ಸಂಗಮ,ಜ.9- ಮೇಕೆದಾಟು ನೀರಿಗಾಗಿ ನಡಿಗೆ ಪಾದಯಾತ್ರೆಗೆ ಜನ ಸಾಗರವೇ ಹರಿದುಬಂದಿತ್ತು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಜನರ ಪಾಲ್ಗೊಳ್ಳುವಿಕೆಗೆ ಕೊರತೆಯಾಗಿರಲಿಲ್ಲ. ಸುಮಾರು 10 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರಲ್ಲಿ ಇತ್ತು. ಆದರೆ ಅದನ್ನು ಮೀರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ದಾರಿಯುದ್ದಕ್ಕೂ ಕಿಕ್ಕಿರಿದು ತುಂಬಿದ್ದರು.
ಪೆÇಲೀಸರಿಂದ ಅಡೆತಡೆಗಳು ಎದುರಾಗಬಹುದು ಎಂಬ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಇಮ್ಮಡಿಯಾಗಿತ್ತು. ದ್ವಿಚಕ್ರ ವಾಹನಗಳಲ್ಲಿ, ಖಾಸಗಿ ವಾಹನಗಳಲ್ಲಿ ಪಾದಯಾತ್ರೆ ಆರಂಭದ ಸಂಗಮ ಕ್ಷೇತ್ರಕ್ಕೆ ದಾಂಗುಡಿ ಇಟ್ಟು ಬಂದರು. ಪೆÇಲೀಸರು ಯಾರನ್ನೂ ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟೂರಾದ ದೊಡ್ಡಹಾಲಹಳ್ಳಿನಿಂದ ಸಂಗಮದವರೆಗೂ ಜನ ಕಿಕ್ಕಿರಿದು ತುಂಬಿದ್ದರು.
# ಬಿಸಲಲ್ಲಿ ಬಸವಳಿದ ನಾಯಕರು:
ನಿಗದಿತ ಕಾರ್ಯಕ್ರಮದಂತೆ ಬೆಳಗ್ಗೆ 8.30ಕ್ಕೆ ಪಾದಯಾತ್ರೆ ಆರಂಭವಾಗಿದ್ದರೆ, ಬಿಸಲು ಏರುವ ಹೊತ್ತಿಗೆ ಮೇಕೆದಾಟು ಅರಣ್ಯ ಪ್ರದೇಶವನ್ನು ದಾಟಿ ಪಾದಯಾತ್ರೆ ಮುಂದೆ ಹೊರಟು ಹೋಗಿತ್ತು. ಆದರೆ ಸಂಗಮದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ್ದರಿಂದ ಸುಮಾರು 11 ಗಂಟೆವರೆಗೂ ಸಮಯ ವ್ಯರ್ಥವಾಯಿತು.
ಬಳಿಕ ಪಾದಯಾತ್ರೆ ಸುಡುಬಿಸಿಲಿನಲ್ಲೇ ಆರಂಭಗೊಂಡಿತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಲ್ಪ ದೂರ ಸಾಂಕೇತಿಕವಾಗಿ ನಡೆದು ನಂತರ ವಾಹನದಲ್ಲಿ ತೆರಳಿದರು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್, ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ನಾಯಕರು ಸುಡು ಬಿಸಿಲಿನಲ್ಲಿ ಮೇಕೆದಾಟು ಮಾರ್ಗದ ಬೆಟ್ಟಗುಡ್ಡಗಳನ್ನು ಹತ್ತಿ ಬೆವರಳಿಸಿದರು. ಬಿಸಿಲಿನ ಕಾವು ಏರುತ್ತಿದ್ದಂತೆ ನಾಯಕರ ಶಕ್ತಿ ಕುಸಿಯಲಾರಂಭಿಸಿತ್ತು. ಆದರೂ ಹಠಕ್ಕೆ ಬಿದ್ದವರಂತೆ ಅಲ್ಲಲ್ಲಿ ಹಣ್ಣಿನರಸ, ನೀರು, ಮಜ್ಜಿಗೆ ಕುಡಿದುಕೊಂಡು ಪಾದಯಾತ್ರೆ ಮುಂದುವರೆಸಿದರು.
