ಪೀಣ್ಯ-ನಂದಿನಿ ಬಡಾವಣೆ ಸಂಪರ್ಕ ಕೆಳಸೇತುವೆಗೆ ಗ್ರಹಣ : ಬಿಡಿಎ ಮೊಂಡುತನಕ್ಕೆ ಜನ ಹೈರಾಣ

Social Share

ನಿನ್ನೆ ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಿದೆ. ಆದರೆ, ಹೊರ ವರ್ತುಲ ರಸ್ತೆಗೆ ಅಡ್ಡಲಾಗಿ ಕಂಠೀರವ ಸ್ಟುಡಿಯೋ ಬಳಿ ನಂದಿನಿ ಬಡಾವಣೆಯಿಂದ ಪೀಣ್ಯಗೆ ಸಂಪರ್ಕ ಕಲ್ಪಿಸುವ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ಹಿಡಿದಿರುವ ಗ್ರಹಣ 10 ವರ್ಷವಾದರೂ ಬಿಟ್ಟಿಲ್ಲ. ಮುಂದೆ ಬಿಡುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಕಂಠೀರವ ಸ್ಟುಡಿಯೋ ಮುಂಭಾಗದ ಮೇಲ್ಸೇತುವೆ ಕೆಳಭಾಗದಿಂದ ನಂದಿನಿ ಬಡಾವಣೆಯಿಂದ ಪೀಣ್ಯ ಕಡೆ ಸಾಗುವ ವಾಹನಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕಳೆದ 2012ರಲ್ಲಿ ಆರಂಭಿಸಿದ್ದ ಕಾಮಗಾರಿಗೆ ಇನ್ನು ಮುಕ್ತಿ ದೊರೆತಿಲ್ಲ. ಕಾಮಗಾರಿ ಸ್ಥಗಿತಕ್ಕೆ ಬಿಡಿಎ ಅಧಿಕಾರಿಗಳ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

ಯೋಜನೆಗಾಗಿ ಮನೆ, ಮಠ, ಆಸ್ತಿ ಬಿಟ್ಟು ಕೊಟ್ಟ ಸಂತ್ರಸ್ತರಿಗೆ ನೀಡಬೇಕಾದ ನ್ಯಾಯ ಸಮ್ಮತ ಪರಿಹಾರ ನೀಡದೆ ಸತಾಯಿಸುತ್ತಿರುವ ಬಿಡಿಎ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ಸಮಸ್ಯೆ ಬಗೆಹರಿಯುವವರೆಗೆ ಕಾಮಗಾರಿ ಆರಂಭಗೊಳ್ಳುವ ಮುನ್ಸೂಚನೆಯೂ ಕಾಣುತ್ತಿಲ್ಲ. ಡಿ.ವಿ.ಸದಾನಂದಗೌಡ ಅವರು ಸಿಎಂ ಆಗಿದ್ದಾಗ ಈ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು.

2013 -14ರಲ್ಲಿ ಕಾಮಗಾರಿಗಾಗಿ 18 ಕೋಟಿ ಅನುದಾನ ಕೂಡ ಬಿಡುಗಡೆ ಮಾಡಲಾಗಿತ್ತು. ಕುಂಟುತ್ತ ಸಾಗುತ್ತಿದ್ದ ಕಾಮಗಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಬಿಡಿಎ ಅಕಾರಿಗಳಿಗೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರೂ ಬಿಡಿಎ ಅಧಿಕಾರಿಗಳ ಊದಾಸೀನದಿಂದಾಗಿ ಯೋಜನೆ ಅರ್ಧಕ್ಕೆ ನಿಲ್ಲಿಸುವಂತಾಗಿದೆ.

ಸಮಸ್ಯೆ ಏನು?
ಹೊರವರ್ತುಲ ರಸ್ತೆಗೆ ಅಡ್ಡಲಾಗಿ ಕೆಳ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಆ ಭಾಗದ ಸುಮಾರು 45 ಕುಟುಂಬಗಳು ತಮ್ಮ ಮನೆ ಮಠ, ಆಸ್ತಿ ಬಿಟ್ಟುಕೊಟ್ಟಿದ್ದರು. ಅಭಿವೃದ್ಧಿ ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟ ಸಂತ್ರಸ್ತರಿಗೆ ಶೇ.50ರಷ್ಟು ನಗದು ಹಾಗೂ ಶೇ.50 ರಷ್ಟು ಬದಲಿ ನಿವೇಶನ ನೀಡಲು ಬಿಡಿಎ ತೀರ್ಮಾನಿಸಿತ್ತು.

