ಬೆಂಗಳೂರು,ಫೆ.22- ಮೆಜೆಸ್ಟಿಕ್ ಸುತ್ತಮುತ್ತ ಮತ್ತೆ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ. ಫ್ರೀಡಂ ಪಾರ್ಕ್ ಬಳಿ ನಿರ್ಮಿಸಿರುವ 550 ಕಾರು ಮತ್ತು 450 ದ್ವಿಚಕ್ರ ವಾಹನಗಳ ನಿಲುಗಡೆ ಸಾಮಥ್ರ್ಯದ ಬಹುಮಹಡಿ ಪಾರ್ಕಿಂಗ್ ಲಾಟ್ ಹೊಣೆಗಾರಿಕೆ ನಿರ್ವಹಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಮತ್ತೆ ಮೆಜೆಸ್ಟಿಕ್, ಗಾಂಧಿನಗರ, ಫ್ರೀಡಂಪಾರ್ಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಪೇ ಅಂಡ್ ಪಾರ್ಕ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ.
ಮೆಜೆಸ್ಟಿಕ್ ಸುತ್ತಮುತ್ತಲ ಟ್ರಾಫಿಕ್ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯವರು 79 ಕೋಟಿ ರೂ.ವೆಚ್ಚದಲ್ಲಿ ಫ್ರೀಡಂಪಾರ್ಕ್‍ನಲ್ಲಿ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಿದ್ದಾರೆ. ಈ ಪಾರ್ಕಿಂಗ್ ಲಾಟ್‍ನಿಂದ ಪ್ರತಿವರ್ಷ 4.5 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿತ್ತು. ಇದಕ್ಕಾಗಿ ಪಾರ್ಕಿಂಗ್ ಲಾಟ್‍ನ ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು.
ಕಳೆದ ಒಂದು ತಿಂಗಳ ಹಿಂದೆ ಟೆಂಡರ್ ಆಹ್ವಾನಿಸಿದ್ದರೂ ಇದುವರೆಗೂ ಯಾವೊಬ್ಬ ಗುತ್ತಿಗೆದಾರರರು ಟೆಂಡರ್ ಹಾಕಿಲ್ಲ. ಕಾರಣ ಕೇಳಿದರೆ, ಮೆಜೆಸ್ಟಿಕ್ ಸುತ್ತಮುತ್ತ ಪ್ರದೇಶಗಳ ರಸ್ತೆಗಳಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ತೆ ಇದೆ. ಹೀಗಾಗಿ ಪಾರ್ಕಿಂಗ್ ಲಾಟ್‍ಗೆ ವಾಹನ ನಿಲ್ಲಿಸಲು ಬರುವವರ ಸಂಖ್ಯೆ ಕಡಿಮೆ. ಇಂತಹ ಸಂದರ್ಭದಲ್ಲಿ ನಾವು ಲಕ್ಷಾಂತರ ರೂ. ವ್ಯಯಿಸಿ ಪಾರ್ಕಿಂಗ್ ಲಾಟ್ ನಿರ್ವಹಣೆ ವಹಿಸಿಕೊಂಡರೆ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಗುತ್ತಿಗೆದಾರರ ಅಳಲಾಗಿದೆ.
ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಕೋಟ್ಯಂತರ ರೂ. ಖರ್ಚು ಮಾಡಿ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಿದರೂ ಅದರ ನಿರ್ವಹಣೆಗೆ ಗುತ್ತಿಗೆದಾರರು ಮುಂದೆ ಬಾರದಿರುವ ಹಿನ್ನಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಮತ್ತೆ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
