ಖಾಸಗಿ ಬಸ್ ಮಾಲೀಕರಿಗೆ ಶ್ರೀರಾಮುಲು ಖಡಕ್ ವಾರ್ನಿಂಗ್

Social Share

ಬೆಂಗಳೂರು,ಆ.28-ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ತೆಗೆದುಕೊಂಡರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಗೌರಿಗಣೇಶ ಹಬ್ಬದ ವೇಳೆ ಪ್ರಯಾಣಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳುತ್ತಾರೆ. ಇದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆಯಾ ರೂಟ್‍ಗಳಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕೆಂದು ಸೂಚನೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ದರವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿರುವುದಾಗಿ ಹೇಳಿದ್ದಾರೆ. ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಇಲ್ಲವೇ ತೊಂದರೆ ಕೊಟ್ಟು ಹೆಚ್ಚಿನ ದರ ವಸೂಲಿ ಮಾಡಿದರೆ ಸಹಿಸುವುದಿಲ್ಲ. ಹಾಗೊಂದು ವೇಳೆ ನನ್ನ ಗಮನಕ್ಕೆ ಬಂದರೆ ಅಂತಹ ಬಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಲಾಭ-ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸಿಕೊಡಿ. ಹಬ್ಬದ ಸಂದರ್ಭದಲ್ಲಿ ಕುಟುಂಬ ಸಮೇತ ತಮ್ಮ ಊರುಗಳಿಗೆ ಸಾರ್ವಜನಿಕರು ತೆರಳುತ್ತಾರೆ. ಅಕ್ರಮವಾಗಿ ಹಣ ಸಂಪಾದನೆ ಮಾಡುವುದೇ ನಮ್ಮ ಗುರಿ ಎಂದಾದರೆ ಕಾನೂನು ಕ್ರಮ ಅನುಭವಿಸಲು ಸಿದ್ದವಾಗಿರಿ ಎಂದು ಬಸ್ ಮಾಲೀಕರಿಗೆ ಸೂಚನೆ ಕೊಟ್ಟಿದ್ದಾರೆ.

ನಾನು ಈಗಲೂ ಖಾಸಗಿ ಬಸ್ ಮಾಲೀಕರಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ. ಯಾವ ಯಾವ ರೂಟ್‍ಗಳಿಗೆ ಎಷ್ಟು ದರ ನಿಗದಪಡಿಸಿದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಹೆಚ್ಚಿನ ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೆಂಗಳೂರಿನಿಂದ ತೆರಳಲು ಅನುಕೂಲವಾಗುವಂತೆ ಮುಂಗಡ ಆನ್‍ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಲಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಶ್ರೀರಾಮುಲು ಇದೇ ಸಂದರ್ಭದಲ್ಲಿ ತಿಳಿಸಿದರು.

5ಕ್ಕೂ ಹೆಚ್ವು ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಮಾಡಿದಲ್ಲಿ 5% ರಿಯಾಯಿತಿ ಹಾಗೂ ಹೋಗುವ ಹಾಗೂ ಬರುವ ಟಿಕೆಟ್ ಒಟ್ಟಿಗೆ ಬುಕ್ ಮಾಡಿದಲ್ಲಿ 10% ರಿಯಾಯಿತಿ ನೀಡಲಾಗುವುದು.ಆಗಸ್ಟ್ 30 ಹಾಗೂ 31ರಂದು ಗೌರಿ ಗಣೇಶ ಹಬ್ಬದ ಹಿನ್ನಲೆ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, 500 ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ.ಮೆಜೆಸ್ಟಿಕ್ ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕುಂದಾಪುರ, ತಿರುಪತಿ, ಹೈದರಾಬಾದ್ ಸೇರಿದಂತೆ ಹಲವೆಡೆಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರ ಹಾಗೂ ಶಾಂತಿನಗರ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ಆಗಸ್ಟ್ 31ರಂದು ಆಗಮಿಸುವ ಪ್ರಯಾಣಿಕರಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಸೀಟು ಕಾಯ್ದಿರಿಸುವಿಕೆ:
ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ 8006 ಸೀಟುಗಳನ್ನು ನಾಳೆ ಪ್ರಯಾಣಿಕರು ಕಾಯ್ದಿರಿಸಿದ್ದಾರೆ. ಆ.31ರಂದು 9206, ಹಾಗೂ ಆ.31ರಂದು 5692 ಸೀಟುಗಳನ್ನು ಕಾಯ್ದಿರಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ಹೆಚ್ಚುವರಿ 500 ಬಸ್‍ಗಳಲ್ಲಿ ನಾಳೆ 40 ಬಸ್ ಹಾಗೂ ಆ.31ರಂದು 67 ಬಸ್‍ಗಳ ಸೀಟುಗಳು ಈಗಾಗಲೇ ಮುಂಗಡ ಬುಕಿಂಗ್ ಆಗಿವೆ ಎಂದು ಹೇಳಿದೆ.

Articles You Might Like

Share This Article