ಕೊಟ್ಟ ಮಾತಿನಂತೆ ಬಿಡಿಎ ಅಧಿಕಾರಿಗಳು ಸಂತ್ರಸ್ತರಿಗೆ ಪರಿಹಾರ ನೀಡಿದ್ದರೆ ಸಮಸ್ಯೆಯೇ ಎದುರಾಗುತ್ತಿರಲಿಲ್ಲ. ತಮ್ಮ ಆಸ್ತಿ ಬಿಟ್ಟುಕೊಟ್ಟ ಸಂತ್ರಸ್ತರಿಗೆ ಮಾತ್ರ ಬಿಡಿಎ ಅಕಾರಿಗಳು ಪರಿಹಾರ ನೀಡದೆ ಸಬೂಬು ಹೇಳಿಕೊಂಡೆ ಕಾಲಹರಣ ಮಾಡಿದ ಪರಿಣಾಮವೇ ಯೋಜನೆ ಹಳ್ಳ ಹಿಡಿಯುವಂತಾಗಿದೆ. ಮನೆ ಮಠ ಕಳೆದುಕೊಂಡು ಬೀದಿ ಪಾಲಾದ ಸಂತ್ರಸ್ಥರು ಪರಿಹಾರಕ್ಕಾಗಿ ಪ್ರತಿಭಟನೆ ಹಾದಿ ಹಿಡಿದರೂ ಬಿಡಿಎ ಅಧಿಕಾರಿಗಳು ಮಾತ್ರ ಜಪ್ಪಯ್ಯ ಎನ್ನಲಿಲ್ಲ.

ಬಿಡಿಎಯವರ ಈ ಮೊಂಡುತನದ ವಿರುದ್ಧ ಸುಮಾರು 4 ಕೋಟಿ ರೂ. ಪರಿಹಾರ ಬರಬೇಕಿದ್ದ ನರಸಿಂಹಲು ಬಡಾವಣೆಯ ನಿವಾಸಿ ಮಂಗಳ ಎಂಬುವರು ಬಿಡಿಎ ಕಚೇರಿಗೆ 400ಕ್ಕೂ ಹೆಚ್ಚು ಬಾರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ಬಿಡಿಎ ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೂ ತಣ್ಣಗೆ ಕುಳಿತಿದ್ದ ಬಿಡಿಎ ಅಧಿಕಾರಿಗಳ ಮನಸ್ಸು ಮಾತ್ರ ಕರಗಲೇ ಇಲ್ಲ.

ಆ ಸಂದರ್ಭದಲ್ಲಿ ಶಾಸಕರಾಗಿದ್ದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಧರಣಿ ನಡೆಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿ ಕೈ ತೊಳೆದುಕೊಳ್ಳಲಾಗಿತ್ತು. ಇದೀಗ ಗೋಪಾಲಯ್ಯ ಅವರೇ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಆದರೂ ಸಮಸ್ಯೆ ಯಾಕೆ ನಿವಾರಣೆಯಾಗುತ್ತಿಲ್ಲ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

