ನಕಲಿ ದಾಖಲೆ ಸೃಷ್ಟಿಸಿ ಪಾಸ್‍ಪೋರ್ಟ್ ದಂಧೆ : 5 ಶ್ರೀಲಂಕಾ ಪ್ರಜೆಗಳು ಸೇರಿ 9 ಮಂದಿ ಬಂಧನ

Social Share

ಬೆಂಗಳೂರು,ನ.7- ಶ್ರೀಲಂಕಾ ಪ್ರಜೆಗಳಿಗೆ ಮತ್ತು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಟ್ಟು ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಡುತ್ತಿದ್ದ ವಂಚಕರ ಜಾಲವನ್ನು ಬಸವನಗುಡಿ ಠಾಣೆ ಪೊಲೀಸರು ಬಯಲಿಗೆಳೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಸಿದಂತೆ ನಕಲಿ ಆಧಾರ್ ಕಾರ್ಡ್, ಮನೆಯ ವಿಳಾಸದ ನಕಲಿ ಅಗ್ರಿಮೆಂಟ್ ಕೊಟ್ಟು ಪಾಸ್‍ಪೋರ್ಟ್ ಮಾಡಿಸಿಕೊಂಡಿದ್ದ ಐವರು ಶ್ರೀಲಂಕಾ ಪ್ರಜೆಗಳು ಸೇರಿ ಒಂಭತ್ತು ಮಂದಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆ ಶ್ರೀಲಂಕಾ ತೊರೆದಿದ್ದ ಐವರು ಆರೋಪಿಗಳು ಬೆಂಗಳೂರಿಗೆ ಬಂದು ನಾಲ್ವರು ಏಜೆಂಟರನ್ನು ಸಂಪರ್ಕಿಸಿ ನಕಲಿ ಶಾಲಾ ಟಿಸಿ, ಅಂಕಪಟ್ಟಿ ಸೇರಿ ಎಲ್ಲಾ ನಕಲಿ ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದರು.

ಹೊರ ದೇಶಕ್ಕೆ ಹೋಗುವ ಪ್ಲಾನ್ ಮಾಡಿದ್ದ ಆರೋಪಿಗಳು ಈಗ ದಕ್ಷಿಣ ವಿಭಾಗ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ನಕಲಿ ಅಂಕಪಟ್ಟಿ , ನಕಲಿ ಟಿಸಿ, ನಕಲಿ ಛಾಪಾ ಕಾಗದ, ನಕಲಿ ಆಧಾರ್ ಕಾರ್ಡ್ ಬಳಕೆ ಸೇರಿ ಹಲವು ನಕಲಿ ದಾಖಲಾತಿಗಳ ಮೂಲಕ ಅಸಲಿ ಪಾಸ್ ಪೋರ್ಟ್‍ಮಾಡಿಸಿ ಒಂದು ಪಾಸ್ ಪೋರ್ಟ್‍ಗೆ 45 ಸಾವಿರ ವಸೂಲಿ ಮಾಡುತ್ತಿದ್ದರು.

ಇತ್ತೀಚಿಗೆ ಕಳ್ಳ ದಂಧೆ ಮೂಲಕ ಪಡೆದಿದ್ದ ಪಾಸ್‍ಪೋರ್ಟ್ ಬಳಸಿಕೊಂಡು ವಂಚಕನೊಬ್ಬ ವಿದೇಶಕ್ಕೆ ಹೋಗಿದ್ದ ಶಿವಮೊಗ್ಗ ಮೂಲದ ಕೊಲೆ ಆರೋಪಿ ಕೂಡ ದುಬೈಗೆ ಹೋಗಿರುವ ಮಾಹಿತಿ ಇದ್ದು ತನಿಖೆ ಮುಂದುವರೆದಿದೆ.

ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಬೆಂಗಳೂರು ಮೂಲದ ಇಬ್ಬರು, ಮಂಗಳೂರು ಮೂಲದ ಇಬ್ಬರು ಹಾಗೂ 5 ಜನ ಶ್ರೀಲಂಕಾ ಪ್ರಜೆಗಳು ಸೇರಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಎರಡನೇ ಆರೋಪಿಯು ಖಾಸಗಿ ಪಾಸ್‍ಪೋರ್ಟ್ ಬ್ರೋಕರ್ ಆಗಿದ್ದು, ಈಗಾಗಲೇ ಜಯನಗರ, ಡಿ.ಜೆ. ಹಳ್ಳಿ, ಪುಲಿಕೇಶಿನಗರ, ಅನ್ನಪೂರ್ಣೇಶ್ವರಿ ನಗರ, ಭಾರತಿ ನಗರ, ಸಿಟಿ ಮಾರ್ಕೆಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಸೇರಿದಂತೆ 16 ಪೋಲೀಸ್ ಠಾಣೆಗಳಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್ ಪೋರ್ಟ್ ಕೊಡಿಸಿದ ಆರೋಪಗಳ ಅಡಿಯಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ.

