ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಪೀಪಲ್ ಫಾರ್ ಇಂಡಿಯಾ ಸಹಕಾರ

ಮಾಲೂರು, ಮೇ 23- ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ನಮ್ಮ ಸಂಸ್ಥೆಯಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಲಹೆ ಮೇರೆಗೆ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಣ ಇಲಾಖೆಗೆ ಸಹಕಾರ ನೀಡಲಾಗುವುದು ಎಂದು ಪೀಪಲ್ ಫಾರ್ ಇಂಡಿಯಾ ಪೌಂಡೇಶನ್ ನಿರ್ದೇಶಕ ಪ್ರಶಾಂತ್ ಭೂಷಣ್ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಬಿಆರ್‌ಸಿ  ಸಮನ್ವಯಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 140 ಶಿಕ್ಷಕರ ಕೊರತೆ ಇರುವ ಬಗ್ಗೆ ಶಿಕ್ಷಣಾಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಶಿಕ್ಷಕರ ಕೊರತೆ ನೀಗಿಸಲು ಮೊದಲ ಹಂತದಲ್ಲಿ 30ಕ್ಕೂ ಹೆಚ್ಚು ಶಿಕ್ಷಕರನ್ನು ನಮ್ಮ ಸಂಸ್ಥೆಯಿಂದ ನೇಮಿಸಿ ವೇತನವನ್ನು ನೀಡುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆಗೆ ಸಹಕಾರ ನೀಡಲಾಗುತ್ತದೆ, ಅಲ್ಲದೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲತ್ತುಗಳು ಗ್ರಂಥಾಲಯ, ಕಂಪ್ಯೂಟರ್, ನೋಟ್ ಪುಸ್ತಕ, ಸಮವಸ್ತ್ರ ನೀಡುವ ದೇಶ ಉದ್ದೇಶ ಹೊಂದಲಾಗಿದ್ದು ಈಗಾಗಲೇ ನಮ್ಮ ಸಂಸ್ಥೆಯಿಂದ ಯೋಜನೆಗಳನ್ನು ರೂಪಿಸಲಾಗಿದೆ. ಕಾಪೆರ್ರೇಟ್ ಸಂಸ್ಥೆಗಳು, ಸಮಾಜ ಸೇವಕರು, ದಾನಿಗಳು ಮುಂದೆ ಬಂದು ನಮ್ಮ ಸಂಸ್ಥೆ ಜೊತೆ ಕೈಜೋಡಿಸಿದರೆ ಮತ್ತಷ್ಟು ಶೈಕ್ಷಣಿಕವಾಗಿ ಶಾಲಾ ಮಕ್ಕಳ ಸೇವೆಯನ್ನು ಮಾಡಲು ಅನುಕೂಲಕರವಾಗುತ್ತದೆ ಎಂದರು.

ನಿರುದ್ಯೋಗಿ ಯುವಕ-ಯುವತಿಯರು ಉಚಿತ ವೃತ್ತಿಪರ ಕೋರ್ಸ್ ಕೌಶಲ್ಯವನ್ನು ಕಲಿಯಿರಿ – ಜೀವನವನ್ನು ರೂಪಿಸಿಕೊಳ್ಳಿ ಎಂದು ಯೋಜನೆ ರೂಪಿಸಲಾಗಿದ್ದು, ಪೀಪಲ್ ಫಾರ್ ಇಂಡಿಯಾ ಫೌಂಡೇಶನ್ ಬೆಂಗಳೂರು ತನ್ನ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಮೂಲಕ ಉಚಿತ ವೃತ್ತಿಪರ ತರಬೇತಿಯನ್ನು ಕೊಟ್ಟು ನಿರುದ್ಯೋಗಿಗಳಿಗೆ ಸೂಕ್ತ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ನೆರವಾಗುತ್ತಿದೆ ಎಂದು ತಿಳಿಸಿದರು.

ಬಿಆರ್‌ಸಿ ಸಮನ್ವಯಕಾರಿ ನಂಜುಂಡೇಗೌಡ, ಪೀಪಲ್ ಫಾರ್ ಇಂಡಿಯಾ ಫೌಂಡೇಶನ್ ಸಂತೋಷ್, ಉತ್ತಪ್ಪ, ಮಹೇಶ್ ಬಿ ರಾವ್, ಶಿಕ್ಷಣ ಇಲಾಖೆಯ ಮೋಹನ್ ಕುಮಾರ್ ಇನ್ನಿತರ ಹಾಜರಿದ್ದರು.