PayCM ಅಭಿಯಾನ ರಾಜ್ಯದ ಜನರಿಗೆ ಮಾಡಿದ ಅವಮಾನ : ಅರುಣ್ ಸಿಂಗ್

Social Share

ಬೆಂಗಳೂರು,ಸೆ.28 – ಪೇಸಿಎಂ ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷ ಸಮಗ್ರ ಕರ್ನಾಟಕದ ಜನರಿಗೆ ಅವಮಾನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣತನ ಹೊಂದಿದೆ. ಅವರ ಈ ಸಣ್ಣತನವನ್ನು ಜನರು ಕ್ಷಮಿಸುವುದಿಲ್ಲ. ಈ ಧೋರಣೆಗೆ ಬಡಜನರು, ರೈತರು ಸೇರಿದಂತೆ ಎಲ್ಲ ಮತದಾರರು ಸಮರ್ಥ ಉತ್ತರ ಕೊಟ್ಟು
ಆ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷಗೊಳಿಸಲಿದ್ದಾರೆ ಎಂದರು.

ಬಸವರಾಜ ಬೊಮ್ಮಾಯಿಯವರ ಸರಕಾರವು ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಹೆಚ್ಚುವರಿ ನಿಧಿ, ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಕೊಡುತ್ತಿದೆ. ಎಸ್‍ಸಿ, ಎಸ್‍ಟಿ ವರ್ಗಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಜನಸಾಮಾನ್ಯರ ಸರಕಾರ ಇಲ್ಲಿದೆ. ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಎಸ್‍ಸಿ ಹಾಸ್ಟೆಲ್ ಖರೀದಿ ಹಗರಣ, ಪಡಿತರದಲ್ಲೂ ಹಗರಣ, ಅರ್ಜಿ ಹಾಕದ ವ್ಯಕ್ತಿಯನ್ನು ಶಿಕ್ಷಕರನ್ನಾಗಿ ನೇಮಕ ಮಾಡಿದ್ದು, ಪೊಲೀಸರ ನೇಮಕಾತಿಯಲ್ಲೂ ಹಗರಣಗಳು ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲಿ ನಡೆದಿವೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿಯಂತಿದೆ. ಭ್ರಷ್ಟರ ಪಕ್ಷವಾದ ಕಾಂಗ್ರೆಸ್, ಸಜ್ಜನ, ಅತ್ಯುತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿಯವರ ಹೆಸರನ್ನು ಹಾಳು ಮಾಡಲು ವ್ಯರ್ಥ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.

ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು. ಗೋವಾದಲ್ಲೂ 8 ಶಾಸಕರು ಪಕ್ಷ ತೊರೆದರು. ರಾಜಸ್ಥಾನದಲ್ಲೂ ಕಾಂಗ್ರೆಸ್ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲೂ ಎರಡು ಮುಖಂಡರ ನಡುವೆ ಭಿನ್ನಮತ ಭುಗಿಲೇಳಲಿದೆ. ನೀವು ನೋಡುತ್ತಿರಿ ಎಂದು ತಿಳಿಸಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಒಂದೆಡೆ ನಡೆದಿದೆ. ಇನ್ನೊಂದೆಡೆ ¾ಕಾಂಗ್ರೆಸ್ ಚೋಡೋ¿ ಮುಂದುವರಿದಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಜಗಳ ಮುಂದುವರಿಯಲಿದೆ ಎಂದರು.

ದೇಶಾದ್ಯಂತ ಗಲಭೆ, ದಂಗೆ ಕಾರ್ಯದಲ್ಲಿ ಪಿಎಫ್‍ಐ ನಿರತವಾಗಿತ್ತು. ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಒಳಗೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣ ಪಡೆಯುತ್ತಿದ್ದ ಈ ಸಂಸ್ಥೆಯನ್ನು ನಿಷೇಧಿಸಿದ್ದು, ಅತ್ಯಂತ ಉತ್ತಮ ನಿರ್ಧಾರ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.

ರಾಜಸ್ಥಾನದಲ್ಲೂ ಹಲವು ಜಿಲ್ಲೆಗಳಲ್ಲಿ ನಡೆದ ದಂಗೆ, ಗಲಭೆಗಳಲ್ಲಿ ಪಿಎಫ್‍ಐ ಒಳಗೊಂಡಿತ್ತು. ಕರೋಲಿ, ಜೋಧಪುರ, ಉದಯಪುರ ಜಿಲ್ಲೆಗಳಲ್ಲಿ ಈ ಗಲಭೆಗಳು, ಹಿಂದೂಗಳ ಹತ್ಯೆಗಳು ಆಗಿದ್ದವು ಎಂದ ಅವರು, ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಯೋಜಿತ ರೀತಿಯಲ್ಲಿ ಹಿಂದೂಗಳ ಹತ್ಯೆಗಳು ಆಗಿದ್ದವು. ದೇಶವನ್ನು ಅಖಂಡವಾಗಿಡಲು ಪಿಎಫ್‍ಐ ನಿಷೇಧ ಅನಿವಾರ್ಯವಾಗಿತ್ತು ಎಂದರು.

ರಾಜಸ್ಥಾನ, ಹೈದರಾಬಾದ್, ಕರ್ನಾಟಕದ ವಿವಿಧೆಡೆ ನಡೆದ ಹಿಂದೂಗಳ ಹತ್ಯೆಯಲ್ಲಿ ಪಿಎಫ್‍ಐ ಕೈವಾಡ ಮತ್ತು ಷಡ್ಯಂತ್ರ ಇದೆ ಎಂಬುದು ಪತ್ತೆಯಾಗಿತ್ತು. ಹಲವು ರಾಜ್ಯಗಳಲ್ಲಿ ಇಂಥ ಹಿಂಸಾಚಾರ ನಡೆದ ಕಾರಣ ಎನ್‍ಐಎ ಈ ದಾಳಿ ನಡೆಸಿದೆ ಎಂದು ವಿವರಿಸಿದರು.

Articles You Might Like

Share This Article