ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ : ಪೇಜಾವರ ಶ್ರೀ ಸಂತಸ

Spread the love

ಹಾಸನ, ಮೇ 20- ಮತಾಂತರ ನಿಷೇಧ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದು ಸಂತಸ ತಂದಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ-ಮನೆಗಳಲ್ಲಿ ಅವಾಂತರವನ್ನು ಎಬ್ಬಿಸುತ್ತ ಇತ್ತು; ಅನೇಕ ಮನೆಗಳಲ್ಲಿ ಗಂಡ ಹೆಂಡತಿಯರನ್ನು ಬೇರ್ಪಡಿಸುವಂತಹ ಕೆಟ್ಟ ಕಾರ್ಯ ಮತಾಂತರದಿಂದ ನಡೆಯುತ್ತಿದ್ದು ಮನೆಯೊಳಗೆ ಮಕ್ಕಳು ಬೇರೆ ಅಪ್ಪ ಅಮ್ಮಂದಿರೇ ಬೇರೆ ಆಗುತ್ತಿದ್ದರು ಎಂದರು.

ಕುಟುಂಬದಲ್ಲಿ ಅವರ ಒಳಗೆ ವೈಮನಸ್ಸು ತರುವಂತಹ ಕಾರ್ಯಗಳು ನಡೆಯುತ್ತಿದೆ. ಸರ್ಕಾರದ ಇಂತಹ ನಿರ್ಧಾರದಿಂದ ಮತಾಂತರ ದಂತಹ ಹಾವಳಿಯನ್ನು ದೂರ ಮಾಡುವುದಕ್ಕೆ ಅನುಕೂಲವಾಗುವಂತೆ ಕಾಯ್ದೆ ತಂದಿದ್ದು ಅದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಪಠ್ಯಪುಸ್ತಕಗಳಲ್ಲಿ ಹೊಸ ವಿಷಯಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕಾಲಕಾಲಕ್ಕೆ ಹೊಸ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸು ವಂತಹುದು ತಪ್ಪಲ್ಲ; ಭಗತ್ ಸಿಂಗ್ ವಿಚಾರವನ್ನು ತೆಗೆದುಹಾಕಿಲ್ಲ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಭಗತ್ ಸಿಂಗ್ ವಿಚಾರವಾಗಿ ಹೊಸ ಭಾಗವನ್ನು ಸೇರ್ಪಡೆಗೊಳಿಸಿದೆ ಎಂದು ಸಚಿವರೇ ಸ್ಪಷ್ಟನೆ ನೀಡಿದ್ದಾರೆ . ಸುಮ್ಮನೆ ಸಮಾಜದಲ್ಲಿ ಗುಲ್ಲಾಬ್ಬಿಸುವಂತಹ ಕೆಲಸ ಒಳ್ಳೆಯದಲ್ಲ ಎಂದು ಶ್ರೀಗಳು ನುಡಿದರು.

ದೇಶದ ಮಸೀದಿಗಳಲ್ಲಿ ಶಿವಲಿಂಗ ಪತ್ತೆ ಹಾಗೂ ಶ್ರೀರಂಗಪಟ್ಟಣ ಮಸೀದಿ ವಿವಾದ ವಿಚಾರವಾಗಿ ಮಾತನಾಡಿದ ಅವರು ಈಗಿನವರು ಯಾರು ಅಂತಹ ಕೆಲಸ ಮಾಡಿದ್ದಲ್ಲ. ಇಂದಿನ ಕಾಲದಲ್ಲಿ ಮಸೀದಿಗಳನ್ನು ನಿರ್ಮಿಸಲಾಗಿದೆ . ಮಸೀದಿಯ ಒಳಗೆ ಶಿವಲಿಂಗ ದೊರೆತಿದ್ದರೆ ಇದರ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಬಂದರೆ ಮಂದಿರ ಅಂತ ಒಪ್ಪಿಕೊಳ್ಳಬೇಕು ನಾವು ತೀರ್ಪನ್ನು ಸ್ವೀಕಾರ ಮಾಡಬೇಕು ಎಂದ ಅವರು ತೀರ್ಪು ಬಂದ ನಂತರ ಆ ಸಮಾಜ ಅದನ್ನು ಬಿಟ್ಟುಕೊಡಬೇಕು ಎಂದು ಸ್ಪಷ್ಟಪಡಿಸಿದರು.

ಶ್ರೀರಂಗಪಟ್ಟಣ ಒಂದೇ ಅಲ್ಲ ಎಲ್ಲಾಲ್ಲಿ ಇಂತಹುದು ನಡೆದಿದೆಯೋ ಯಾರದ್ದು ತಪ್ಪಿನಿಂದ ಆಗಿದೆ. ಯಾರಿಂದಲೇ ಆದರೂ ಅದನ್ನು ಒಪ್ಪಿಕೊಳ್ಳಬೇಕು ಸಮಾಜದ ಸಾಮರಸ್ಯವನ್ನು ಕಾಪಾಡುವುದು ಒಳ್ಳೆಯದು. ಯಾವುದೇ ಅತಿ ಕ್ರಮಗಳನ್ನು ದೂರಮಾಡಿ ಸಹಜ ಸ್ಥಿತಿಗೆ ತರುವುದು ಉತ್ತಮ ಬೆಳವಣಿಗೆ ಎಂದರು.

ಯಾವುದೇ ಮಂದಿರವನ್ನು ಖರೀದಿಸಿ ಮಾರ್ಪಾಡು ಗೊಳಿಸಿದ್ದರೆ ಅದು ತಪ್ಪಲ್ಲ ಆದರೆ ಅತಿಕ್ರಮಣ ಮಾಡಿ ಮಾರ್ಪಾಡು ಮಾಡಿರುವುದನ್ನು ಒಪ್ಪುವಂತಹದ್ದಲ್ಲ ಹಾಗಾಗಿ ಅದು ಬದಲಾಗಬೇಕು ; ಇಂದಿನ ಸ್ಥಿತಿಯ ರೀತಿ ಅದು ಆಗಬೇಕು. ಮಂದಿರವನ್ನು ಮಂದಿರ ವನ್ನಾಗಿ ಉಳಿಸಬೇಕು ಮತ್ತು ಈ ರೀತಿ ನಡೆದಿರುವಂತಹ ಸ್ಥಳಗಳ ಸತ್ಯ ಆವಿಷ್ಕಾರ ಗೊಳ್ಳುವುದು ಒಳ್ಳೆಯ ಬೆಳವಣಿಗೆ ಎಂದು ಶ್ರೀಗಳು ನುಡಿದರು.

Facebook Comments