7ನೇ ವೇತನ ಆಯೋಗ ರಚನೆ, ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ

ಕಾರಣವೇನು?
ಯೋಜನೆಗಾಗಿ ಭೂಮಿ ಬಿಟ್ಟುಕೊಟ್ಟವರಿಗೆ 2013ರಲ್ಲಿ ಪರಿಹಾರ ಧನ ನಿಗದಿ ಮಾಡಲಾಗಿತ್ತು. ಯಾವುದೇ ಪರಿಹಾರ ಸಕಾಲಕ್ಕೆ ಸಂತ್ರಸ್ತರ ಕೈ ಸೇರದಿದ್ದರೆ ವಾರ್ಷಿಕ ಶೇ.12ರ ಬಡ್ಡಿ ಸೇರಿಸಿ ಹಣ ಬಿಡುಗಡೆ ಮಾಡಬೇಕು ಎಂಬ ಕಾನೂನಿದೆ. ಶೇ.50ರಷ್ಟು ನಗದು ಹಾಗೂ ಶೇ.50 ರಷ್ಟು ಬದಲಿ ನಿವೇಶನ ರೂಪದಲ್ಲಿ ಬಿಡಿಎ ನೀಡಬೇಕಾದ ಪರಿಹಾರ ಇದುವರೆಗೂ ಯಾವ ಸಂತ್ರಸ್ಥರಿಗೂ ಸಿಕ್ಕಿಲ್ಲ. ಹೀಗಾಗಿ ಬಿಡಿಎ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರಕ್ಕೆ ಬಡ್ಡಿ ಸೇರಿಸಿ ನೀಡಬೇಕಿದೆ. ಆದರೆ, ಇದೀಗ ಉಲ್ಟಾ ಹೊಡೆದಿರುವ ಬಿಡಿಎ ಅಧಿಕಾರಿಗಳೂ ನಾವು ಈ ಹಿಂದೆ ನಿಗದಿಪಡಿಸಿದ್ದ ಪರಿಹಾರ ನೀಡಲು ಸಾಧ್ಯವಿಲ್ಲ.ಇನ್ನು ಕಡಿಮೆ ಹಣ ನೀಡುತ್ತೇವೆ ಎಂದು ತಗಾದೆ ತೆಗೆದಿರುವುದೇ ಯೋಜನೆ ತ್ರಿಶಂಕು ಸ್ಥಿತಿ ತಲುಪಲು ಕಾರಣವಾಗಿರುವುದು.

2013ರಲ್ಲಿ ಒಬ್ಬ ಸಂತ್ರಸ್ತರಿಗೆ 1.88 ಕೋಟಿ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅವರಿಗೆ ಈವರೆಗೆ ಯಾವುದೆ ಪರಿಹಾರ ಬಂದಿಲ್ಲ. ಈಗ ಅವರಿಗೆ ಪರಿಹಾರ ನೀಡಬೇಕಾದರೆ ಕಾನೂನಿನ ಪ್ರಕಾರ ವಾರ್ಷಿಕ ಶೇ.12ರ ಬಡ್ಡಿ ಸೇರಿಸಿದರೆ ಅವರಿಗೆ ಬರಬೇಕಾದ ಮೊತ್ತ 3.30 ಕೋಟಿ ರೂ.ಗಳಾಗುತ್ತದೆ.

ಆದರೆ, ಇದಕ್ಕೆ ಒಪ್ಪದ ಬಿಡಿಎ ಅಧಿಕಾರಿಗಳು ನಾವು 1.88 ಕೋಟಿ ರೂ.ಪರಿಹಾರ ನೀಡಲು ಸಾಧ್ಯವಿಲ್ಲ. ಕೇವಲ 1.30 ಕೋಟಿ ಮಾತ್ರ ನೀಡಲು ಸಿದ್ಧರಿದ್ದೇವೆ ಎಂದು ತಿಪ್ಪೆ ಸಾರಿಸುತ್ತಿರುವುದರಿಂದ ರೋಸಿ ಹೋಗಿರುವ ಸಂತ್ರಸ್ಥರು ನಮಗೆ ಸಿಗಬೇಕಾದ ನ್ಯಾಯಸಮ್ಮತ ಪರಿಹಾರ ದೊರೆಯುವವರೆಗೆ ಯೋಜನೆ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕೋರ್ಟ್ ಮೆಟ್ಟಿಲೇರಲು ಸಿದ್ದ
ಈ ಯೋಜನೆಗಾಗಿ ಸರಿಸುಮಾರು 45ಕ್ಕೂ ಹೆಚ್ಚು ಕುಟುಂಬಗಳು ಮನೆ ಮಠ ಕಳೆದುಕೊಂಡು ಪರಿಹಾರ ಈಗ ಬರಬಹುದು ನಾಳೆ ಬರಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ನಮ್ಮ ತಾಳ್ಮೆಗೂ ಒಂದು ಮಿತಿಯಿಂದೆ. ಈಗಲೂ ಬಿಡಿಎ ಅಧಿಕಾರಿಗಳು ತಮ್ಮ ಧೋರಣೆ ಬದಲಿಸಿ ನಮಗೆ ಸಿಗಬೇಕಾದ ನ್ಯಾಯ ಸಮ್ಮತ ಪರಿಹಾರ ನೀಡದಿದ್ದರೆ ನಾವು ಹೈಕೋರ್ಟ್ ಮೆಟ್ಟೀಲೇರಲು ಸಿದ್ಧರಿದ್ದೇವೆ ಎಂದು ಕಾರ್ತಿಕ್ ಎಚ್ಚರಿಸಿದ್ದಾರೆ.

