ಚುನಾವಣಾ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಆರಂಭ

Social Share

ಬೆಂಗಳೂರು,ಸೆ.4- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವ ಸದ್ದು ಮಾಡುತ್ತಿದ್ದು, ಶಾಸಕರು, ಹಿರಿಯ ನಾಯಕರು ಆ ಪಕ್ಷದಿಂದ ಈ ಪಕ್ಷ, ಈ ಪಕ್ಷದಿಂದ ಆ ಪಕ್ಷದತ್ತ ಹಾರಾಟ ಶುರು ಮಾಡಿದ್ದಾರೆ.

ತುಮಕೂರು, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಶಾಸಕರು ಪಕ್ಷಾಂತರಕ್ಕೆ ವೇದಿಕೆ ಸಜ್ಜು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಹಲವಾರು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದರೆ, ಮತ್ತೊಂದು ಕಡೆ ಬಿಜೆಪಿ ಮತ್ತು ಜೆಡಿಎಸ್‍ನ ಕೆಲ ಶಾಸಕರು ಕಾಂಗ್ರೆಸ್‍ನ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ನಡೆದ ಚುನಾವಣಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುಂದಿರುವುದು ಕೈ ನಾಯಕರಲ್ಲಿ ಭರವಸೆ ಹುಟ್ಟುಸಿದೆ. ಹೀಗಾಗಿ ಎಂದಿಗಿಂತಲೂ ಹೆಚ್ಚಿನ ಚಟುವಟಿಕೆಯಿಂದ ಕಾಂಗ್ರೆಸ್ ಸಕ್ರಿಯವಾಗಿದೆ. ಹಾಸನ, ತುಮಕೂರು, ಕೋಲಾರ ಜಿಲ್ಲೆಗಳ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವುದಾಗಿ ಹೇಳಿಕೊಂಡಿದ್ದು, ಪರೋಕ್ಷವಾಗಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಯಚೂರು, ವಿಜಯಪುರ, ಬೆಳಗಾವಿ ಜಿಲ್ಲೆಯ ಕೆಲವು ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ವೇಳೆಗೆ ಪಕ್ಷಾಂತರ ಪರ್ವ ಹೆಚ್ಚಾಗಲಿದೆ ಎಂದೇ ಹೇಳಲಾಗುತ್ತಿದೆ.

ಚುನಾವಣೆಯಲ್ಲಿ ಸ್ರ್ಪಸಲು ಅವಕಾಶ ಸಿಗದೆ ಇರುವ ಕಾಂಗ್ರೆಸ್-ಬಿಜೆಪಿಯ ಕೆಲ ಶಾಸಕರು, ಮುಖಂಡರು ಜೆಡಿಎಸ್‍ನತ್ತ ವಲಸೆ ಹೋಗುವುದು ಸಹಜ ಎನ್ನಲಾಗಿದೆ. ಹೀಗಾಗಿ ಮುಂದಿನ ಆರೇಳು ತಿಂಗಳು ರಾಜಕೀಯ ಚಟುವಟಿಕೆಗಳು ಬಿರುಸಾಗಲಿದ್ದು, ಯಾರು, ಯಾವ ಪಕ್ಷದಲ್ಲಿ ಇರಲಿದ್ದಾರೆ, ಯಾರು ಯಾವ ಪಕ್ಷ ಸೇರಲಿದ್ದಾರೆ ಎಂಬುದು ಗೊಂದಲಮಯವಾಗಲಿದೆ.

ಎಲ್ಲಾ ಪಕ್ಷಗಳಲ್ಲೂ ಬಣ ರಾಜಕೀಯ, ಸ್ವಪ್ರತಿಷ್ಟೆ ತೀವ್ರವಾಗಿದ್ದು, ಬಹಳಷ್ಟು ನಾಯಕರು ತಮ್ಮ ಸ್ವಾರ್ಥಕ್ಕಾಗಿ ಸೂಕ್ತ ದಾರಿ ಹುಡುಕಿಕೊಳ್ಳಲು ಹವಣಿಸುತ್ತಿದ್ದಾರೆ. ನಾಯಕರ ರಕ್ಷಣೆಯಿಂದಾಗಿ ಕೆಲವರಿಗೆ ಸುಭದ್ರ ಸ್ಥಾನಗಳು ಸಿಗಲಿವೆ. ಆದರೆ ಬಹಳಷ್ಟು ಮಂದಿ ಅವಕಾಶಗಳಿಗಾಗಿ ತ್ರಿಶಂಕು ಸ್ಥಿತಿಯಲ್ಲೇ ಪರದಾಡುತ್ತಿದ್ದಾರೆ.

Articles You Might Like

Share This Article