಳ ಬಗ್ಗೆಯೂ ಪ್ರಧಾನಿಗಳು ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೈಗೆಟುಕುವ ಹಸಿರು ಹೈಡ್ರೋಜನ್ ಗಾಗಿ ವರ್ಚುವಲ್ ಹೈಡ್ರೋಜನ್ ಸೈನ್ಸ್ ಮತ್ತು ಇನ್ನೋವೇಶನ್ ಹಬ್ ಸ್ಥಾಪನೆ ಕುರಿತು ಸಹಿ ಹಾಕಲಾಗುತ್ತದೆ. ಇಂಡೋ-ಪೆಸಿಫಿಕ್, ಆಫ್ರಿಕಾಕ್ಕೆ ಹೊಂದಿಕೊಳ್ಳುವ ಕ್ಲೀನ್ ಟೆಕ್ ಅವಿಷ್ಕಾರಗಳಿಗೆ 75 ಮಿಲಿಯನ್ ಪೌಂಡ್ ಹೂಡಿಕೆಗೆ ನಿನ್ನೆ ಚರ್ಚಿಸಲಾಗಿದೆ. ಅಂತರಾಷ್ಟ್ರೀಯ ಅಭಿವೃದ್ಧಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.
ಪ್ರಧಾನಿ ಭೇಟಿಗೂ ಮೊದಲು ಜಾನ್ಸನ್ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಮುಂದಿನ 10 ವರ್ಷಗಳ ಕಾಲದ ವ್ಯಾಪಾರ ವಹಿವಾಟಿಗೆ ಸಂಬಂಸದಂತೆ ಬದ್ಧತೆಯನ್ನು ಉಭಯ ರಾಷ್ಟ್ರಗಳು ವ್ಯಕ್ತ ಪಡಿಸಿವೆ ಎಂದು ಹೇಳಲಾಗಿದೆ.