ಅಪಪ್ರಚಾರಗಳಿಂದ ನೊಂದಿರುವೆ : ನೋವು ತೋಡಿಕೊಂಡ ರಶ್ಮಿಕ ಮಂದಣ್ಣ

ಈತನು ತನ್ನ ಸಹಚರನಾದ 5ನೇ ಆರೋಪಿಯ ಸಹಾಯದಿಂದ ಸುಳ್ಳು ವಿಳಾಸದ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ, ಮತ್ತು ಜನ್ಮದಿನಾಂಕ ದೃಢೀಕರಣಕ್ಕಾಗಿ ಶಾಲಾ ವರ್ಗಾವಣಾ ಪ್ರಮಾಣ ಪತ್ರಗಳನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಿ ಪಾಸ್‍ಪೋರ್ಟ್ ಕಛೇರಿಗೆ ಸಲ್ಲಿಸಿ ಪಾಸ್‍ಪೋರ್ಟ್ ಪಡೆದಿರುತ್ತಾನೆ. ಈವರೆಗೆ ಅಂದಾಜು 50 ಜನರಿಗೆ ಪಾಸ್ ಪೋರ್ಟ್‍ಗಳನ್ನು ಮತ್ತು ಚಾಲನಾ ಪರವಾನಿಗೆಗಳನ್ನು ಅಕ್ರಮವಾಗಿ ಮಾಡಿಸಿಕೊಟ್ಟಿರುವ ಬಗ್ಗೆ ವಿಚಾರಣೆಯ ವೇಳೆ ತಿಳಿದುಬಂದಿದೆ.

ತನಿಖೆಯಲ್ಲಿ 2020ರಿಂದ ಇಲ್ಲಿಯವರೆಗೆ ಬಸವನಗುಡಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶ್ರೀಲಂಕಾ ಮೂಲದ 5 ಮಂದಿ ಸೇರಿದಂತೆ ಒಟ್ಟು 20 ಜನರಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‍ಪೋರ್ಟ್ ಮಾಡಿಸಿಕೊಟ್ಟಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ. ಇತರೆ ಆರೋಪಿಗಳೂ ಸಹ ಅಪರಾಧ ಹಿನ್ನಲೆಯುಳ್ಳವರಾಗಿದ್ದು, ತಮ್ಮ ಮೂಲ ಹೆಸರುಗಳನ್ನು ಮರೆಮಾಚಿ ಪಾಸ್‍ಪೋರ್ಟ್ ಮಾಡಿಸಿ ಕೊಡುವ ಕೃತ್ಯದಲ್ಲಿ ಭಾಗಿಯಾಗಿರುತ್ತಾರೆ.

ಈ ರೀತಿ ಅಕ್ರಮವಾಗಿ ನಕಲು ದಾಖಲಾತಿಗಳನ್ನು ಸಲ್ಲಿಸಿ ಪಾಸ್‍ಪೋರ್ಟ್ ಪಡೆದ ಆರೋಪಿಗಳಲ್ಲಿ ಚಿಕ್ಕಮಗಳೂರು ಮೂಲದ ಆರೋಪಿ ವಿರುದ್ಧ 36 ಮನೆಕಳ್ಳತನದ ಪ್ರಕರಣ ದಾಖಲಾಗಿರುತ್ತದೆ.

ಈತನ ಸಹೋದರನ ವಿರುದ್ಧ 15 ಮನೆಕಳ್ಳತನದ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಮಂಗಳೂರು ಮೂಲದ ಮೂವರು ಆರೋಪಿಗಳ ವಿರುದ್ಧ ಕೊಲೆ, ಸುಲಿಗೆ, ದರೋಡೆ ಇಂತಹ ಗಂಭೀರ ಪ್ರಕರಣಗಳು ದಾಖಲಾಗಿದ್ದು ಇವರುಗಳ ವಿರುದ್ದ ಘನ ನ್ಯಾಯಾಲಯದಿಂದ ವಾರೆಂಟ್ ಹಾಗೂ ಪ್ರೊಕ್ಲಮೇಷನ್ ಹೊರಡಿಸಿದೆ.

ಇದಲ್ಲದೇ 5 ಮಂದಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ. ಇಲ್ಲಿಯವರೆಗಿನ ತನಿಖೆಯಿಂದ ನಕಲಿ ದಾಖಲೆಗಳನ್ನು ಸಲ್ಲಿಸಿ ಪಾಸ್‍ಪೋರ್ಟ್ ಪಡೆದಿದ್ದ 5 ಮಂದಿ ಆರೋಪಿಗಳನ್ನು ಹಾಗೂ ಇದಕ್ಕೆ ಸಹಕರಿಸಿದ್ದ ನಾಲ್ವರು ಏಜೆಂಟ್‍ಗಳನ್ನು ಪತ್ತೆ ಮಾಡಿ ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.

ಕ್ಷಮೆ ಕೇಳಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದವರಿಗೂ ಟಾಂಗ್

ಪ್ರಕರಣದ ಗಂಭೀರತೆ ಪರಿಗಣಿಸಿ ಬೆಂಗಳೂರು ನಗರದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತ ಪಿ.ಕೃಷ್ಣಕಾಂತ್ ಮತ್ತು ಜಯನಗರ ಉಪ-ವಿಭಾಗದ ಸಹಾಯಕ ಪೆಪೊಲೀಸ್ ಆಯುಕ್ತ ಕೆ.ವಿ. ಶ್ರೀನಿವಾಸ್‍ರ ಮಾರ್ಗದರ್ಶನದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸುಬ್ರಮಣ್ಯಸ್ವಾಮಿ, ಬನಶಂಕರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗಿರೀಶ್ ನಾಯ್ಕ, ಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಂಜುನಾಥ್, ಸಬ್ ಇನ್ಸ್‍ಪೆಕ್ಟರ್‍ಗಳಾದ ಹರಿಪ್ರಸಾದ್, ಮನೋಜ್ ನಾಗನೂರಿ ಮತ್ತು ಪೊಲೀಸ್ ತಂಡ ಕೂಡಲೆ ಕಾರ್ಯೋನ್ಮುಖರಾಗಿ ವಿಶೇಷ ತಂಡ ರಚನೆ ಮಾಡಿಕೊಂಡು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.

Articles You Might Like

Share This Article