ಭ್ರಷ್ಟಾಚಾರ ಗೆದ್ದಲು ಹುಳು ಇದ್ದಂತೆ, ದೇಶವನ್ನು ಟೊಳ್ಳಾಗಿಸುತ್ತಿದೆ : ಮೋದಿ

Social Share

ನವದೆಹಲಿ,ಜ.30- ಭ್ರಷ್ಟಾಚಾರವು ಒಂದು ಗೆದ್ದಲು ಹುಳದಂತೆ. ಅದು ದೇಶವನ್ನು ಟೊಳ್ಳಾಗಿಸುತ್ತದೆ. ಹೀಗಾಗಿ ಎಲ್ಲ ದೇಶವಾಸಿಗಳು ಒಟ್ಟಿಗೆ ಕೆಲಸ ಮಾಡಿ ಈ ಪಿಡುಗಿನಿಂದ ಸಾಧ್ಯವಾದಷ್ಟು ಬೇಗ ರಾಷ್ಟ್ರವನ್ನು ಮುಕ್ತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ತಮ್ಮ ಮನ್ ಕೀ ಬಾತ್ ರೇಡಿಯೋ ಭಾಷಣ ಮಾಡಿದ ಮೋದಿ, ತಮಗೆ ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದ ಕೂಡ ಒಂದು ಕೋಟಿಗೂ ಅಧಿಕ ಮಕ್ಕಳು ಅವರ ಮನ್ ಕಿ ಬಾತ್‍ನ್ನು ಪೋಸ್ಟ್ ಕಾರ್ಡ್ ಮೂಲಕ ಕಳುಹಿಸಿದ್ದಾರೆ ಎಂದು ತಿಳಿಸಿದರು. ಈ ಪೋಸ್ಟ್ ಕಾರ್ಡ್‍ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ನವ ಪೀಳಿಗೆಯ ವಿಶಾಲ ಮತ್ತು ಸಮಗ್ರ ಮುನ್ನೋಟದ ಹೊಳಹನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
2047ರ ಹೊತ್ತಿಗೆ ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಕಾಣ ಬಯಸುವುದಾಗಿ ತಿಳಿಸಿ ಉತ್ತರಪ್ರದೇಶದ ಬಾಲಕಿಯೊಬ್ಬಳು ಬರೆದ ಪೋಸ್ಟ್‍ಕಾರ್ಡ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ನೀನು ಭ್ರಷ್ಟಾಚಾರದ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದೀಯ. ಭಷ್ಟಾಚಾರ ಒಂದು ಗೆದ್ದಲು ಹುಳು ಇದ್ದ ಹಾಗೆ ಅದು ರಾಷ್ಟ್ರವನ್ನು ಟೊಳ್ಳಾಗಿಸುತ್ತದೆ.
ಅದರಿಂದ ಮುಕ್ತವಾಗಲು 2047ರವರೆಗೆ ಏಕೆ ಕಾಯಬೇಕು? ಇದು ದೇಶದ ಎಲ್ಲ ಜನತೆಯ ಕರ್ತವ್ಯವಾಗಿದೆ. ಇಂದಿನ ಯುವ ಜನತೆ ಇದನ್ನು ಒಟ್ಟಾಗಿ ಮಾಡಬೇಕು. ಇದು ಆದಷ್ಟು ಶೀಘ್ರವಾಗಿ ಆಗಬೇಕಾದ ಕೆಲಸ ಎಂದು ಮೋದಿ ನುಡಿದರು. ದೇಶ ಭ್ರಷ್ಟಾಚಾರ ಮುಕ್ತವಾಗಬೇಕಾದರೆ ನಾವು ನಮ್ಮ ಕರ್ತವ್ಯಗಳಿಗೆ ಅದ್ಯತೆ ನೀಡಬೇಕು ಕರ್ತವ್ಯ ಪ್ರಜ್ಞೆ ಪರಮೋಚ್ಚವಾಗಿದ್ದಾಗ ಭ್ರಷ್ಟಚಾರಕ್ಕೆ ಎಡೆ ಇರುವುದಿಲ್ಲ ಎಂದು ಮೋದಿ ಕಿವಿಮಾತು ಹೇಳಿದರು.
ತಮ್ಮ ರೇಡಿಯೋ ಭಾಷಣದಲ್ಲಿ ಪ್ರಧಾನಿ ಇಂಡಿಯಾ ಗೇಟ್ ಬಳಿ ಇದ್ದ ಅಮರ್ ಜವಾನ್‍ಜ್ಯೋತಿಯನ್ನು ಮತ್ತು ಸಮೀಪದ ರಾಷ್ಟ್ರೀಯ ಯುದ್ದ ಸ್ಮಾರಕದ ಜ್ವಾಲೆಯನ್ನು ವಿಲೀನಗೊಳಿಸಿರುವುದನ್ನು ಪ್ರಸ್ತಾಪಿಸಿದರು. ಈ ಭಾವುಕ ಕ್ಷಣದಲ್ಲಿ ದೇಶವಾಸಿಗಳನೇಕರ ಹಾಗೂ ಹುತಾತ್ಮರ ಕುಟುಂಬದವರು ಕಣ್ಣಾಲಿಗಳು ತುಂಬಿ ಬಂದವು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಯುದ್ಧ ಸ್ಮಾರಕವನ್ನು ಸಂದರ್ಶಿಸುವಂತೆ ಅವರು ಜನತೆಯನ್ನು ಒತ್ತಾಯಿಸಿದರು.

Articles You Might Like

Share This Article