ಸರ್ಕಾರ ಗಮನಹರಿಸಲಿ
2012ರಲ್ಲಿ ಘೋಷಣೆಯಾದ ಕೆಳಸೇತುವೆ ನಿರ್ಮಾಣ ಕಾಮಗಾರಿ ಅರ್ಧಂಬರ್ಧಕ್ಕೆ ನಿಂತು ಹಲವಾರು ವರ್ಷಗಳೇ ಕಳೆದಿವೆ. ಈಗಾಗಲೇ ಯೋಜನೆಗಾಗಿ ಸುಮಾರು 40 ಕೋಟಿ ರೂ.ಹಣ ವ್ಯಯಿಸಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವ ಬದಲು ಸರ್ಕಾರದವರು ಯೋಜನೆಗಾಗಿ ಮನೆ ಮಠ ಕಳೆದುಕೊಂಡಿರುವವರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಿ ಕೊಟ್ಟು ಆದಷ್ಟು ಬೇಗ ಯೋಜನೆ ಜಾರಿಗೊಳಿಸಿದರೆ ನಂದಿನಿ ಬಡಾವಣೆಯಿಂದ ಪೀಣ್ಯ ಕಡೆಗೆ ಸಂಚರಿಸುವ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಈಗಲಾದರೂ ಸರ್ಕಾರ ಬಿಡಿಎ ಅಧಿಕಾರಿಗಳ ಕಿವಿ ಹಿಂಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡು ಹಳ್ಳ ಹಿಡಿದಿರುವ ಯೋಜನೆಗೆ ಚಾಲನೆ ನೀಡಬೇಕು ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.

ಸಚಿವ ಸಂಪುಟ ಸೇರಲು ಶಾಸಕರು ಹಿಂದೇಟು

ಸಂತ್ರಸ್ತರ ಆಕ್ರೋಶ
ಸಾರ್, ನಾವು ಯೋಜನೆಗೆ ಬಿಟ್ಟುಕೊಟ್ಟ ನಮ್ಮ ಜಾಗದ ಲ್ಯಾಂಡ್ ವ್ಯಾಲ್ಯೂ ಈಗ ಹೆಚ್ಚಾಗಿದೆ. ಇದರ ಜೊತೆಗೆ ಎಸ್.ಆರ್ ರೇಟ್‍ಕೂಡ ಏರಿಕೆಯಾಗಿದೆ. ಹೀಗಿದ್ದರೂ ನಮಗೆ ಹಳೆ ದರದಲ್ಲೇ ಪರಿಹಾರ ನೀಡುತ್ತೇವೆ. ಅದರಲ್ಲೂ ಈ ಹಿಂದೆ ಘೋಷಣೆ ಮಾಡಿದ್ದ ದರಕ್ಕಿಂತ ಕಡಿಮೆ ಪರಿಹಾರ ನೀಡುತ್ತೇವೆ ಎನ್ನುವುದು ಯಾವ ನ್ಯಾಯ ಸಾರ್ ಎಂದು ಈ ಹಿಂದೆ ಪರಿಹಾರ ಸಿಗದೆ ಆತ್ಯಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿರುವ ಮಂಗಳಮ್ಮ ಅವರ ಪುತ್ರ ಕಾರ್ತಿಕ್ ಪ್ರಶ್ನಿಸಿದ್ದಾರೆ.

ಜನರಿಗೆ ಉಪಯೋಗವಾಗುವ ಯೋಜನೆಗೆ ನಾವು ಯಾವುದೇ ಕಾರಣಕ್ಕೂ ಅಡ್ಡಿಪಡಿಸುವುದಿಲ್ಲ. ನಮಗೆ ಸಿಗಬೇಕಾದ ನ್ಯಾಯ ಸಮ್ಮತ ಪರಿಹಾರ ನೀಡಿದರೆ ನಾವು ಈಗಲೂ ನಮ್ಮ ಜಾಗ ಬಿಟ್ಟುಕೊಡಲು ತಯಾರಿದ್ದೇವೆ. ಆದರೂ ಬಿಡಿಎಯವರು ಪರಿಹಾರವನ್ನು ನೀಡುತ್ತಿಲ್ಲ. ಯೋಜನೆಯನ್ನು ಆರಂಭಿಸುತ್ತಲೂ ಇಲ್ಲ ಇದ್ಯಾವ ನ್ಯಾಯ ಸಾರ್ ಎಂದು ಕಾರ್ತಿಕ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Articles You Might Like

Share This Article